ವಿದ್ಯುತ್ ಅವಘಡ : ತಪ್ಪಿದ ಭಾರೀ ಅನಾಹುತ

ನಿವೃತ್ತ ಪಿಎಸ್ಐ ಮನೆಯಲ್ಲಿ ನಡೆದ ಘಟನೆ

ಫ್ರಿಜ್ ಬೆಂಕಿಗೆ ಆಹುತಿ

ಮೂಡಲಗಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಫ್ರಿಜ್ ಹೊತ್ತಿ ಉರಿದ ಘಟನೆ ಪಟ್ಟಣದ ಲಕ್ಷ್ಮಿ ನಗರದಲ್ಲಿ ನಡೆದಿದೆ.

ಲಕ್ಷ್ಮಿ ನಗರ ನಿವಾಸಿ ಶಿವಶಂಕರ ಶಾಬನ್ನವರ ಎಂಬವರ ಮಾಲಕತ್ವದಲ್ಲಿರುವ ಮನೆಯಲ್ಲಿ ವಾಸವಿದ್ದ ನಿವೃತ್ತ ಪಿಎಸ್ಐ ಬಸವರಾಜ್ ಉಪ್ಪಾರ ಅವರು ಲಾಕ್ ಡೌನ್ ಇರುವ ಹಿನ್ನೆಲೆ ತೋಟದ ಮನೆಯಲ್ಲಿ ವಾಸವಾಗಿದ್ದು, ಸೋಮವಾರದಂದು ಸಂಜೆ ಸುಮಾರು 4:30 ಗಂಟೆಗೆ ಶಾರ್ಟ್ ಸರ್ಕ್ಯೂಟ್​ನಿಂದ ಫ್ರಿಜ್ ಬೆಂಕಿಗೆ ಆಹುತಿಯಾಗಿದೆ.ಅಷ್ಟೇ ಅಲ್ಲದೇ ಮನೆಯ ಎಲ್ಲ ಕಿಡಿಕಿಗಳು ಬಂದ್ ಇರುವುದರಿಂದ ಅಡುಗೆ ಮನೆಯ ವಸ್ತುಗಳು ಹಾಗೂ ಇಡೀ ಮನೆಯೂ ಹೊಗೆಯಲ್ಲಿ ಮುಳುಗಿವೆ. ಅದೃಷ್ಟವಶ ಪಕ್ಕದಲ್ಲಿರುವ ಸಿಲಿಂಡರ್ ಗ್ಯಾಸ್ ಸ್ಪೋಟಗೊಂಡಿಲ್ಲ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಸ್ಥಳೀಯರ ಸಮಯಪ್ರಜ್ಞೆಯಿಂದ ಬಾಗಿಲು ತಗೆದು ಬೆಂಕಿ ನಂದಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಆಹಾರ ಕಿಟ್ ವಿತರಿಸುವುತ್ತಿರುವ ಪತ್ರಕರ್ತ ಹಣಮಂತ ಕಂಕಣವಾಡಿಯವರ ಕಾರ್ಯ ಶ್ಲಾಘನೀಯ : ಪಿಎಸ್‌ಐ ಬಾಲದಂಡಿ

  • ಮೂಡಲಗಿ ತಾಲೂಕಿನ ಹಳ್ಳೂರ, ಖಾನಟ್ಟಿ, ಗುರ್ಲಾಪೂರ, ತುಕ್ಕಾನಟ್ಟಿ ಗ್ರಾಮಗಳ ನಿರ್ಗತಿಕರಿಗೆ ಆಹಾರ ಕಿಟ್ ವಿತರಣೆ

ಮೂಡಲಗಿ : ಕೊರೊನಾ ಮಾಹಾಮಾರಿ ಎಲ್ಲೆಡೆ ಪಸರಿಸುವ ಪ್ರಸ್ತುತ ಕಾಲಘಟ್ಟದಲ್ಲಿ ಕರ್ತವ್ಯವನ್ನೇ ಧ್ಯೇಯವಾಗಿಸಿಕೊಂಡು ದುಡಿಯುವ ಪತ್ರಕರ್ತರು, ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರ ಸಂಕಷ್ಟ ಸಂದರ್ಭದಲ್ಲಿ ನೆರವಿಗೆ ಧಾವಿಸಿ ಆಹಾರ ಕಿಟ್ ವಿತರಿಸುತ್ತಿರುವ ಪತ್ರಕರ್ತರ ಹಣಮಂತ ಕಂಕಣವಾಡಿ ಅವರು ಕಾರ್ಯ ಶ್ಲಾಘನೀಯವಾಗಿದೆ ಎಂದು ಸ್ಥಳೀಯ ಪಿಎಸ್‌ಐ ಎಚ್ ವೈ ಬಾಲದಂಡಿ ಹೇಳಿದರು.

