ರಾಜಕೀಯ

ಖರ್ಗೆ ಹೆಸರೇಳಿ ದೇವೇಗೌಡರು ಲಾಭ ಪಡೆಯಲು ಯತ್ನ: ಬಿ.ಎಸ್‌.ಯಡಿಯೂರಪ್ಪ

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲು ಸೋನಿಯಾ ಗಾಂಧಿ ಒಪ್ಪಲಿಲ್ಲ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಟೀಕಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ ಅವರು ಈಗ ದೇವೇಗೌಡರು ಖರ್ಗೆ ಹೆಸರು ತೆಗೆದುಕೊಳ್ಳುವ ಅಗತ್ಯ ಇರಲಿಲ್ಲ. 9 ತಿಂಗಳ ಹಿಂದೆಯೇ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ಈಗ ದೇವೇಗೌಡರು ಖರ್ಗೆ ಹೆಸರು ಹೇಳಿ ಲಾಭ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು. ಪ್ರಸಾದ್‌ ಅಭ್ಯರ್ಥಿ: ಚಾಮರಾಜನಗರದಿಂದ ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಅವರಿಗೆ ಸ್ಪರ್ಧಿಸಲು ಇಷ್ಟವಿರಲಿಲ್ಲ. ಆದರೆ ಅವರೇ ಸ್ಪರ್ಧೆ ಮಾಡುವಂತೆ ಸ್ಥಳೀಯರು ಹಾಗೂ ನಾವು ಒತ್ತಾಯಿಸಿದ್ದೇವೆ. ಅವರು ಅಲ್ಲಿಂದ ಸ್ಪರ್ಧಿಸಿದರೆ ದೊಡ್ಡ ಅಂತರದಿಂದ ಗೆಲ್ಲಬಹುದು. ನಾವೆಲ್ಲಾ ಅವರನ್ನು ಒಪ್ಪಿಸಿದ್ದು ಬಹುತೇಕ ಅವರೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ವಿಚಾರ ಇನ್ನೂ ಅಂತಿಮ ಆಗಿಲ್ಲ. ಸುಮಲತಾ ಅಂಬರೀಷ್‌ ಅವರು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರನ್ನು ಭೇಟಿಯಾಗಿರುವುದು ಗೊತ್ತಾಗಿದೆ. ಅವರ ನಿರ್ಧಾರ ತಿಳಿಸಿದ ಬಳಿಕ ನಮ್ಮ ನಿರ್ಧಾರ ಹೇಳುತ್ತೇವೆ. ಅದೇ ರೀತಿ ಹಾಸನದ ಅಭ್ಯರ್ಥಿ ವಿಚಾರವೂ ಇನ್ನು ಅಂತಿಮವಾಗಿಲ್ಲ. ಎ. ಮಂಜು ಹೆಸರು ಕೂಡ ಅಂತಿಮವಾಗಿಲ್ಲ ಎಂದು ಹೇಳಿದರು. ಇದಕ್ಕೂ ಮುನ್ನ ವಿ.ಶ್ರೀನಿವಾಸ ಪ್ರಸಾದ್‌ ಹಾಗೂ ಎ.ಮಂಜು ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ‘ನಾನು ಸ್ಪರ್ಧಿಸಬೇಕೆಂಬ ಒತ್ತಡವಿದೆ, ಈ ಬಗ್ಗೆ ಶನಿವಾರ ಅಂತಿಮ ತೀರ್ಮಾನ ಕೈಗೊಳ್ಳುವೆ’ ಎಂದು ಪ್ರಸಾದ್‌ ಹೇಳಿದರು.

About the author

ಕನ್ನಡ ಟುಡೆ

Leave a Comment