ಅಂಕಣಗಳು

“ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ” ಅಂದರೆ ಎಲ್ಲಿ ನಾರಿಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಇದರರ್ಥ ಹೆಣ್ಣನ್ನು ದೇವರೆಂದು ಭಾವಿಸುವುದು ಎಂದರ್ಥವಲ್ಲ, ಅವಳಿಗೆ ಸಲ್ಲಬೇಕಾದ ಸ್ವಾತಂತ್ರ್ಯ ಮತ್ತು ಗೌರವಗಳನ್ನು ನೀಡುವುದು ಎಂದರ್ಥ.

ಹೌದು ನಾವು ಪ್ರತಿ ವರ್ಷ ಮಾರ್ಚ್ 8ರಂದು ಮಹಿಳೆಯರ ದಿನಾಚರಣೆ ಶುಭಾಶಯಗಳು ತಿಳಿಸುವ ಪರಿಸ್ಥಿಯಲ್ಲಿ ಇದ್ದೆವೆ.ಆದರೆ ನಮ್ಮ ಪ್ರಸ್ತುತ ಸಮಾಜದಲ್ಲಿ ಹೆಣ್ಣಿನ ಶೋಷಣೆ ಎಡೆಬಿಡದೆ ಕಾಡುತ್ತಿದೆ. ಇವುಗಳೆಲ್ಲವನ್ನು ಅಳಿಸಿ ಹಾಕಲು ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ.

ನಮ್ಮ ಭಾರತೀಯ ಸಮಾಜ ಹಲವಾರು ಕಟ್ಟುಪಾಡುಗಳ ಬಿಗಿಮುಷ್ಟಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಆದ್ದರಿಂದ ಮಹಿಳೆಯರಿಗೆ ಶಿಕ್ಷಣ ನೀಡುವುದನ್ನು ಇದು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ಮೂರ್ಖತನವೆಂದು ಭಾವಿಸಲಾಗುತ್ತದೆ. ಮದುವೆ ಮಾಡಿ ಮನೆಯಿಂದ ಸಾಗಹಾಕುವುದೇ ನಮ್ಮ ಜವಾಬ್ದಾರಿ ಎಂದು ತಿಳಿಯಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಒಂದು ಸಾಹಸದ ಕಾರ್ಯದಂತೆ ಗೋಚರಿಸುತ್ತಿದೆ. ಆದರೆ ಇದಕ್ಕಿರುವ ಅಡೆತಡೆಗಳನ್ನು ನಿವಾರಿಸಿದರೆ ಇದು ಸಾಧ್ಯವಾಗುತ್ತದೆ. ಅಂತಹ ಕೆಲವು ಅಡೆತಡೆಗಳನ್ನು ಈ ಕೆಳಗಿನಂತೆ ನೋಡಬಹುದು.

ಮಹಿಳೆಯರಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಇರುವ ಅಡೆತಡೆಗಳು

ಪ್ರಸ್ತುತ ಸಮಾಜದಲ್ಲಿ ಮಹಿಳೆಯರಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ 5 ಪ್ರಮುಖ ಅಡೆತಡೆಗಳನ್ನು ಗುರುತಿಸಲಾಗಿದೆ.

