ರಾಜ್ಯ ಸುದ್ದಿ

ಅಧಿಕಾರಿ ಬಳಿ ಕೋಟಿ ಕೋಟಿ ಹಣ ಪತ್ತೆ, ಚುನಾವಣೆಗಾಗಿ ಬಳಕೆ

ಬೆಂಗಳೂರು: ಚುನಾವಣೆಗಾಗಿ ಅಕ್ರಮ ಹಣ ಸಾಗಿಸುವವರ ಮೇಲೆ ಹದ್ದಿನ ಕಣ್ಣಿಟ್ಟಿರುವ ಐಟಿ ಅಧಿಕಾರಿಗಳ ಬಲೆಗೆ ದೊಡ್ಡ ಮಿಕ್‌ವೊಂದು ಸಿಕ್ಕಿಬಿದ್ದಿದೆ. ಹೌದು, ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಥಮ ದರ್ಜೆ ಸಹಾಯಕನೊಬ್ಬ ಉಳಿದುಕೊಂಡಿದ್ದ ಹೋಟೆಲ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ವಶಕ್ಕೆ ಪಡೆದಿದ್ದಾರೆ. ಲೋಕಸಭೆ ಚುನಾವಣೆಗಾಗಿ ಗುತ್ತಿಗೆದಾರರಿಂದ ಹಣ ಸಂಗ್ರಹಿಸುತ್ತಿದ್ದ ಅಧಿಕಾರಿ ನಾರಾಯಣಗೌಡ.ಬಿ .ಪಾಟೀಲ್, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕಾಮಗಾರಿ ಪಡೆದಿದ್ದ ಗುತ್ತಿಗೆದಾರರಿಂದ 10-20 ಪರ್ಸೆಂಟ್ ಕಮಿಷನ್ ಸಂಗ್ರಹಿಸುತ್ತಿದ್ದ ಎಂದು ಹೇಳಲಾಗುತ್ತಿದೆ.


ಹೀಗೆ ಸಂಗ್ರಹವಾದ ಹಣವನ್ನೆಲ್ಲ ಬೆಂಗಳೂರು ನಗರದ ಆನಂದರಾವ್ ಸರ್ಕಲ್ ಬಳಿಯ ರಾಜಮಹಲ್ ಹೋಟೆಲ್‌‌ನ ರೂಮಿನಲ್ಲಿ ಸಂಗ್ರಹಿಸುತ್ತಿದ್ದ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದಕೊಂಡ ಅಧಿಕಾರಿಗಳು, ದಾಳಿ ನಡೆಸಿ ಕೋಟ್ಯಂತರ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ. ಈ ಹಣವನ್ನು ಅಕ್ರಮವಾಗಿ ಚುನಾವಣೆಗೆ ಬಳಕೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಬೆಂಗಳೂರು ಹಾಗೂ ಹಾವೇರಿಯಲ್ಲಿ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹಾವೇರಿಯಲ್ಲಿರುವ ನಾರಾಯಣಗೌಡ ನಿವಾಸದಲ್ಲಿ 25 ಲಕ್ಷ ರೂಪಾಯಿ ನಗದು ಪತ್ತೆಯಾಗಿದ್ದು, ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದಾಳಿ ನಡೆಯುತ್ತಿದ್ದಂತೆಯೇ ಭ್ರಷ್ಟ ಅಧಿಕಾರಿ ಪರಾರಿಯಾಗಿದ್ದು, ಆತನ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

 

About the author

ಕನ್ನಡ ಟುಡೆ

Leave a Comment