ಅ೦ತರಾಷ್ಟ್ರೀಯ

ಉಗ್ರ ಪಟ್ಟಿಗೆ ಮಸೂದ್ ಸೇರಿಸಲು ಚೀನಾ ಅಡ್ಡಗಾಲು, ಅಮೆರಿಕ, ಫ್ರಾನ್ಸ್, ಬ್ರಿಟನ್ ನಿಂದ ಪ್ಲಾನ್ ಬಿ ಜಾರಿ

ವಾಷಿಂಗ್ಟನ್: ಜಾಗತಿಕ ಉಗ್ರ ಪಟ್ಟಿಗೆ ಮಸೂದ್ ಅಜರ್ ನನ್ನು ಸೇರಿಸುವ ಭಾರತದ ಪ್ರಯತ್ನಕ್ಕೆ ಅಡ್ಡಿಯಾಗುವ ಚೀನಾ ನಡೆ ಅದಕ್ಕೇ ತಿರುಗುಬಾಣವಾಗುವ ಮುನ್ಸೂಚನೆ ದೊರೆತಿದೆ. ಹೌದು.. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಚೀನಾ ಯಾವ ತನ್ನ ವಿಶೇಷಾಧಿಕಾರ ಬಳಕೆ ಮಾಡಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ತಡೆಯಾಗಿತ್ತೋ ಅದೇ ವಿಶೇಷಾಧಿಕಾರದ ಬಳಕೆ ಮಾಡಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಅಮೆರಿಕ, ಫ್ರಾನ್ಸ್, ಬ್ರಿಟನ್ ದೇಶಗಳು ಮುಂದಾಗಿವೆ. ಇದಕ್ಕಾಗಿ ಈ ದೇಶಗಳು ಒಗ್ಗೂಡಿ ‘ಪ್ಲಾನ್ ಬಿ’ ಸೂತ್ರ ಸಿದ್ಧಪಡಿಸಿಕೊಂಡಿದ್ದು, ಪ್ರಸ್ತುತ ಚೀನಾ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದೆ. ಈ ಸಂಬಂಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಬಹಿರಂಗ ಚರ್ಚೆಗೆ ಈ ಮೂರೂ ದೇಶಗಳು ಆಗ್ರಹಿಸಿದ್ದು, ಬಹಿರಂಗ ಚರ್ಚೆ ಬಳಿಕ ಮಸೂದ್ ಅಜರ್ ನನ್ನು ಜಾಗತಿಗ ಉಗ್ರ ಪಟ್ಟಿಗೆ ಸೇರಿಸುವ ಕುರಿತ ನಿರ್ಣಯ ಕೈಗೊಳ್ಳಲು ಮುಂದಾಗಿವೆ. ಒಂದು ವೇಳೆ ಅದಕ್ಕೂ ಚೀನಾ ಬಗ್ಗದಿದ್ದರೆ ಆಗ ಪ್ಲಾನ್ ಬಿ ಅನ್ವಯ ತಮ್ಮ ವಿಶೇಷಾಧಿಕಾರ ಬಳಕೆಗೆ ಈ ದೇಶಗಳು ಮುಂದಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ತಮ್ಮ ವಿಶೇಷಾಧಿಕಾರದ ಮೂಲಕ ಚೀನಾ ಯಾವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ತಡೆ ಹಾಕುತ್ತಿದೆಯೋ ಅದೇ ಅಂಶಗಳ ತಿದ್ದುಪಡಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಈ ಮೂರು ಖಾಯಂ ಸದಸ್ಯ ರಾಷ್ಟ್ರಗಳು ತಿದ್ದುಪಡಿ ತರಲು ಆಗ್ರಹಿಸಲಿವೆ. ಒಟ್ಟಾರೆ ಚೀನಾ ದೇಶದ ತನ್ನ ಮಿತ್ರ ರಾಷ್ಟ್ರ ಪಾಕಿಸ್ತಾನದ ಬೆಂಬಲಕ್ಕೆ ನಿಲ್ಲಲು ಹೋಗಿ ಇದೀಗ ತಾನೇ ಅಡಕತ್ತರಿಯಲ್ಲಿ ಸಿಲುಕುವಂತಾಗಿದೆ.

About the author

ಕನ್ನಡ ಟುಡೆ

Leave a Comment