 1. ಶಿಕ್ಷಣದ ವೆಚ್ಚ-: ದಿನೇ ದಿನೇ ಶಾಲಾ ಶಿಕ್ಷಣದ ವೆಚ್ಚ ದುಬಾರಿಯಾಗುತ್ತಿದ್ದು ಹೆಚ್ಚಿನ ತಂದೆ ತಾಯಂದಿರು ತಮ್ಮ ಮಗಳಿಗಾಗಿ ಅದನ್ನು ಭರಿಸಲು ಸಿಧ್ಧರಿಲ್ಲ. ಆದರೆ ಸರ್ಕಾರವು ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಗೆ ತಂದುದರಿಂದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದಲ್ಲಿ ಆಶಾದಾಯಕ ಪ್ರಗತಿ ಸಾಧಿಸಲಾಗಿದೆಯಾದರೂ ಉನ್ನತ ಶಿಕ್ಷಣದಲ್ಲಿ ಇದು ಗಗನಕುಸುಮವಾಗಿದೆ.
 2. ಕೆಳಮಟ್ಟದ ಶಾಲಾ ವಾತಾವರಣ-: ಶಾಲೆಯ ವಾತಾವರಣ ಮಹಿಳೆಯರಿಗೆ ಉತ್ತಮ ಗುಣಮಟ್ಟದ ರಕ್ಷಣಾತ್ಮಕ ವಾತಾವರಣ ನೀಡಲು ವಿಫಲವಾಗಿದೆ. ಕಾರಣ ಇಂದಿಗೂ ಹಲವಾರು ಶಾಲೆಗಳಲ್ಲಿ ಉತ್ತಮ ಶೌಚಾಲಯಗಳ ಕೊರತೆ,ನುರಿತ ಶಿಕ್ಷಕರ ಕೊರತೆ, ಹುಡುಗಿಯರಿಗೆ ಪ್ರೌಢಾವಸ್ಥೆಯ ಬೆಳವಣಿಗೆಯ ಬದಲಾವಣೆ ಕುರಿತು ಸೂಕ್ತ ಕೌನ್ಸಿಲಿಂಗ್ ಇಲ್ಲದಿರುವುದು, ಶಾಲೆಯ ಹೊರಗಡೆ ರೋಡ್ರೋಮಿಯೋಗಳ ಕಾಟ ಇತ್ಯಾದಿ ಸಮಸ್ಯೆಗಳು ಎದ್ದು ಕಾಣುತ್ತಿವೆ ಇದರಿಂದಾಗಿ ಹಲವಾರು ಹೆಣ್ಣು ಮಕ್ಕಳು ತಮ್ಮ ವಿದ್ಯಾಭ್ಯಾಸ ಮುಂದುವರಿಸದೆ ಅರ್ಧಕ್ಕೆ ನಿಲ್ಲಿಸುವಂತಾಗಿದೆ.
 3. ಸಮಾಜದಲ್ಲಿ ಹೆಣ್ಣಿಗೆ ನೀಡಿದ ದುರ್ಬಲ ಸ್ಥಾನ-: ಸಮಾಜದಲ್ಲಿ ಹೆಣ್ಣನ್ನು ಕೇವಲ ಆಜ್ಞಾಪಾಲಕಳಂತೆ ನೋಡಲಾಗುತ್ತಿದೆ. ಬಾಲ್ಯದಲ್ಲಿ ತಂದೆ ಹೇಳಿದಂತೆ,ಮದುವೆಯ ನಂತರ ಗಂಡ ಹೇಳಿದಂತೆ, ವಯಸ್ಸಾದ ನಂತರ ಮಕ್ಕಳು ಹೇಳಿದಂತೆ ನಡೆದುಕೊಳ್ಳುವುದು ಅವಳ ಕೆಲಸ ಎಂದು ಭಾವಿಸಲಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಅವಳ ಆಸೆ ಆಕಾಂಕ್ಷೆ ಮತ್ತು ನಿರ್ಧಾರಗಳಿಗೆ ಬೆಲೆ ಇಲ್ಲದಂತಾಗಿದೆ.
 4. ಶೈಕ್ಷಣಿಕ ಗೊಂದಲಗಳು-: ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಬೇಕೇ ಅಥವಾ ಬೇಡವೇ ಎಂಬುದರಲ್ಲಿ ಬಹಳಷ್ಟು ಗೊಂದಲಗಳಿವೆ, ಅವೆಂದರೆ-
 • ಹೆಣ್ಣು ಮಗುವನ್ನು ಏಕೆ ಶಾಲೆಗೆ ಕಳುಹಿಸಬೇಕು?
 • ಅವಳನ್ನು ಶಾಲೆಗೆ ಕಳುಹಿಸುವುದರಿಂದ ನಮಗೇನು ಲಾಭ?
 • ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಮತ್ತೇಕೆ ಅವಳಿಗೆ ಶಿಕ್ಷಣ?
 • ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಹಣ ಮತ್ತು ಸಮಯ ಎರಡೂ ವ್ಯರ್ಥ.

ಇತ್ಯಾದಿ ಗೊಂದಲಗಳು (ತಪ್ಪು ಗ್ರಹಿಕೆಗಳು) ಹೆಣ್ಣು ಮಕ್ಕಳನ್ನು ಮನೆಯಲ್ಲಿಯೇ ಉಳಿಯುವಂತೆ ಮಾಡಿದೆ.

