ರಾಜಕೀಯ

ಹಳೆ ಮೈಸೂರು ಭಾಗದಲ್ಲಿ ಹಳೇ ದೋಸ್ತಿಗಳ ಕದನ: ಸಿದ್ದರಾಮಯ್ಯ v/s ಶ್ರೀನಿವಾಸ ಪ್ರಸಾದ್

ಮೈಸೂರು: ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಚಾಮರಾಜನಗರ ಪರಿಶಿಷ್ಟ ಜಾತಿ ಮೀಸಲಾತಿ ಕ್ಷೇತ್ರ ಹಲವು ಕಾರಣಗಳಿಗೆ ಸುದ್ದಿಯಾಗಿದೆ. ಮೈಸೂರು ಹಳೆ ಪ್ರಾಂತ್ಯ ಭಾಗದ ಪ್ರಮುಖ ದಲಿತ ನಾಯಕ ವಿ ಶ್ರೀನಿವಾಸ ಪ್ರಸಾದ್ ಈ ಬಾರಿ ಬಿಜೆಪಿ ಗೆಲ್ಲಬೇಕೆಂಬ ಪಣ ತೊಟ್ಟಿದ್ದಾರೆ. ಈಗಿರುವ ಕಾಂಗ್ರೆಸ್ ಸಂಸದ ಆರ್ ಧ್ರುವನಾರಾಯಣ ಸತತ ಮೂರನೇ ಬಾರಿ ಗೆಲ್ಲಬೇಕೆಂದು ಕಾಂಗ್ರೆಸ್ ಹವಣಿಸುತ್ತಿದೆ. ಇವರು ಕೂಡ ದಲಿತ ಮುಖಂಡರು. 2009ರಿಂದ ಸತತವಾಗಿ ಎರಡು ಬಾರಿ ಗೆಲ್ಲುತ್ತಾ ಬಂದಿದ್ದಾರೆ. ಧ್ರುವನಾರಾಯಣ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ಬೆಂಬಲವಿದೆ. ಸಿದ್ದರಾಮಯ್ಯ ಮತ್ತು ಶ್ರೀನಿವಾಸ ಪ್ರಸಾದ್ ನಡುವೆ ಸಂಬಂಧ ಹಳಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೂಡ ಹಳೆ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಮತ್ತು ವಿ ಶ್ರೀನಿವಾಸ ಪ್ರಸಾದ್ ಪ್ರತಿಸ್ಪರ್ಧಿಗಳಾಗಿದ್ದರು. ಕಳೆದ ಬಾರಿ ತಮ್ಮ ಅಳಿಯ ಬಿ ಹರ್ಷವರ್ಧನ ಗೆಲ್ಲುವ ಮೂಲಕ ಶ್ರೀನಿವಾಸ ಪ್ರಸಾದ್ ಕೈ ಮೇಲಾಗಿತ್ತು. ನಂಜನಗೂಡು ವಿಧಾನಸಭೆ ಕ್ಷೇತ್ರದಿಂದ ಆರಿಸಿ ಬಂದಿದ್ದರು. ಇತ್ತ ಬಿಜೆಪಿ ಶ್ರೀನಿವಾಸ್ ಪ್ರಸಾದ್ ಅವರನ್ನು ಕಣಕ್ಕಿಳಿಸಲು ನೋಡುತ್ತಿದೆ. ಅವರು ಈ ಭಾಗದಲ್ಲಿ 5 ಬಾರಿ ಎಂಪಿಯಾಗಿದ್ದವರು. ಶ್ರೀನಿವಾಸ ಪ್ರಸಾದ್ ಕೂಡ ಚುನಾವಣೆಗೆ ಧುಮುಕಲು ಸಿದ್ದರಾಗಿದ್ದಾರೆ. ಅವರ ಬೆಂಬಲಿಗರು ಅಧಿಕೃತ ಘೋಷಣೆಗೆ ಕಾಯುತ್ತಿದ್ದಾರೆ. ಆದರೆ ಬಿಜೆಪಿಗೆ ಗೆಲುವು ಅಷ್ಟು ಸುಲಭವಲ್ಲ. ಇಲ್ಲಿ ಕಾಂಗ್ರೆಸ್ ಹಲವು ಬಾರಿ ಗೆದ್ದಿದೆ. ಇಲ್ಲಿ ಮೊದಲ ಬಾರಿ ಚುನಾವಣೆಯಲ್ಲಿ ಗೆದ್ದಿದ್ದು ಕಾಂಗ್ರೆಸ್ ಪಕ್ಷದಿಂದ ಎಸ್ ಎಂ ಸಿದ್ದಯ್ಯನವರು.