ಪಟ್ಟಣದ ಯಲ್ಲಮ್ಮ ದೇವಸ್ಥಾನದ ಹತ್ತಿರ ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಪತ್ರಕರ್ತರು ಯಾವತ್ತು ಕ್ರಿಯಾಶೀಲರಾಗಿ, ಸದಾ ಚಟುವಟಿಕೆಯಲ್ಲಿರುವವರು. ಯಾವುದೇ ದುರ್ಘಟನೆ, ಸಮಾಜ ಘಾತುಕ ಘಟನೆ, ಸಾಂಕ್ರಾಮಿಕ ರೋಗಗಳು ಬಂದಾಗ ಪತ್ರಕರ್ತರೇ ನಿರಂತರ ಸುದ್ದಿಯ ಬೆನ್ನುಬೀಳುವವರು. ಅದೇ ರೀತಿಯಲ್ಲಿ ಹಣಮಂತ ಕಂಕಣವಾಡಿಯವರು ತಾಲೂಕಿನ ಗುರ್ಲಾಪೂರ, ಹಳ್ಳೂರ, ಖಾನಟ್ಟಿ, ತುಕ್ಕಾನಟ್ಟಿ ಹಾಗೂ ಮೂಡಲಗಿ ಪಟ್ಟಣದ ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಕಿಟ್ ನೀಡಿ, ಅವರಿಗೆ ಧೈರ್ಯ ತುಂಬುವoತ ಕಾರ್ಯ ಮಾಡುತ್ತಿದ್ದಾರೆ ಎಂದರು.

ಮೂಡಲಗಿ ಪಟ್ಟಣದ ಯಲ್ಲಮ್ಮ ದೇವಸ್ಥಾನದ ಹತ್ತಿರ ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಕಿಟ್ ವಿತರಣೆ

ರಾಜ್ಯ ಪ್ರಶಸ್ತಿ ವಿಜೇತ ಸಿದ್ದಣ್ಣ ದುರುದುಂಡಿ ಮಾತನಾಡಿ, ಕೊರೊನಾ ಮಾಹಾಮಾರಿ ಈಗ ಎಲ್ಲೆಡೆ ವ್ಯಾಪಿಸುತ್ತಿದ್ದು ಆ ಬಗ್ಗೆ ಸಮಾಜಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಆದರಲ್ಲೂ ಪತ್ರಕರ್ತರು ಸಮಾಜ ಸೇವೆ ಹಾಗೂ ಸಂಕಷ್ಟದಲ್ಲಿ ಇರುವ ಬಡ ಜನರಿಗೆ ನೆರವಾಗುವುದು ಉತ್ತಮ ಕಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ಕೆಎಮ್‌ಎಫ್ ಮಾಜಿ ನಿರ್ದೇಶಕ ಶಂಕರ ಬೋಳನ್ನವರ, ಮೂಡಲಗಿ ಪುರಸಭೆ ಸದಸ್ಯ ಆನಂದ ಟಪಾಲದಾರ್, ಮಾಜಿ ಪುರಸಭೆ ಸದಸ್ಯ ರಾಮಪ್ಪ ನೇಮಗೌಡರ್, ಬಾಬು ಗದಾಡಿ, ನಾಗಪ್ಪ ಮರ್ದಿ, ಬಸಲಿಂಗಪ್ಪ ನಿಂಗನೂರು, ಬಸವರಾಜ ರೋಡನ್ನವರ, ಎಸ್.ಜಿ. ಹಂಚನಾಳ, ಮಹಾದೇವ ರಂಗಾಪೂರ, ಎಸ್.ಎಮ್ ಇಟನ್ಯಾಳ ಹಾಗೂ ಅನೇಕರು ಉಪಸ್ಥಿತರಿದ್ದರು.

ಕೂಲಿ ಕಾರ್ಮಿಕರಿಗೆ ಸ್ವಂತ ಹಣದಲ್ಲಿ ಆಹಾರ ಕಿಟ್ ವಿತರಣೆ : ದಳವಾಯಿ

ಮೂಡಲಗಿ : ಕೂಲಿ, ಕುಲಕಸುಬು ಮಾಡಿ ಜೀವನ ನಡೆಸುತ್ತಿರುವ ಬಡ ಕುಟುಂಬದ ಜನರಿಗೆ ಈ ಮಹಾಮಾರಿ ಕೊರೋನಾ ಹಿನ್ನೆಲೆ ಲಾಕ್‌ಡೌನ್ ಮಾಡಿದ್ದರಿಂದ ಕೆಲಸವಿಲ್ಲದೆ ಒಪ್ಪತ್ತಿನ ಊಟಕ್ಕೂ ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ನೆರವು ನೀಡುವುದು ಪ್ರತಿಯೊಬ್ಬರ ಕತ್ಯರ್ವವಾಗಿದೆ ಎಂದು ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ ಹೇಳಿದರು.

ಭಾನುವಾರದಂದು ಪಟ್ಟಣದ ಎಪಿಎಮ್‌ಸಿ ಆವರಣದಲ್ಲಿ ಕಾಂಗ್ರೆಸ ಮುಖಂಡ ಅರವಿಂದ ದಳವಾಯಿ ಅವರು ತಮ್ಮ ಸ್ವಂತ ಖರ್ಚಿನಿಂದ ಕೂಲಿ ಕಾರ್ಮಿಕರಿಗೆ ಹಾಗೂ ಬಡ ಮಹಿಳೆಯರಿಗೆ ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವುಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ ಪಟ್ಟಣದ ವಿವಿಧ ವಾರ್ಡುಗಳಲ್ಲಿಯ ಹಾಗೂ ಅರಭಾವಿ ಕ್ಷೇತ್ರದ ವಿವಿಧ ಗಾಮಗಳಿಗೆ ತೆರಳಿ ಅಲ್ಲಿನ ಬಡವರಿಗೆ ದಿನಸಿ ಕಿಟ್ ವಿತರಿಸುವುದಾಗಿ ಹೇಳಿ, ನಾಳೆಯಿಂದ ಜಿಲ್ಲೆ ಅನ್‌ಲಾಕ್ ಆಗುತ್ತಿದೆ ಎಂದು ಮೈಮರೆಯದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಜಾಗರೂಕರಾಗಿರಲು ಹೇಳಿದರು.