 1. ಸಾಮಾಜಿಕ ಅಡೆತಡೆಗಳು-: ಸಮಾಜದಲ್ಲಿ ಜಾತೀಯತೆ, ಧಾರ್ಮಿಕ ಕಟ್ಟುಪಾಡು, ಕಂದಾಚಾರಗಳು,ದೈಹಿಕ ಮತ್ತು ಮಾನಸಿಕ ನ್ಯೂನತೆಗಳು ಇತ್ಯಾದಿ ಇವು ಮಹಿಳೆಯರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದೆ.

ಇಂತಹ ಪ್ರಮುಖ ಸವಾಲುಗಳನ್ನು ಎದುರಿಸಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ.

ಮಹಿಳೆಯರಿಗೆ ಕಡಿಮೆ ಗುಣಾತ್ಮಕ ಶಿಕ್ಷಣ ನೀಡುವುದರಿಂದ ಉಂಟಾಗುವ ಪರಿಣಾಮಗಳು

 1. ತಾಯಂದಿರ ಮರಣ ದರದಲ್ಲಿ ಏರಿಕೆ-: ಗರ್ಭಾವಸ್ಥೆಯಲ್ಲಿರುವ ಮಹಿಳೆ ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಎಂಬ ಮಾಹಿತಿ ತಿಳಿಯದೆ ಆರೋಗ್ಯದಲ್ಲಿ ಏರುಪೇರಾಗಿ ಪ್ರಸವದ ಸಮಯದಲ್ಲಿ ತಾಯಿ ಮಗು ಇಬ್ಬರೂ ಸಾವನ್ನಪ್ಪುವ ಸಂಭವವಿರುತ್ತದೆ.
 2. ಪೌಷ್ಟಿಕಾಂಶದ ಕೊರತೆ-: ಮಹಿಳೆಯರು ತಮ್ಮ ಆರೋಗ್ಯದ ದೃಷ್ಟಿಯಿಂದ ಹಲವು ಏರು ಪೇರುಗಳನ್ನು ಅನುಭವಿಸುತ್ತಾರೆ ಆದರೆ ಆ ಸಂದರ್ಭದಲ್ಲಿ ಆ ನ್ಯೂನತೆಗನುಸಾರ ಯಾವ ಆಹಾರ ಸೇವಿಸಬೇಕು, ಆ ಸಮಯದಲ್ಲಿ ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು, ಎಂಬ ಮಾಹಿತಿಯ ಕೊರತೆಯಿಂದ ತುಂಬಾ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.
 3. ಕಡಿಮೆ ಗಳಿಕೆಯ ಸಾಮರ್ಥ್ಯ-: ಮಹಿಳೆಯರು ಹೆಚ್ಚು ಹೆಚ್ಚು ಓದು ಬರಹ ಕಲಿಯದೆ ಇರುವುದರಿಂದ ಕೌಶಲ್ಯಾಧಾರಿತ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಲಾಗದೆ ಕೇವಲ ಸಾಧಾರಣ ಮಟ್ಟದ ಕೆಲಸಗಳಲ್ಲಿ ತೊಡಗಿರುತ್ತಾರೆ. ಇದರಿಂದಾಗಿ ಅವರ ಗಳಿಕೆಯು ಕಡಿಮೆಯಾಗಿರುತ್ತದೆ ಇದರಿಂದಾಗಿ ಕುಟುಂಬದ ಆರ್ಥಿಕ ಮಟ್ಟ ಕುಸಿಯುತ್ತದೆ.
 4. ಅಧಿಕಾರ ರಹಿತ ಕುಟುಂಬ ನಿರ್ವಹಣೆ-: ಅನಕ್ಷರಸ್ಥ/ ಕಡಿಮೆ ಶಿಕ್ಷಣ ಪಡೆದ ಮಹಿಳೆಯರಿರುವ ಕುಟುಂಬದಲ್ಲಿ ಕುಟುಂಬ ನಿರ್ವಹಣೆಯ ಪ್ರತಿಯೊಂದು ತೀರ್ಮಾನವನ್ನು ಪುರುಷರೇ ತೆಗೆದುಕೊಳ್ಳುತ್ತಾರ.ಮಹಿಳೆಯರು ಪುರುಷರು ಹೇಳಿದ ಹಾಗೆ ಕೇಳುವುದು ನಮ್ಮ ಧರ್ಮ ಎಂದು ಭಾವಿಸುತ್ತಾರೆ ಆದ್ದರಿಂದ ಕೆಲವು ವಿಶೇಷ ಸಂದರ್ಭದಲ್ಲಿ ಪುರುಷರಿಲ್ಲದಿರುವಾಗ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗದೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ.

ಮಹಿಳೆಯರಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡುವುದರಿಂದ ಏನಾಗುತ್ತದೆ?

ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ ದೇಶ ಅಥವಾ ರಾಜ್ಯಗಳಲ್ಲಿ ವರಮಾನ, ಆದಾಯ, ಆರೋಗ್ಯ, ಜನಸಂಖ್ಯಾ ನಿಯಂತ್ರಣ, ಬಡತನ ಇತ್ಯಾದಿ ಪಿಡುಗುಗಳು ನಿಯಂತ್ರಣದಲ್ಲಿರುತ್ತವೆ. ಉದಾಹರಣೆಗೆ ಕೇರಳದಲ್ಲಿ ಆಕ ಪ್ರಗತಿ ಅಧಿಕವಾಗಿದೆ ಬಡತನದ ಸಮಸ್ಯೆಯಿಲ್ಲ, ಉದ್ಯೋಗಾವಕಾಶಗಳು ಹೆಚ್ಚಿವೆ, ನುರಿತ ಕುಶಲ ಕೆಲಸಗಾರರ ಲಭ್ಯತೆ ಇದೆ. ಅಲ್ಲದೇ ಈ ಮೇಲಿನ ಅಂಶಗಳು ಇಡೀ ರಾಜ್ಯದ ಪ್ರಗತಿಗೆ ಕಾರಣವಾಗಿವೆ. ಆದರೆ ಬಿಹಾರದಲ್ಲಿ ಇದಕ್ಕೆ ತದ್ವಿರುಧ್ಧವಾದ ವಾತಾವರಣವಿರುವುದನ್ನು ಕಾಣಬಹುದು. ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿದ ರಾಷ್ಟ್ರಗಳಲ್ಲಿ ಹೆಚ್ಚು ಆರೋಗ್ಯವಂತ ಪ್ರಜೆಗಳಿರುವುದನ್ನು ಕಾಣಬಹುದು ಎಂದು ಅಧ್ಯಯನಗಳು ತಿಳಿಸಿವೆ. (ಉದಾಹರಣೆಗೆ ನೇಪಾಲ, ವೆನಿಜುವೆಲಾ ಮತ್ತು ಮೆಕ್ಸಿಕೊ) ಅಲ್ಲದೆ ಮಹಿಳೆಯರ ಫಲವಂತಿಕೆಯಲ್ಲಿಯೂ ಸುಧಾರಣೆಯಾಗಿದೆ ಕಾರಣ ಓದು ಬರಹ ಕಲಿತಿರುವುದರಿಂದ ಹಲವಾರು ಮೂಲಗಳಿಂದ ಹಲವಾರು ವಿಷಯಗಳನ್ನು ತಿಳಿದು ಓದಿ ಅರ್ಥ ಮಾಡಿಕೊಂಡು ಅದರತ್ತ ಸುಲಭವಾಗಿ ಗಮನಹರಿಸುತ್ತಾರೆ. ಅಲ್ಲದೇ ಹಲವು ಸಾಮಾಜಿಕ ಪಿಡುಗುಗಳ ಬಗ್ಗೆ ತಿಳಿದು ಅದರ ನಿರ್ಮೂಲನೆಗೆ ಪ್ರಯತ್ನಿಸುತ್ತಾರೆ ಇದು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಸಹಾಯಕವಾಗಿದೆ. ಅಲ್ಲದೆ ಮಹಿಳೆಯರು ವಿದ್ಯಾವಂತರಾದರೆ ಇಡೀ ಕುಟುಂಬದ ಜೊತೆಗೆ ದೇಶದ ಪ್ರಗತಿ ಸಾದ್ಯವಾಗುತ್ತದೆ.

ಮಹಿಳೆಯರ ಗುಣಾತ್ಮಕ ಶಿಕ್ಷಣಕ್ಕೆ ಬೇಕಾದ ಅಗತ್ಯ ಅಂಶಗಳು.

ಮಹಿಳೆಯರಿಗೆ ಗುಣಾತ್ಮಕ ಶಿಕ್ಷಣ ನೀಡುವುದು ನಮ್ಮ ಉದ್ದೇಶವಾದರೆ ಈ ಕೆಳಗಿನ ಪ್ರಮುಖ ಅಂಶಗಳ ಕಡೆ ಗಮನ ನೀಡುವುದು ಅಗತ್ಯವಾಗಿದೆ.

 1. ಶಾಲೆಗಳು-: ಶಾಲೆಗಳು ಉತ್ತಮ ಕಲಿಕೆಯ ಕೇಂದ್ರಗಳಾಗಿ ಮಹಿಳೆಯರಿಗೆ ಗುಣಾತ್ಮಕ ಶಿಕ್ಷಣ ನೀಡಬೇಕಾದರೆ ಅವು-
 • ಸರಿಯಾದ ಅಂತರದಲ್ಲಿದ್ದು  ಹೆಚ್ಚಿನ ಮಹಿಳೆಯರನ್ನು ಆಕರ್ಷಿಸಿ ಕಲಿಕೆಯತ್ತ ಪ್ರೇರೇಪಿಸುವಂತಿರಬೇಕು.
 • ಹೆಣ್ಣು ಮಗುವಿಗೆ ಅಗತ್ಯವಾದ ಪೂರಕ ಸೌಲಭ್ಯಗಳನ್ನು ಹೊಂದಿರಬೇಕು.
 • ಶಾಲಾ ಪರಿಸರ ಮತ್ತು ಶಾಲೆ ಮತ್ತು ಮನೆಯ ಅಂತರದ ನಡುವೆ ನಾನು ಸುರಕ್ಷಿತ ಎಂಬ ವಾತಾವರಣ ನಿರ್ಮಾಣವಾಗಬೇಕು.
 • ಶಾಲೆ ಸಂತೋಷದಾಯಕ ಪರಿಸರವನ್ನು ಹೊಂದಿರಬೇಕು.
 • ಶಾಲೆಯಲ್ಲಿ ಕರಕುಶಲ ತರಬೇತಿ ನೀಡಬೇಕು.
 1. ಶಿಕ್ಷಕರು-: ಶಿಕ್ಷಕರು ಸದಾ ಮಕ್ಕಳ ಮನಸ್ಸನ್ನು ಸೆಳೆಯಬಹುದಾದ ಪೂರಕ ಚಟುವಟಿಕೆಗಳ ಮೂಲಕ ಜ್ಞಾನವನ್ನು ತುಂಬುವ ಪ್ರಯತ್ನ ಮಾಡಬೇಕು ಮತ್ತು ಅವರನ್ನು ಸದಾ ಸ್ನೇಹಿತರಂತೆ ಕಾಣಬೇಕು. ಅಲ್ಲದೇ ಸಂದರ್ಭಾನುಸಾರ ಅಗತ್ಯ ಮಾರ್ಗದರ್ಶನವನ್ನು ನೀಡಿ ಕಲಿಕೆಯತ್ತ ಪ್ರೇರೇಪಿಸಬೇಕು.
 2. ಕುಟುಂಬ-: ಕುಟುಂಬದ ಸದಸ್ಯರಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವಿರಬೇಕು ಮತ್ತು ಅವರು ಹೆಣ್ಣು ಮಕ್ಕಳನ್ನು ಹೊರೆ ಎಂದು ಭಾವಿಸದೆ ಅವರ ಶಿಕ್ಷಣಕ್ಕಾಗಿ ಅಗತ್ಯ ವೆಚ್ಚವನ್ನು ಭರಿಸಲು ಸಿಧ್ಧರಾಗಬೇಕು. ಜೊತೆಗೆ ದುಶ್ಚಟಗಳಿಗೆ ಬಲಿಯಾಗದೆ ಹಣವನ್ನು ಉಳಿಸಿ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು. ಇದು ಪರೋಕ್ಷವಾಗಿ ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡುತ್ತದೆ.
 3. ಸಮಾಜ-: ಸಮಾಜವು ಮಹಿಳೆಯರಿಗೆ ಉತ್ತಮ ಸ್ಥಾನಮಾನವನ್ನು ನೀಡಿ ಅವಳ ಶಿಕ್ಷಣಕ್ಕೆ ಆದ್ಯತೆ ನೀಡಿ ಅದಕ್ಕಾಗಿ ಹೋರಾಡಬೇಕು. ಮಹಿಳಾ ಶಿಕ್ಷಣದಲ್ಲಿ ಆಸಕ್ತಿ ಇಲ್ಲದ ಕುಟುಂಬಗಳ ಮನವೊಲಿಸಬೇಕು ಮತ್ತು ಅಸಮರ್ಥ ಕುಟುಂಬಗಳಿಗೆ ಸಹಾಯ ಮಾಡಬೇಕು. ಬಾಲ್ಯವಿವಾಹಕ್ಕೆ ಆಸ್ಪದ ನೀಡದಂತೆ ತಡೆಯಬೇಕು.ಬಾಂಗ್ಲಾ ಮತ್ತು ಅಫ್ಘಾನಿಸ್ಥಾನದಲ್ಲಿ ಶೇ 50 ರಷ್ಟು ಬಾಲ್ಯವಿವಾಹಗಳಾಗುವುದನ್ನು ಕಾಣುತ್ತೇವೆ ಮತ್ತು ಅಪ್ರಾಪ್ತ ವಯಸ್ಸಿನಲ್ಲಿಯೇ ಗರ್ಭಧರಿಸಲಾಗುತ್ತದೆ. ಇದು ಶಾಲೆಯನ್ನು ಬಿಡಲು ಕಾರಣವಾಗುತ್ತದೆ. ಅಲ್ಲದೇ ಜಾತಿಯ ಆಧಾರದಲ್ಲಿ ಹೇಳುವುದಾದರೆ ಸಮಾಜವು ಹಲವಾರು ಜಾತಿ ಧರ್ಮಗಳಿಂದ ಕೂಡಿದ್ದು ತನ್ನದೇ ಆದ ಹಲವಾರು ಕಟ್ಟುಪಾಡುಗಳನ್ನು ಹೊಂದಿದ್ದು ಕೆಲವೊಂದು ಧರ್ಮಗಳು ಮಹಿಳಾ ಶಿಕ್ಷಣಕ್ಕೆ ಒತ್ತು ನೀಡುವುದಿಲ್ಲ. ನೇಪಾಳದಲ್ಲಿ ದಲಿತರಲ್ಲದವರಿಗೆ ಹೋಲಿಸಿದರೆ ದಲಿತ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದು ಕಡಿಮೆ ಮಲಯಾದಲ್ಲಿ ಮುಸ್ಲಿಮೇತರರಿಗೆ ಹೋಲಿಸಿದರೆ ಮುಸ್ಲಿಂ ಮಹಿಳೆಯರ ಶಿಕ್ಷಣ ಕಡಿಮೆ ಇದೆ. ಸಮಾಜದ ಈ ಸ್ಥಿತಿ ಬದಲಾಗಬೇಕು.
 1. ಸರ್ಕಾರ–  ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಶಿಕ್ಷಕರಿಗೆ ತರಬೇತಿ ನೀಡಬೇಕು, ತಮ್ಮ ಬಜೆಟ್ಟಿನಲ್ಲಿ ಹೆಚ್ಚಿನ ಅನುದಾನ ನೀಡಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು. ಮಹಿಳಾ ಶಿಕ್ಷಣದ ಮಹತ್ವವನ್ನು ಕುರಿತು ಪ್ರಚಾರಾಂದೋಲನ ಮಾಡಬೇಕು. ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳಿಗೆ ಶಾಲೆಗೆ ಹೋಗಿ ಬರಲು ಉಚಿತ ವಾಹನ ಸೌಲಭ್ಯ ನೀಡಬೇಕು ಮತ್ತು ಶಾಲಾ ಫೀಸನ್ನು ಎಲ್ಲಾ ಹಂತದಿಂದ ತೆಗೆದುಹಾಕಬೇಕು.

