ರಾಜ್ಯ ಸುದ್ದಿ

SC/ST, ಒಬಿಸಿಗೆ ಜನರಲ್ ಮೆರಿಟ್‌ನಲ್ಲಿ ಅವಕಾಶ ಇಲ್ಲ: ಇಂದು ಮಹತ್ವದ ಸಭೆ, ವಾಗ್ವಾದ ನಿರೀಕ್ಷೆ

ಬೆಂಗಳೂರು: ಮೀಸಲು ಸೌಲಭ್ಯ ಪಡೆಯುವ ಎಸ್ಸಿ, ಎಸ್‌ಟಿ ಹಾಗೂ ಒಬಿಸಿ ಅಭ್ಯರ್ಥಿಗಳು ಮೆರಿಟ್‌ ಆಧಾರದ ಮೇಲೆ ಸಾಮಾನ್ಯ ವರ್ಗದಲ್ಲಿ ಹುದ್ದೆ ಪಡೆಯುವಂತಿಲ್ಲ ಎಂಬ ಹೊಸ ಮಾನದಂಡ ಮೈತ್ರಿ ಸರಕಾರದಲ್ಲಿ ಮತ್ತೊಂದು ಗೊಂದಲ ಸೃಷ್ಟಿಸಿದ್ದು, ಈ ವಿವಾದ ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಹೋದ್ಯೋಗಿಗಳ ಮಧ್ಯೆ ವಾಗ್ವಾದಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

ಮೀಸಲು ಅವಕಾಶವಿರುವ ಪರಿಶಿಷ್ಟ, ಒಬಿಸಿ ಅಭ್ಯರ್ಥಿಗಳಿಗೆ ಮೆರಿಟ್‌ ಇದ್ದರೂ ಸಾಮಾನ್ಯ ವರ್ಗದ ಪಟ್ಟಿಯಲ್ಲಿ ಸ್ಥಾನ ಪಡೆಯುವಂತಿಲ್ಲ. ಮೀಸಲು ಹಾಗೂ ಸಾಮಾನ್ಯ ವರ್ಗದ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಬೇಕು ಎಂದು ಕೆಪಿಎಸ್ಸಿಗೆ ರಾಜ್ಯ ಸರಕಾರ ನೀಡಿರುವ ನಿರ್ದೇಶನ ವಿವಾದ ಸೃಷ್ಟಿಸಿದೆ. ಸುಪ್ರೀಂಕೋರ್ಟ್‌ ನಿರ್ದೇಶನ ಆಧರಿಸಿ ಅಡ್ವೊಕೇಟ್‌ ಜನರಲ್‌ ಸಲಹೆಯಂತೆ ಕೆಪಿಎಸ್ಸಿಗೆ ಈ ನಿರ್ದೇಶನ ನೀಡಲಾಗಿದೆ ಎಂಬುದು ಮುಖ್ಯ ಕಾರ್ಯದರ್ಶಿ ಸಮಜಾಯಿಷಿ. ಆದರೆ, ಈ ಕ್ರಮಕ್ಕೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ಹಿಂದುಳಿದ ವರ್ಗಗಳ ಸಚಿವ ಪುಟ್ಟರಂಗಶೆಟ್ಟಿ ಸೇರಿ ಕೆಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಮವಾರ ಮಧ್ಯಾಹ್ನ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿವಾದ ಸದ್ದುಮಾಡುವ ನಿರೀಕ್ಷೆಯಿದೆ.