ಹಿರಿಯ ಕಾಂಗ್ರೆಸ ಮುಖಂಡ ಎಸ್ ಆರ್ ಸೋನವಾಲ್ಕರ,ಅರಭಾವಿ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸಲೀಂ ಇನಾಮದಾರ ಮಾತನಾಡಿ, ಕೊರೋನಾ ಮಹಾಮಾರಿಯಿಂದ ಇಡೀ ರಾಜ್ಯವೇ ತಲ್ಲಣಗೊಂಡಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಮಾಡುವುದರ ಮೂಲಕ ತಮ್ಮ ಜೀವವನ್ನು ರಕ್ಷಿಸಿಕೊಳ್ಳಬೇಕು ಎಂದರು.

ಕಾoಗ್ರೆಸ ಕಾರ್ಯಕರ್ತರಾದ ಬಸವರಾಜ ಪಾಟೀಲ, ಹಸನಸಾಬ ಮುಗುಟಖಾನ, ವಿರುಪಾಕ್ಷಿ ಮುಗುಳಖೋಡ, ಶರೀಫ್ ಪಟೇಲ, ಗಿರೀಶ ಕರಡಿ, ಮಲೀಕ ಕಳ್ಳಿಮನಿ, ರವಿ ಮೂಡಲಗಿ, ರಾಜು ಅತ್ತಾರ, ಚನ್ನಯ್ಯಾ ನಿರ್ವಾನಿ, ಇರ್ಶಾದ ಪೈಲವಾನ, ರಾಬರ್ಟ ಮೂಡಲಗಿ, ಮದಾರಸಾಬ ಜಕಾತಿ, ಸಾಹೇಬ ಪೀರಜಾದೆ, ಮಲ್ಲಿಕಾರ್ಜುನ ಕಬ್ಬೂರ, ಮೈನೂದ್ದೀನ ಬಳಿಗಾರ, ರಮಜಾನ ಬಿಜಾಪೂರ, ರಾಹುಲ ಕಾಂಬಳೆ, ಕುಮಾರ ದೊಡಮನಿ ಉಪಸ್ಥಿತರಿದ್ದರು.

ಕೃಷಿ ಮಸೂದೆಗಳ ಪ್ರತಿ ಸುಟ್ಟು ವಿಶೇಷ ಆಚರಣೆ

ಮೈಸೂರು,ಜೂ.5:-  ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಸಂಪೂರ್ಣ ಕ್ರಾಂತಿಗೆ ಕರೆ ನೀಡಿದ ದಿನವಾದ ಇಂದು  ಮೈಸೂರು ಜಲದರ್ಶಿನಿ ಬಳಿ ಸಂಸದ ಪ್ರತಾಪ್ ಸಿಂಹ ಕಛೇರಿಯ ಎದುರು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು  ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಮಸೂದೆ ವಾಪಸಾತಿಗೆ ಒತ್ತಾಯಿಸಿ  ರೈತ ವಿರೋಧಿ ಮೂರು ಕೃಷಿ ಮಸೂದೆಗಳ ಪ್ರತಿಯನ್ನು ಸುಟ್ಟು ವಿಶೇಷವಾಗಿ ಆಚರಣೆ ಮಾಡಿದರು.

ಈ ಸಂದರ್ಭ ಮಾತನಾಡಿದ ರೈತ ಸಂಘದ ಮುಖಂಡರು  ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಸಂಪೂರ್ಣ ಕ್ರಾಂತಿಗೆ ಕರೆ ನೀಡಿದ   ದಿನವನ್ನು ವಿಶಿಷ್ಟವಾಗಿ ಆಚರಿಸಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿತ್ತು. ಅದರಂತೆ  ಇಂದು ನಾವು ದುಷ್ಟ ಸರ್ಕಾರವಾದ ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಮಸೂದೆಗಳ ಪ್ರತಿಗಳನ್ನು ರಾಜ್ಯದ ಬಿಜೆಪಿ ಸಂಸದರು ಮತ್ತು ಶಾಸಕರ ಕಛೇರಿಗಳ ಮುಂದೆ ಸುಟ್ಟು ವಿಶಿಷ್ಟವಾಗಿ ಆಚರಿಸುತ್ತಿದ್ದೇವೆ ಎಂದರು.

