ರಾಜ್ಯ ಸುದ್ದಿ

ನಾಳೆ ಕೂಡಲ ಸಂಗಮದಲ್ಲಿ ಮಾತೆ ಮಹಾದೇವಿ ಅಂತ್ಯಕ್ರಿಯೆ

ಬೆಂಗಳೂರು: ಬಹು ಅಂಗಾಂಗ ವೈಫ‌ಲ್ಯ ದಿಂದ ಬಳಲುತ್ತಿದ್ದ ಕೂಡಲಸಂಗಮದ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ (74) ಅವರು ಗುರುವಾರ ಹೃದಯಾ ಘಾತದಿಂದ ಲಿಂಗೈಕ್ಯ ರಾಗಿದ್ದಾರೆ.

ಮಾತೆ ಮಹಾದೇವಿ ಅವರಿಗೆ ಮೂತ್ರಪಿಂಡ ಹಾಗೂ ಶ್ವಾಸಕೋಶ ತೊಂದರೆಯಿಂದಾಗಿ ಮಾ.9ರಂದು ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫ‌ಲ್ಯದೊಂದಿಗೆ ರಕ್ತ ಸೋಂಕು ಸಮಸ್ಯೆಯೂ ಕಾಣಿಸಿಕೊಂಡ ಪರಿಣಾಮ ಅವರನ್ನು ತೀವ್ರ ನಿಗಾ ಘಟಕ ದಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು.

ಗುರುವಾರ ಸಂಜೆ 4.45ಕ್ಕೆ ಹೃದಯಾ ಘಾತದಿಂದ ಇಹಲೋಹ ತ್ಯಜಿಸಿದ್ದಾರೆ. ಕುಗ್ರಾಮದಲ್ಲಿ ಜನಿಸಿ ಜಗದ್ಗುರು ವಾದರು: ಚಿತ್ರದುರ್ಗ ತಾಲೂಕಿನ ಕುಗ್ರಾಮ ಸಾಸಲಹಟ್ಟಿ ಮಾತೆ ಮಹಾ ದೇವಿಯವರ ಹುಟ್ಟೂರು. 1946ರ ಮಾ. 13ರಂದು ಡಾ| ಎಸ್‌.ಆರ್‌. ಬಸಪ್ಪ ಹಾಗೂ ಗಂಗಮ್ಮನವರ ಪುತ್ರಿಯಾಗಿ ಜನಿಸಿದ ಮಾತೆ ಮಹಾದೇವಿ ಪೂರ್ವಾಶ್ರಮದ ಹೆಸರು ರತ್ನ ಎಂದಾಗಿತ್ತು.

ಕೂಡಲಸಂಗಮದಲ್ಲಿ ನಾಳೆ ಅಂತ್ಯಕ್ರಿಯೆ
ಬಾಗಲಕೋಟೆ: ಮಾತೆ ಮಹಾದೇವಿ ಅವರ ಅಂತ್ಯಕ್ರಿಯೆ ಮಾ.16ರಂದು ಕೂಡಲಸಂಗಮದಲ್ಲಿ ನಡೆಯಲಿದೆ. ಎರಡು ದಿನ ಮಾತಾಜಿಯವರ ಪಾರ್ಥಿವ ಶರೀರ ದರ್ಶನ ವ್ಯವಸ್ಥೆ ಮಾಡಲಾಗಿದೆ. ಮಾ.15ರ ಬೆಳಗ್ಗೆ 11ರವರೆಗೆ ಬೆಂಗಳೂರಿನ ರಾಜಾಜಿನಗರದ ಬಸವ ಮಂಟಪದಲ್ಲಿ, ಅಲ್ಲಿಂದ ಮಾತಾಜಿಯವರ ಜನ್ಮಸ್ಥಳ ಸಾಸಲಹಟ್ಟಿಯಲ್ಲಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.

ಬಳಿಕ ರಾತ್ರಿ ಲಿಂಗಾಯತ ಧರ್ಮ ಕ್ಷೇತ್ರ ಕೂಡಲಸಂಗಮಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತಿದ್ದು, ಅಲ್ಲಿ ಮಾ. 16ರವರೆಗೆ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ಮಾ.16ರಂದೇ ಕೂಡಲಸಂಗಮದಲ್ಲಿ ನಾಡಿನ ಸಕಲ ಬಸವ ಪರಂಪರೆಯ ಜಂಗಮ ಮೂರ್ತಿಗಳು, ಬಸವ ಭಕ್ತರ ಉಪಸ್ಥಿತಿಯಲ್ಲಿ ಲಿಂಗಾಯತ ಧರ್ಮದ ಪದ್ಧತಿಯಂತೆ ಅಂತಿಮ ಕ್ರಿಯಾ ವಿಧಿ ವಿಧಾನ ನಡೆಯಲಿದೆ ಎಂದು ಬಸವ ಧರ್ಮ ಪೀಠದ ಪ್ರಕಟಣೆ ತಿಳಿಸಿದೆ.

 

About the author

ಕನ್ನಡ ಟುಡೆ

Leave a Comment