ಬ್ರೇಕಿಂಗ್ ನ್ಯೂಸ್ ಬಳ್ಳಾರಿಯ ಬಾಲಕಿ ಶ್ರೀನಿಧಿ ಸಾಧನೆ : ವಾಯುಮಾಲಿನ್ಯ ತಡೆ ಸಾಧನ ಅವಿಷ್ಕರಿಸಿದ ಬಳ್ಳಾರಿಯ ‘ಸಿರಿ’ಬಾಲೆ! 16/03/202016/03/20201 min read admin ಬಳ್ಳಾರಿ : ದೇಶ ಎದುರಿಸುತ್ತಿರುವ ಹಲವಾರು ಗಂಭೀರ ಸಮಸ್ಯೆಗಳಲ್ಲಿ ವಾಯುಮಾಲಿನ್ಯವೂ ಒಂದು. ಕೈಗಾರಿಕೆ, ವಾಹನದಟ್ಟಣೆಯಿಂದ ದಿನೇ ದಿನೇ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಣಕ್ಕೆ ನಗರದ ಡ್ರೀಮ್ ವರ್ಲ್ಡ್ ಶಾಲೆಯ ವಿದ್ಯಾರ್ಥಿನಿಯೊಬ್ಬರು ಅವಿಷ್ಕರಿಸಿರುವ ಪರಿಹಾರ ಸಾಧನ ಗಮನಸೆಳೆದಿದೆ. ಇದಕ್ಕೆ ಸರ್ಕಾರದ ಮನ್ನಣೆಯೂ ಲಭಿಸಿರುವುದು ವಿಶೇಷ!. ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ ಶ್ರೀನಿಧಿ, ಎಸ್ ಅವರು ವಾಯುಮಾಲಿನ್ಯ ತಡೆಗೆ ಪರಿಹಾರ ಸಾಧನ ಕಂಡುಹಿಡಿದವರು. ನಗರ ನಿವಾಸಿಗಳಾದ ಮೂಳೆತಜ್ಞ ಡಾ.ಎಸ್.ರಮೇಶ ಮತ್ತು ಮೆಡಿಕಲ್ ಬೈಯೋಕೆಮಿಸ್ಟ್ ಎಸ್.ಸುಚಿತ್ರಾ ದಂಪತಿಗಳ ಪುತ್ರಿ. ವಿದ್ಯಾರ್ಥಿನಿ ಅವಿಷ್ಕರಿಸಿರುವ ಸಾಧನವು ಬೈಕ್, ಕಾರು, ಬಸ್, ಲಾರಿ ಸೇರಿ ವಾಹನಗಳ ಗಾತ್ರಕ್ಕೆ ತಕ್ಕಂತೆ ಹೊಂದಾಣಿಕೆಯಾಗುವಂತೆ ರೂಪಿಸಲಾಗಿದೆ. ಸಾಧನವನ್ನು ವಾಹನಗಳ ಸೈಲೆನ್ಸರ್ ಗಳಿಗೆ ಅಳವಡಿಸಿದರೆ ಕಲುಷಿತ ಗಾಳಿಯನ್ನು ಸೋಸಿ, ಕಾರ್ಬನ್ ರಹಿತ ಶುದ್ಧ ಗಾಳಿಯನ್ನು ಹೊರಬಿಡುತ್ತದೆ. ಸಾಧನಕ್ಕೆ ಕ್ಯಾಪ್ಚರ್ ಸಿ-6 ಎಂದು ಹೆಸರಿಸಿದ್ದಾಳೆ. ಎರಡನೇಯದಾಗಿ ಫಿಲ್ಟರ್ ನಲ್ಲಿ ಸೆರೆಹಿಡಿಯಲಾದ ಇಂಗಾಲವನ್ನು ಸುದ್ದಿ ಪತ್ರಿಕೆಗಳು, ಪ್ರಿಂಟರ್, ಬಣ್ಣದ ಉದ್ಯಮಗಳಲ್ಲಿ ಮುದ್ರಣಕ್ಕೆ ಕಚ್ಚಾ ವಸ್ತುಗಳನ್ನಾಗಿ ಬಳಸಬಹುದಾಗಿದೆ. ವಿದ್ಯಾರ್ಥಿನಿಯು ಸಾಧನದ ಅವಿಷ್ಕಾರಕ್ಕೆ ಕಳೆದ ಒಂದೂವರೆ ವರ್ಷದಿಂದ ಶಾಲಾ ರಜೆ ವೇಳೆಯಲ್ಲಿ ಶನಿವಾರ ಮತ್ತು ಭಾನುವಾರ ಬೆಂಗಳೂರಿಗೆ ತೆರಳಿ ನಾವೀನ್ಯತೆ ಪ್ರಯೋಗಾಲಯ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಅವಿಷ್ಕರಿಸಿರುವ ಸಾಧನದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಳು. ಅದೇ ಶಾಲೆಯ ಭೌತಶಾಸ್ತ್ರ ಉಪನ್ಯಾಸಕ ಆ್ಯಡಂ ಸೈಯದ್ ಹಾಗೂ ಅವರ ಸಂಬಂಧಿ ಶೈಲೇಂದ್ರರಾವ್ ಅವರು ವಿದ್ಯಾರ್ಥಿನಿ ಶ್ರೀನಿಧಿ ಅವರು ಕಳೆದ ಒಂದೂವರೆ ವರ್ಷದಿಂದ ನಡೆಸುತ್ತಿರುವ ಈ ಸಾಧನ ಅವಿಷ್ಕಾರದಲ್ಲಿ ಸಹಕರಿಸಿದ್ದಾರೆ. ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ನಡೆಸುವ ‘ (Elevate) ಎಲೆವೆಟ್’ ಕಾರ್ಯಕ್ರಮಕ್ಕೆ ವಿದ್ಯಾರ್ಥಿನಿ ಅವಿಷ್ಕರಿಸಿರುವ ವಾಯುಮಾಲಿನ್ಯ ತಡೆಟ್ಟುವ ಸಾಧನ ಆಯ್ಕೆಯಾಗಿದೆ. ಜೊತೆಗೆ ವಾಯುಮಾಲಿನ್ಯ ತಡೆಯುವ ಸಾಮರ್ಥ್ಯ ಹೊಂದಿದ್ದು, ಸಾಧನವನ್ನು ಮಾರುಕಟ್ಟೆ ಪ್ರವೇಶಕ್ಕೆ ಸಹಕಾರ ದೊರೆತಿದೆ. ಸರಕಾರ 35 ಲಕ್ಷ ರೂ. ಅನುದಾನ ಈ ಸಾಧನಕ್ಕೆ ದೊರಕಿದ್ದು, ಅಂತಾರಾಷ್ಟ್ರೀಯ ಪೆಟೆಂಟ್ ದೊರೆತಿರುವುದು ವಿಶೇಷ. ವಿದ್ಯಾರ್ಥಿನಿಯು ಈ ಮುಂಚೆ 2019ರಲ್ಲಿ ನ್ಯಾಷನಲ್ ಇನ್ನೊವೆಷನ್ ಪೌಂಡೇಷನ್ ದೆಹಲಿಯ ಐಐಟಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಯೂ ಸಾಧನವನ್ನು ಪ್ರಸ್ತುತಪಡಿಸಿದ್ದರು ಮತ್ತು ರಾಷ್ಟ್ರಮಟ್ಟದ ಸಿಬಿಎಸ್ಸಿ ಎನ್ ಸಿಆರ್ ಇಟಿ ಗಳ ಪ್ರಸ್ತುತಪಡಿಸಿ ಗಮನಸೆಳೆದಿದ್ದರು. ವಿದ್ಯಾರ್ಥಿನಿ ಶ್ರೀನಿಧಿಯ ಈ ಸಾಧನೆಗೆ ಅವರ ತಂದೆ ಮೂಳೆ ತಜ್ಞ ರಮೇಶ ಅವರ ತಂದೆ ಸಂತಸ ವ್ಯಕ್ತಪಡಿಸುತ್ತಾರೆ. ಈ ಬೆಳವಣಿಗೆ ಬಳ್ಳಾರಿ ಜಿಲ್ಲೆಗೆ ಕೀರ್ತಿಪ್ರಾಯವಾಗಿದೆ . Share