ಅಲ್ಲದೆ ಹೆಣ್ಣು ಮಗು ಶಾಲೆಯಿಂದ ಹೊರಗುಳಿಯದಂತೆ ತಡೆಯಲು ಮೊದಲು ಬಡತನ ನಿರ್ಮೂಲನಾ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಬೇಕು. ಶಾಲೆಗೆ ಬರುವಾಗ ಅವಳು ಎದುರಿಸುವ ಸಿಬ್ಲಿಂಗ್ (ಒಡಹುಟ್ಟಿದವರು) ಸಮಸ್ಯೆಗೆ ಅವರನ್ನು ನೋಡಿಕೊಳ್ಳಲು ಅಗತ್ಯ ವಾತಾವರಣ ಅಥವಾ ವ್ಯವಸ್ಥೆ ರೂಪಿಸಬೇಕು. ಒಂದು ವೇಳೆ ಬಡತನದ ವಿಷ ವರ್ತುಲ ಮುಂದುವರೆದಿದ್ದೇ ಆದರೆ ಅವಳು ವೇಶ್ಯಾವಾಟಿಕೆಯ ಬಲೆಗೆ ಬೀಳಬಹುದು ಅದೇ ಸಮಾಜದ ಕೆಟ್ಟ ದೃಷ್ಟಿಗೆ ಬಲಿಯಾಗಬಹುದು ಅದರ ಬಗ್ಗೆ ಯೋಚಿಸಲು ತಿಳಿಯಲು ಶಿಕ್ಷಣವು ಅವಳಿಂದ ದೂರವಾಗಿರುತ್ತದೆ. ಒಂದು ಸಮೀಕ್ಷೆಯ ಪ್ರಕಾರ ಝಾಂಬಿಯಾದಲ್ಲಿ ಬಾಲ ಅನಾಥರು ಲುಸಾಕಾದಲ್ಲಿ ಬೀದಿಗೆ ಬಿದ್ದ ಮಕ್ಕಳೇ ವೇಶ್ಯೆಯರಾಗಿರುವುದನ್ನು ಕಾಣುತ್ತೇವೆ. ಸಮಾಜ ಮತ್ತು ಸರ್ಕಾರ ಇದರತ್ತ ಗಮನಹರಿಸಬೇಕಾಗಿದೆ.