ರೈತ ಕೃಷಿ ವಲಯವನ್ನು ಖಾಸಗಿಯವರಿಗೆ ವಹಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದ ಮುಖಂಡರು ತಿದ್ದುಪಡಿ ಕಾಯ್ದೆ ವಾಪಸ್ ಆಗಲಿ, ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯಿದೆ ವಾಪಸ್ ಆಗಲಿ, ರೈತ ವಿರೋಧ ಕಾಯಿದೆ ಜಾರಿಗೆ ತಂದ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಪಿ.ಮರಂಕಯ್ಯ, ಹೊಸಕೋಟೆ ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮಕ್ಕೆ ಎಸ್.ಟಿ. ಸೋಮಶೇಖರ್ ಚಾಲನೆ

ಮೈಸೂರು: ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ “ವೈದ್ಯರ ನಡಿಗೆ ಹಳ್ಳಿಯ ಕಡೆಗೆ” ನಿಮ್ಮ ಆರೋಗ್ಯ ನಮ್ಮ ಭಾದ್ಯತೆ ಎಂಬ ಕಾರ್ಯಕ್ರಮಕ್ಕೆ ಹೂಟಗಳ್ಳಿಯ ಹೌಸಿಂಗ್ ಬೋರ್ಡ್ ಸರ್ಕಲ್‌ನಲ್ಲಿ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಶುಕ್ರವಾರ ಚಾಲನೆ ನೀಡಿದರು.

‘ವೈದ್ಯರ ನಡಿಗೆ ಹಳ್ಳಿಯ ಕಡೆಗೆ’ ಇದು ರಾಜ್ಯ ಸರಕಾರ ರೂಪಿಸಿದ ಉತ್ತಮ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕಾಗಿ ಇಡೀ ಜಿಲ್ಲೆಗೆ 35 ವಾಹನಗಳು ದೊರಕಿವೆ ಎಂದರು.

ಪ್ರತೀ ತಾಲೂಕಿಗೆ 5 ವಾಹನಗಳಲ್ಲಿ ತಂಡವನ್ನು ಕಳುಹಿಸಲಾಗುತ್ತದೆ. ಪ್ರತೀ ಹಳ್ಳಿಗೆ ತೆರಳಿ ಜನರ ಆರೋಗ್ಯವನ್ನು ಆಯಾ ಸ್ಥಳದಲ್ಲೇ ಪರೀಕ್ಷಿಸಿ, ಸ್ಥಳದಲ್ಲೇ ಚಿಕಿತ್ಸೆ ನೀಡುವುದು ಹಾಗೂ ಹೆಚ್ಚಿನ ಸಮಸ್ಯೆ ಇದ್ದರೆ ಕೋವಿಡ್ ಆಸ್ಪತ್ರೆಗಳಿಗೆ ಕಳುಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಶೇ 98 ರಷ್ಟು ಸಮೀಕ್ಷಾ ಕಾರ್ಯ ಪೂರ್ಣಗೊಂಡಿದೆ. ಜುಲೈ 1ರೊಳಗೆ ಎಲ್ಲಾ ಹಳ್ಳಿಗಳ ಸಂಪೂರ್ಣ ಸರ್ವೇ ಮುಗಿಸುತ್ತೇವೆ. ಜಿಲ್ಲೆಯಲ್ಲಿ ಏನೇ ಸಮಸ್ಯೆ ಇದ್ದರೂ ಅದನ್ನು ತಾಯಿ ಚಾಮುಂಡೇಶ್ವರಿ ಆದಷ್ಟು ಬೇಗ ಪರಿಹರಿಸುತ್ತಾಳೆ ಎಂಬ ಭರವಸೆ ನನಗಿದೆ ಎಂದರು.

ಈ ಕಾರ್ಯಕ್ರಮದ ಅಂಬ್ಯುಲೆನ್ಸ್ ವಾಹನದಲ್ಲಿ ಇಬ್ಬರು ವೈದ್ಯರು, ಒಬ್ಬರು ಕಿರಿಯ ನರ್ಸ್ ಹಾಗೂ ಒಬ್ಬರು ಲ್ಯಾಬ್ ಟೆಕ್ಸಿಷಿಯನ್ ಇರುತ್ತಾರೆ. ಈ ವಾಹನ ನಿತ್ಯ 20 ಹಳ್ಳಿಗಳನ್ನು ಸಂಚರಿಸುತ್ತದೆ. ಆಶಾ ಕಾರ್ಯಕರ್ತೆಯರ ಸಹಾಯದೊಂದಿಗೆ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಯಲಿದೆ ಎಂದರು.

7 ದಿನಗಳಲ್ಲಿ ಎಲ್ಲಾ ಹಳ್ಳಿಗಳಲ್ಲೂ ಅಂಬ್ಯುಲೆನ್ಸ್ ಸಂಚರಿಸಲಿವೆ. ಕೊರೊನಾ ಲಕ್ಷಣಗಳಿದ್ದರೆ ಅವರಿಗೆ ಹೋಮ್ ಐಸೋಲೇಷನ್‌ಗೆ ಚಿಕಿತ್ಸೆ ವ್ಯವಸ್ಥೆ ಮಾಡುತ್ತಾರೆ. ಎಲ್ಲರಿಗೂ ರ‍್ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ಕೊಡಲಾಗಿದೆ. ಅವರು ಪರೀಕ್ಷಿಸಿ ಗಂಭೀರ ಸಮಸ್ಯೆ ಇದ್ದರೆ ಕೋವಿಡ್ ಅಸ್ಪತ್ರೆಗೆ ರವಾನಿಸುತ್ತಾರೆ. ಇಲ್ಲವಾದರೆ ಕೋವಿಡ್ ಸೆಂಟರ್ ಗೆ ಕಳುಹಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರದಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಸಂಸದ ಪ್ರತಾಪ್ ಸಿಂಹ, ಜಿಲ್ಲಾದಿಕಾರಿ ರೋಹಿಣಿ ಸಿಂಧೂರಿ, ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ, ತಹಶೀಲ್ದಾರ್ ರಕ್ಷಿತ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಟಿ. ಅಮರನಾಥ್, ನೂಡಲ್ ಅಧಿಕಾರಿ ಡಾ. ಎಲ್.ರವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಮಿಷನರ್ ಶಿಲ್ಪನಾಗ್‌ ಬೆಂಬಲಿಸಿ ಪಾಲಿಕೆ ಎದುರು ಪ್ರತಿಭಟನೆ