ಪರಿಶಿಷ್ಟ ಹಾಗೂ ಹಿಂದುಳಿದ ವರ್ಗಗಳ ಸಚಿವರು ಒಟ್ಟಾಗಿ ಈ ವಿಚಾರದಲ್ಲಿ ಮುಗಿಬೀಳುವ ಸಾಧ್ಯತೆಗಳಿವೆ. ಈ ಹಿಂದೆ ಬಡ್ತಿ ಮೀಸಲು ವಿಚಾರದಲ್ಲಿ ಪರಿಶಿಷ್ಟ ನೌಕರ ವರ್ಗದ ಹಿತಾಸಕ್ತಿಗಾಗಿ ಸಚಿವ ಪ್ರಿಯಾಂಕ್‌ ಖರ್ಗೆ ಸಂಪುಟದಲ್ಲಿ ವಾಗ್ವಾದಕ್ಕಿಳಿದು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದರು. ಇದೀಗ ಮೀಸಲು ಸೌಲಭ್ಯಕ್ಕೆ ಅರ್ಹರಾದವರು ಆಯಾ ಪ್ರವರ್ಗದಲ್ಲೇ ಹುದ್ದೆ ಪಡೆಯಬೇಕು ಎಂಬ ವಿವಾದಿತ ನಿರ್ದೇಶನ ಸಂಪುಟ ಸಭೆಯಲ್ಲಿ ಸಹೋದ್ಯೋಗಿಗಳ ಮಧ್ಯೆ ಮಾತಿನ ಚಕಮಕಿ ಎಡೆಮಾಡಿಕೊಡುವ ಸಾಧ್ಯತೆಗಳಿವೆ. ಈ ವಿಚಾರದಲ್ಲಿ ಸರಕಾರದ ನಿಲುವು ಏನಿರಲಿದೆ ಮತ್ತು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

1998, 1999 ಮತ್ತು 2004ರ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕ ಪ್ರಕ್ರಿಯೆ ಸಂಬಂಧ 2016ರ ಜೂನ್‌ 12 ರಂದು ಹೈಕೋರ್ಟ್‌ ನೀಡಿದ ತೀರ್ಪಿನಲ್ಲಿ ”ಮೀಸಲಿಗೆ ಅರ್ಹರಿರುವ ಅಭ್ಯರ್ಥಿಗಳಿಗೆ ಜನರಲ್‌ ಮೆರಿಟ್‌ನಲ್ಲಿ ಅವಕಾಶ ನೀಡುವುದು ಅಸಾಂವಿಧಾನಿಕ. ಸರಕಾರದ ಆದೇಶಗಳು ಮತ್ತು ನಿಯಮಗಳಿಗೆ ವಿರುದ್ಧವಾಗಿದೆ,” ಎಂದು ಹೇಳಿತ್ತು. ಈ ತೀರ್ಪನ್ನು ಸುಪ್ರೀಂಕೋರ್ಟ್‌ ಕೂಡ ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ 2015ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರ್ಸ್‌ ಹುದ್ದೆಗಳ ನೇಮಕದಲ್ಲಿ ಕೋರ್ಟ್‌ ನಿರ್ದೇಶನ ಪಾಲಿಸುವ ಸಂಬಂಧ ಕೆಪಿಎಸ್ಸಿ ಸರಕಾರದ ಅಭಿಪ್ರಾಯ ಕೇಳಿತ್ತು. ಕೆಪಿಎಸ್ಸಿ ಕಾರ್ಯದರ್ಶಿ ಆರ್‌.ಆರ್‌.ಜನ್ನು ಅ.20 ರಂದು ಈ ಪತ್ರ ಬರೆದಿದ್ದರು. ಪತ್ರಕ್ಕೆ ಸರಕಾರ ನ.3 ರಂದು ಅಭಿಪ್ರಾಯ ನೀಡಿ, ಕೋರ್ಟ್‌ ತೀರ್ಪು ಪಾಲನೆ ಮಾಡಲು ಸೂಚಿಸಿತ್ತು.

ಸರಕಾರದ ಈ ನಿರ್ದೇಶನದ ವಿರುದ್ಧ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮೀಸಲು ಸೌಲಭ್ಯಕ್ಕೆ ಅರ್ಹರಾದ ಪರಿಶಿಷ್ಟ, ಒಬಿಸಿ ಅಭ್ಯರ್ಥಿಗಳಿಗೆ ಮೆರಿಟ್‌ ಮೇಲೆ ಜನರಲ್‌ ಪ್ರವರ್ಗದಲ್ಲೂ ಸಿಗುವ ಅವಕಾಶ ಕಸಿದುಕೊಳ್ಳುವ ಈ ತೀರ್ಮಾನ ಕೈಬಿಡುವಂತೆ ಪ್ರಿಯಾಂಕ್‌ ಖರ್ಗೆ ಅವರು ಸಿಎಂಗೆ ಪತ್ರ ಬರೆದಿದ್ದರು.

About the author

ಕನ್ನಡ ಟುಡೆ

Leave a Comment