ಸರ್ಕಾರ ಏನು ಮಾಡಬೇಕು?

ಮೇಲಿನ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡರೆ ಸರ್ಕಾರವು ಈ ಕೆಳಗಿನ ಕ್ರಮಗಳ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.

 • ಶಿಕ್ಷಣ ಇಲಾಖೆಯ ಮೂಲಕ ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.
 • ಶಿಕ್ಷಣ ವ್ಯವಸ್ಥೆಯಲ್ಲಿ ಲಿಂಗ ಸಮಾನತೆಗಾಗಿ ಸೂಕ್ತ ಕಾಯ್ದೆ ರೂಪಿಸಬೇಕು.
 • ಮಹಿಳಾ ಶಿಕ್ಷಣದ ಸಬಲೀಕರಣಕ್ಕಾಗಿ ಸರ್ಕಾರವು ತನ್ನ ಶಿಕ್ಷಣ ಯೋಜನೆ, ಬಜೆಟ್, ಮತ್ತು ಕಾಯ್ದೆ ರೂಪಿಸುವಾಗ ಸಂಘ ಸಂಸ್ಥೆಗಳು, ಪೋಷಕರು ಮತ್ತು ಸಮುದಾಯವನ್ನು ಬಳಸಿಕೊಳ್ಳಬೇಕು.
 • ಶಾಲೆಯ ಪ್ರತಿ ಹಂತದಲ್ಲಿಯೂ ಉಚಿತ ಶಿಕ್ಷಣದ ಭರವಸೆ ಮತ್ತು ಹಣಕಾಸಿನ ಸಹಾಯ ನೀಡಬೇಕು.
 • ಮಹಿಳೆಯರ ವಿರುಧ್ಧವಿರುವ ಕೆಟ್ಟ ಮತ್ತು ಹಿಂಸಾತ್ಮಕ ವಾತಾವರಣವನ್ನು ನಿಯಂತ್ರಿಸಬೇಕು.
 • ಮಹಿಳೆಯರಿಗೆ ಅಗತ್ಯವಾದ ಶೌಚಾಲಯ ವ್ಯವಸ್ಥೆ, ಶುಧ್ಧ ಕುಡಿಯುವ ನೀರು, ಪೌಷ್ಟಿಕ ಆಹಾರದ ವ್ಯವಸ್ಥೆಯನ್ನು ಮಾಡಬೇಕು.

ಹೀಗೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿದರೆ ನಾವು ಕಾಣುತ್ತಿರುವ ಮಹಿಳೆಯರ ಗುಣಮಟ್ಟದ ಶಿಕ್ಷಣದ ಕನಸು ನನಸಾಗುವುದರಲ್ಲಿ ಸಂದೇಹವಿಲ್ಲ. ಮಹಿಳಾ ದಿನಾಚರಣೆ ಅವಶ್ಯಕತೆಯು ಇರುವುದಿಲ್ಲ..

 

 

About the author

ಕನ್ನಡ ಟುಡೆ

Leave a Comment