ಮೈಸೂರು,ಜೂ.4:- ಮೈಸೂರು ಮಹಾನಗರ ಪಾಲಿಕೆ ಆಯಕ್ತರಾದ ಶಿಲ್ಪ ನಾಗ್ ಅವರ  ಮೈಸೂರು ಕಾರ್ಪೋರೇಟರ್‌ಗಳು,‌ ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು ನಿಂತಿದ್ದು, ಅವರ ಪರವಾಗಿ ಅಭಿಯಾನ ಆರಂಭಿಸಿ, ಪ್ರತಿಭಟನೆ ನಡೆಸಿದರು.

ಶಿಲ್ಪನಾಗ್‌ ಅವರನ್ನು ಬೆಂಬಲಿಸಿ ಪಾಲಿಕೆ ಎದುರು ಪ್ರತಿಭಟನೆ ನಡೆಸಿದ್ದು, ಐ ಸ್ಟ್ಯಾಂಡ್ ವಿತ್ ಅವರ್ ಕಮಿಷನರ್ ಎಂಬ ಬ್ಯಾನರ್ ಹಿಡಿದು  ತೊಲಗಲಿ ತೊಲಗಲಿ ಜಿಲ್ಲಾಧಿಕಾರಿಗಳು ತೊಲಗಲಿ, ಉಳಿಸಿ ಉಳಿಸಿ ಮೈಸೂರು ಉಳಿಸಿ ಎಂದು ಘೋಷಣೆ ಕೂಗಿದರು.