ಅದು 1962ರಲ್ಲಿ, ನಂತರ ಸತತವಾಗಿ 1971ರವರೆಗೆ ಅವರು ಗೆದ್ದಿದ್ದರು, 1977ರಲ್ಲಿ ಕಾಂಗ್ರೆಸ್ ನಿಂದ ಬಿ ರಾಚಯ್ಯ ಜಯ ಗಳಿಸಿದ್ದರು. 1980ರ ಚೊಚ್ಚಲ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಶ್ರೀನಿವಾಸ ಪ್ರಸಾದ್ ಆಯ್ಕೆಯಾದರು. ಅಲ್ಲಿಂದ ನಂತರ ಸತತವಾಗಿ 1984, 1989 ಮತ್ತು 1991ರ ಚುನಾವಣೆಯಲ್ಲಿ ಕೂಡ ಜಯ ಕಂಡಿದ್ದರು. ಆದರೆ 1996ರ ಚುನಾವಣೆಯಲ್ಲಿ ಸೋತರು. ಅದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ. ಜನತಾ ದಳದ ಎ ಸಿದ್ದರಾಜು ಜಯ ಕಂಡರು. ನಂತರ ಶ್ರೀನಿವಾಸ ಪ್ರಸಾದ್ ಜೆಡಿಎಸ್ ಸೇರಿದರು. ಸಿದ್ದರಾಜು 1998ರ ಚುನಾವಣೆಯಲ್ಲಿ ಮತ್ತೆ ಶ್ರೀನಿವಾಸ್ ಪ್ರಸಾದ್ ಅವರನ್ನು ಸೋಲಿಸಿದರು. ಆಗ ಶ್ರೀನಿವಾಸ್ ಪ್ರಸಾದ್ ಮತ್ತೆ ಕಾಂಗ್ರೆಸ್ ಗೆ ಸೇರಿದ್ದರೂ ಕೂಡ ಗೆಲುವಿನ ರುಚಿ ಕಾಣಲು ಅವರಿಗೆ ಸಾಧ್ಯವಾಗಲಿಲ್ಲ. ಅದಕ್ಕೆ ಕಾಂಗ್ರೆಸ್ ತೊರೆದು ಸಮತಾ ಪಕ್ಷ ಸೇರಿ ಜೆಡಿಯು ಪಕ್ಷದ ಬೆಂಬಲದೊಂದಿಗೆ 1999ರ ಚುನಾವಣೆಯಲ್ಲಿ ಗೆದ್ದರು. ಆದರೆ ಜೆಡಿಯುನಿಂದ ಹೊರಬಂದು ಜೆಡಿಎಸ್ ಸೇರಿದರು. ಚಾಮರಾಜನಗರ ಕ್ಷೇತ್ರದಿಂದ ತಮ್ಮ ಸಂಬಂಧಿಕ ಶಿವಣ್ಣ ಅವರನ್ನು ಕಣಕ್ಕಿಳಿಸಲು ಅವರು ಜೆಡಿಯುನಿಂದ ಹೊರಬಂದಿದ್ದರು.
ಒಂದು ಕಾಲದಲ್ಲಿ ಸ್ನೇಹಿತರು, ಈಗ ದುಶ್ಮನ್ ಗಳು: ಕಳೆದ ಬಾರಿ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಯಾಗಿದ್ದ ಶ್ರೀನಿವಾಸ ಪ್ರಸಾದ್ ಅವರನ್ನು 2016ರಲ್ಲಿ ಸಂಪುಟದಿಂದ ಕೈಬಿಡಲಾಗಿತ್ತು. ನಂಜನಗೂಡು ಪರಿಶಿಷ್ಟ ಜಾರಿ ಕ್ಷೇತ್ರದಿಂದ ಶಾಸಕರಾಗಿದ್ದ ಅವರು ನಂತರ ಬಿಜೆಪಿಯತ್ತ ವಾಲಿದರು. ಕಳೆದ ಉಪ ಚುನಾವಣೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಯೋಚಿಸಿತ್ತು, ಆದರೆ ಸ್ವಾಭಿಮಾನದಿಂದ ಶ್ರೀನಿವಾಸ್ ಪ್ರಸಾದ್ ಒಪ್ಪಿರಲಿಲ್ಲ. ಸಂಪುಟದಿಂದ ಕೈಬಿಟ್ಟ ನಂತರ ಸಿದ್ದರಾಮಯ್ಯ ಮತ್ತು ಶ್ರೀನಿವಾಸ್ ಪ್ರಸಾದ್ ಸಂಬಂಧ ಹಳಸಿದೆ.

About the author

ಕನ್ನಡ ಟುಡೆ

Leave a Comment