ಐಎಎಸ್ ಅಧಿಕಾರಿಗಳು ಬೀದಿಗೆ ಇಳಿದು ಜಗಳ ಮಾಡತಕ್ಕಂತದ್ದು ಶೋಭೆ ಅಲ್ಲ: ತನ್ವೀರ್ ಸೇಠ್ ಅಸಮಾಧಾನ

ಮೈಸೂರು: ಐಎಎಸ್ ಅಧಿಕಾರಿಗಳು ಬೀದಿಗೆ ಇಳಿದು ಜಗಳ ಮಾಡತಕ್ಕಂತದ್ದು ಯಾರಿಗೂ ಶೋಭೆ ತರುವ ಕೆಲಸವಲ್ಲ ಎಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈಗಾಗಲೇ ನಿನ್ನೆ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಐಎಎಸ್ ಅಧಿಕಾರಿಗಳು ಬೀದಿಗೆ ಇಳಿದು ಜಗಳ ಮಾಡತಕ್ಕಂತದ್ದು ಯಾರಿಗೂ ಶೋಭೆ ತರುವಂತಹ ಕೆಲಸವಲ್ಲ. ಅದರಲ್ಲೂ ವೈಯುಕ್ತಿಕವಾಗಿ ಏನಿದೆ ಎಂಬುದನ್ನು ನಾನಿನ್ನು ವಿವರಣೆಯನ್ನು ಪಡೆದುಕೊಂಡಿಲ್ಲ. ಈ ಸಂದರ್ಭ ಜನರು ಬಹಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೊರೋನಾದಿಂದ ಚಿಕಿತ್ಸೆ ಪಡೆಯುವಂಥದ್ದು, ಅವರ ಪ್ರಾಣವನ್ನು ಉಳಿಸುವಂತಹ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಚುನಾಯಿತ ಪ್ರತಿನಿಧಿಯಾಗಿರಬಹುದು, ಅಧಿಕಾರಿ ವರ್ಗದವರಾಗಿರಬಹುದು, ಸಂಘ ಸಂಸ್ಥೆಗಳಾಗಿರಬಹುದು, ಅಥವಾ ಪ್ರತ್ಯೇಕವಾಗಿ ಪ್ರತಿಯೊಬ್ಬ ಇದರಲ್ಲಿ ತನನ್ನನ್ನು ತೊಡಗಿಸಿಕೊಂಡು ಏನು ಕೆಲಸವನ್ನು ಮಾಡುತ್ತಿದ್ದಾನೆ ಒಟ್ಟಾರೆ ವ್ಯವಸ್ಥೆಗೆ  ತಲೆ ತಗ್ಗಿಸುವ ಕೆಲಸ ಆಗಿದೆ ಎಂದು ಭಾವಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಚಾರ ಏನೇ ಇರಬಹುದು. ಮೇಲಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವ ಕೆಲಸ ಸಾಧ್ಯವಾಗುತ್ತಿತ್ತು. ಅದರಲ್ಲೂ ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವರು 24ಗಂಟೆ ನಾನು ಇಲ್ಲಿರಲಿಕ್ಕಾಗಲ್ಲ, ನಾನು ಬೆಂಗಳೂರು ನನ್ನ ಕ್ಷೇತ್ರ ಕೂಡ ನೋಡಿಕೊಳ್ಳಬೇಕು. ಇಲ್ಲಿ ನೀವು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿ, ನಿಮಗೆ ಏನು ಬೇಕಾದರೂ ಫ್ರಿ ಹ್ಯಾಂಡ್ ಕೊಡುತ್ತೇನೆ ಎಂದಿದ್ದರು. ಬಹುಶಃ ಅತಿ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದ್ದೇ ಈ ಎಲ್ಲಾ ವಿಚಾರಗಳಿಗೆ ಎಡವಟ್ಟು ಮಾಡುವ ಕೆಲಸವಾಗಿದೆ. ಸಂಸದರು ಒಬ್ಬ ಚುನಾಯಿತ ಪ್ರತಿನಿಧಿಯಾಗಿ ಅವರ ವಿಚಾರಗಳ ಮಂಡನೆ ಮಾಡಿದಾಗ ಅವರ ವೈಯುಕ್ತಿಕವಾಗಿ ತೆಗೆದುಕೊಳ್ಳುವಂತದ್ದು. ಅವರವರ ಸ್ಥಾನದಲ್ಲಿ ಜವಾಬ್ದಾರಿ ಬೇರೆ ರೀತಿಯಲ್ಲಿಯೇ ಇರುತ್ತೆ. ಸಿಎಸ್ ಆರ್ ಫಂಡಿಂಗ್ ಕೇಂದ್ರೀಕೃತವಾಗಬೇಕು, ಜಿಲ್ಲೆಗೆ ಬರಬೇಕು ಅನ್ನೋದು ಜಿಲ್ಲಾಧಿಕಾರಿಗಳ ವಿಚಾರವಾಗಿದ್ದರೆ ನಗರಪಾಲಿಕೆ ಮೇಲೆ ತನ್ನದೇ ಆದ ಜವಾಬ್ದಾರಿಗಳನ್ನು ಕೊಟ್ಟಿದ್ದರು. ಬಹುಶಃ ಈ ಎಲ್ಲಾ ವಿಚಾರಗಳಿಗೆ ವಿವರವಾಗಿ ತನಿಖೆ ಆಗಬೇಕು. ಈ ವಿಚಾರ ಸಾರ್ವಜನಿಕರಿಗೆ ಬೇಕಾಗಿರುವ ವಿಚಾರ ಅಲ್ಲ. ಸಾರ್ವಜನಿಕರಿಗೆ ಇಂದು ಸಹಾಯ ಹಸ್ತ ಬೇಕಾಗಿದೆ. ಇಲ್ಲಿ ಯಾರ ಪರ, ಯಾರ ವಿರೋಧ ಅಲ್ಲ, ಇದು ಸರ್ಕಾರಿ ವ್ಯವಸ್ಥೆ ಇಲ್ಲಿ ಅಧಿಕಾರಿಗಳು ಒಂದೇ ಕಡೆ ಶಾಶ್ವತ ಅಲ್ಲ, ಚುನಾಯಿತ ಜನಪ್ರತಿನಿಧಿಗಳು ಶಾಶ್ವತವಾಗಿ ಇರ್ತಾರೆ ಅಂತ ಹೇಳಕಾಗಲ್ಲ, ಈ ವ್ಯವಸ್ಥೆ ಅಡಿಯಲ್ಲಿ ಯಾರು ಎಲ್ಲಿ ಇರಬೇಕು ಅನ್ನುವುದನ್ನು ಸರ್ಕಾರ ಮಾಡಬೇಕಾಗಿರುವಂಥದ್ದು ಎಂದರು. ಅಂತಹ ಸನ್ನಿವೇಶದಲ್ಲಿ ಇದಕ್ಕೆ ವಿವರವಾದ ವಿಚಾರಣೆ ಆಗಿ ಸತ್ಯ ಸಂಗತಿಗಳು ಹೊರಗೆ ಬರಬೇಕು. ಇದಕ್ಕೆ ವ್ಯವಸ್ಥೆ ಕಾರ್ಯರೂಪಕ್ಕೆ ಬರುವ ಜನರ ಸಂಕಷ್ಟಕ್ಕೆ ಸ್ಪಂದಿಸುವ ವ್ಯವಸ್ಥೆ ತತ್ ಕ್ಷಣದಿಂದ ಜಾರಿಯಾಗಬೇಕು. ವರ್ಗಾವಣೆ ಮಾಡುತ್ತಿರೋ, ಅವರನ್ನೇ ಇಟ್ಟುಕೊಂಡು ಮುಂದುವರಿತಿರೋ ನಮಗೆ ಅದು ಬೇಡ. ಇಂದು ಇಡೀ ರಾಜ್ಯದಲ್ಲಿ ಪದೇ ಪದೇ ಮೈಸೂರು ಹೊರಬರುತ್ತಿದೆ. ಕೊರೋನಾ ವಿಚಾರದಲ್ಲೂ ಅತಿ ಹೆಚ್ಚಿನ ಪಾಸಿಟಿವಿಟಿ ನಮ್ಮ ಜಿಲ್ಲೆಯಲ್ಲಿದೆ. ನಿಯಂತ್ರಣಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದರೂನು ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಶಾಸಕ ರಾಮದಾಸ್ ಪ್ರತಿಕ್ರಿಯಿಸಿ  ಅಧಿಕಾರಿಗಳ ಕಿತ್ತಾಟ ಒಳ್ಳೆಯ ಸಂದೇಶವನ್ನು ಕಿರಿಯ ಅಧಿಕಾರಿಗಳಿಗೆ ನೀಡಲ್ಲ, ಆಡಳಿತ ಚೆನ್ನಾಗಿರಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಹೆಡ್ ಆಗಿದ್ದುಕೊಂಡು ಎಲ್ಲವನ್ನೂ ಮಾನಿಟರ್ ಮಾಡುತ್ತಾರೆಂದು ತಿಳಿಸಿದರು.

ಉಸ್ತುವಾರಿ ಸಚಿವ ರಾಜೀನಾಮೆ ನೀಡುವಂತೆ ಆರ್.ಧೃವನಾರಾಯಣ್ ಆಗ್ರಹ

ಮೈಸೂರು : ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಪಾಲಿಕೆ ಆಯುಕ್ತೆ ಶಿಲ್ಪನಾಗ್ ನಡುವಿನ ಸಂಘರ್ಷ  ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ರಾಜೀನಾಮೆ ನೀಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಆಗ್ರಹಿಸಿದರು.

ಇಂದು  ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಅವರು  ಇದೊಂದು ದುರಾದೃಷ್ಟಕರ ಬೆಳವಣಿಗೆ. ಮೈಸೂರಿಗೆ ಅದರದ್ದೇ ಆದ ಹೆಸರಿದೆ. ಇವತ್ತು ಮೈಸೂರಿನ ಜನತೆ ಬಡವಾಗಿದ್ದಾರೆ. ಬೆಂಗಳೂರು ಬಿಟ್ಟರೆ ಮೈಸೂರಿನಲ್ಲಿ ಹೆಚ್ಚಿನ ಪ್ರಕರಣ ಬರುತ್ತಿವೆ. ಆಡಳಿತ ನಿರ್ವಹಣೆಯಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಂಡು ಕೆಲಸ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಬಿಜೆಪಿ ಶಾಸಕರು, ಉಸ್ತುವಾರಿ ಸಚಿವರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನನ್ನ ವ್ಯಾಪ್ತಿಯನ್ನು‌ ಮೀರಿ ಹೋಗಿದೆ, ನಾನು ಅಸಹಾಯಕನಾಗಿದ್ದೇನೆ ಎಂಬ ಉಸ್ತುವಾರಿ ಸಚಿವರ ಹೇಳಿಕೆಗೆ   ಪ್ರತಿಕ್ರಿಯಿಸಿ ನೀವು ಅಧಿಕಾರ ನಡೆಸಲು ಅಸಮರ್ಥರಾಗಿದ್ದೀರಿ. ಕೂಡಲೇ ರಾಜೀನಾಮೆ ನೀಡಿ. ನಿಮ್ಮ‌ಲ್ಲಿ ಅಸಹಾಯಕತೆ ಅರಾಜಕತೆ ಕಾಣುತ್ತಿದೆ.   ನೀವು ನಿಯಂತ್ರಣ ಮಾಡೋಕೆ ಆಗಿಲ್ಲ ಅಂದರೆ ರಾಜೀನಾಮೆ ಕೊಡಿ ಎಂದು   ಆಗ್ರಹಿಸಿದರು.
ಕರ್ನಾಟಕದಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ. ಯತ್ನಾಳ್ ಅವರೇ ಆರೋಪ ಮಾಡಿದ್ದಾರೆ. ಜವಾಬ್ದಾರಿ ಮರೆತು, ಭ್ರಷ್ಟಾಚಾರ ನಡೆಯುತ್ತಿದೆ. ಮೈಸೂರಿನಲ್ಲಿ ಕೋವಿಡ್ ಸ್ಕ್ಯಾಂಡಲ್ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು    ಒತ್ತಾಯಿಸಿದರು.

ರೋಹಿಣಿ ಸಿಂಧೂರಿ ವಿರುದ್ಧ ಶಿಲ್ಪನಾಗ್ ಗಂಭೀರ ಆರೋಪ

ಮೈಸೂರು,ಜೂ.4:- ಎಲ್ಲವನ್ನು ಎಲ್ಲರನ್ನೂ ಸಮನಾಗಿ ನೋಡಬೇಕು ಎಂದು  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ  ಪಾಲಿಕೆಯ ಆಯುಕ್ತರಾದ ಶಿಲ್ಪನಾಗ್  ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಗಂಭೀರ ಆರೋಪ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರು  ರೋಹಿಣಿ ಸಿಂಧೂರಿ ವಿರುದ್ಧ  ಮತ್ತೆ ಆಕ್ರೋಶ ಹೊರ ಹಾಕಿದರು.

ಸುತ್ತೂರು ಮಠಕ್ಕಿಂದು ಕಾರ್ಯಕ್ರಮ ನಿಮಿತ್ತ ತೆರಳಿದ್ದ    ಶಿಲ್ಪಾನಾಗ್ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರಿಗೆ ನಮಸ್ಕರಿಸಿ, ಆಶೀರ್ವಾದ ಪಡೆದರು. ಬಳಿಕ ಮಾತನಾಡಿ ಯಾರಿಗೂ ಸಹ ತಾನು ಮಾಡಿದ್ದೇ ಸರಿ ಎಂಬ ಭಾವನೆ ಬೇಡ. ಒಬ್ಬರ ಅಹಂಕಾರದಿಂದ ವ್ಯವಸ್ಥೆ ಹಾಳಾಗುತ್ತಿದೆ. ಹೀಗಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಎಲ್ಲವೂ ನಾನೇ ಸರಿ ಎಂಬುದು ಸರಿಯಲ್ಲ. ಜಿಲ್ಲಾಡಳಿತದಿಂದ ತುಂಬಾ ಲೋಪದೋಷ ಇತ್ತು. ಪಾಲಿಕೆಯಿಂದ ಸಾಕಷ್ಟು ಕೋವಿಡ್ ಕೆಲಸ ಆಗಿದೆ. ಈ ನಡುವೆ ಜಿಲ್ಲಾಧಿಕಾರಿಗಳು ಹೆಚ್ಚು ಇಂಟ್ರೆಸ್ಟ್ ತೋರಿಸಬಹುದಿತ್ತು. ನಾವು ಎಲ್ಲ ಸಂಸ್ಥೆಗಳ‌ ಜೊತೆ ಮಾತಾಡಿ ಕೋವಿಡ್ ಕಂಟ್ರೋಲ್ ಗೆ ಸಿದ್ದತೆ ಮಾಡಿದ್ದೆವು. ಅಹಂಕಾರ ಇಷ್ಟು ಹೆಚ್ಚಾಗಿ ಇರಬಾರದು. ಎಲ್ಲವನ್ನು ಎಲ್ಲರನ್ನೂ ಸಮನಾಗಿ ನೋಡಬೇಕು ಎಂದು  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನನಗೆ ಅಹಂಕಾರ ಇರಲಿಲ್ಲ, ಕೆಲಸ ಮಾಡಬೇಕಿರುವುದೇ ನನ್ನ ಉದ್ದೇಶ. ಸಿಎಸ್‌ ಆರ್ ಫಂಡ್ ಬಗ್ಗೆ ಯಾರೂ ಜವಾಬ್ದಾರಿ ತೆಗೆದುಕೊಂಡಿಲ್ಲ. ಹಾಗಾಗಿ ನಾನೇ ಇದರ ಜವಾಬ್ದಾರಿ ತೆಗೆದುಕೊಂಡೆ. ಎಲ್ಲರೂ ಕೊರೋನಾ ಕಂಟ್ರೋಲ್‌ ಗೆ ಕೈ ಜೋಡಿಸಿದ್ದಾರೆ ಎಂದು   ತಿಳಿಸಿದರು.

ಐಎಎಸ್ ರಾಜೀನಾಮೆ ನನ್ನ ದುಡುಕಿನ ನಿರ್ಧಾರ ಅಲ್ಲ. ರಾಜೀನಾಮೆ ನಿರ್ಧಾರ ನೋವಿನಿಂದ ತೆಗೆದುಕೊಂಡಿದ್ದು.  ವಾರ್ ರೂಮ್ ನಲ್ಲಿ ಲೋಪದೋಷಗಳಿತ್ತು. ಕೊರೋನಾ ನಿಯಂತ್ರಣದಲ್ಲಿ ಕೆಲಸ ಮಾಡಿದ್ದೇನೆ. ಕೊರೋನಾ ನಿಯಂತ್ರಣಕ್ಕೆ ಶ್ರಮಿನಿಸಿದ್ದೇನೆ. ನಾನು ಯಾವುದೇ ರೀತಿ ತಪ್ಪು ಮಾಡಿದ್ದರೆ ಕ್ಷಮಿಸಿ  ಎಂದು ನುಡಿದರು.

ಮೈಸೂರಿನ ಇಂಜಿನಿಯರ್ ಓರ್ವ ಕೊರೋನಾ ಸೋಂಕಿಗೆ ಬಲಿ

ಮೈಸೂರು:  ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮೈಸೂರಿನ ಇಂಜಿನಿಯರ್ ಓರ್ವರು ಕೊರೋನಾ ಸೋಂಕಿಗೆ ಸಿಲುಕಿ ಬಲಿಯಾಗಿದ್ದಾರೆ.

ನವೀನ್ ಕುಮಾರ್ ಎಂಬವರೇ ಕೊರೋನಾಕ್ಕೆ ಬಳಿಯಾದವರಾಗಿದ್ದು, ಇವರು ಮೈಸೂರಿನ ಆಲನಹಳ್ಳಿ ಬಡಾವಣೆ ನಿವಾಸಿ.  ಬೆಂಗಳೂರಿನ ಜೈನ್ ವಿವಿಯಲ್ಲಿ ಕೆಲಸ‌ ಮಾಡುತ್ತಿದ್ದರು. ಈ ನಡುವೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನವೀನ್  ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದರು.
ಮೈಸೂರಿಗೆ ಬಂದ ವೇಳೆ ನವೀನ್ ಕುಮಾರ್ ಕೊರೋನಾ ತಪಾಸಣೆ ಮಾಡಿಸಿದ್ದರು. ಈ ವೇಳೆ ನವೀನ್‌ ಗೆ ಪಾಸಿಟಿವ್ ಎಂದು ವರದಿ ಬಂದಿದೆ. ಬಳಿಕ ನವೀನ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಆದರೆ ನವೀನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


WhatsApp
Follow by Email