ಕೊರೊನಾ ವೈರಸ್ ಮುಂಜಾಗೃತೆಗಾಗಿ ಕೆಎಮ್‍ಎಫ್ ದಿಟ್ಟ ಕ್ರಮ-ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.

ಬೆಂಗಳೂರು: ಮುಂದಿನ ದಿನಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯ ಮಾರುಕಟ್ಟೆಯನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳು ಶಕ್ತಿ ಮೀರಿ ದುಡಿದು ಕೆಎಮ್‍ಎಫ್ ಬಲವರ್ಧನೆಗೆ ಶ್ರಮಿಸುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಬುಧವಾರದಂದು ಬೆಂಗಳೂರಿನಲ್ಲಿ 14 ಜಿಲ್ಲಾ ಹಾಲು ಉತ್ಪಾದನಾ ಒಕ್ಕೂಟಗಳ ಅಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹಾಲು ಶೇಖರಣೆ, ಮಾರಾಟವನ್ನು ಅಭಿವೃದ್ದಿ ಪಡಿಸುವ ಸಂಬಂಧ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಮಾರುಕಟ್ಟೆಯ ಬೆಳವಣಿಗೆಗೆ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ನಂದಿನಿಯ ಎಲ್ಲ ಉತ್ಪನ್ನಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಹಾಗೂ ಪ್ರಚಾರಪಡಿಸಿ ಸಾರ್ವಜನಿಕರಿಗೆ ನಮ್ಮ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಅಧಿಕಾರಿಗಳು ರೈತರೊಂದಿಗೆ ಉತ್ತಮ ಸಂಬಂಧವನ್ನಿಟ್ಟಿಕೊಂಡು ಮಾರುಕಟ್ಟೆಯನ್ನು ವಿಸ್ತರಿಸಬೇಕು. ಒಟ್ಟಿನಲ್ಲಿ ಕೆಎಮ್‍ಎಫ್ ಸಮಗ್ರ ಅಭಿವೃದ್ದಿಗಾಗಿ ಪಣತೊಡುವಂತೆ ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿಕೊಂಡರು.
ಕೆಎಮ್‍ಎಫ್‍ನ ಪ್ರಗತಿಯಲ್ಲಿ ರೈತರೇ ಶಕ್ತಿಯಾಗಿದ್ದು, ಅವರಿಗೆ ಆರ್ಥಿಕ ಶಕ್ತಿ ನೀಡಲು ರಾಜ್ಯದಲ್ಲಿರುವ ಎಲ್ಲ ಹಾಲು ಒಕ್ಕೂಟಗಳು ಈಗಿರುವ ದರವನ್ನೇ ಮುಂದುವರೆಸಿಕೊಂಡು ಹೋಗಬೇಕು. ರೈತರಿಗೆ ಪ್ರತಿ ಲೀಟರ್‍ಗೆ ಹೆಚ್ಚಿನ ದರವನ್ನು ಕೆಎಮ್‍ಎಫ್ ನೀಡುತ್ತಿದೆ. ಇದರಿಂದ ರೈತರ ಆರ್ಥಿಕಮಟ್ಟವೂ ಹೆಚ್ಚಳವಾಗಲಿದೆ. ರೈತರ ಏಳ್ಗೆ ಹಾಗೂ ಸ್ವಾವಲಂಬಿ ಬದುಕಿಗೆ ನಮ್ಮ ಸಂಸ್ಥೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಕೊರೊನಾ ಸೊಂಕಿನಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಈಗಾಗಲೇ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿವೆ. ಅದಕ್ಕೆ ಸಾರ್ವಜನಿಕರ ಸಹಕಾರವು ಕೂಡಾ ಅಷ್ಟೆ ಅಗತ್ಯವಾಗಿದೆ. ಕೊರೊನಾ ವೈರಸ್ಸಿನಿಂದ ಕೆಎಮ್‍ಎಫ್ ಹಾಲಿನ ಉತ್ಪನ್ನಗಳಿಗೆ ಯಾವುದೇ ರೀತಿಯ ನಷ್ಟವಿಲ್ಲ. ಕೊರೊನಾ ವೈರಸ್ ಬಗ್ಗೆ ನಮ್ಮ ಕೆಎಮ್‍ಎಫ್‍ನ ಎಲ್ಲ 14 ಹಾಲು ಒಕ್ಕೂಟಗಳು ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುತ್ತಿವೆ. ಸೊಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಅವಿರತವಾಗಿ ಶ್ರಮಿಸುತ್ತಿದ್ದಾರೆಂದು ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವಾಯ್. ನಂಜೇಗೌಡ, ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಹಾಲು ಒಕ್ಕೂಟಗಳ ಅಧ್ಯಕ್ಷರುಗಳು, ಕಹಾಮ ಆಡಳಿತ ಮಂಡಳಿಯ ಸದಸ್ಯರು, ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
Share
WhatsApp
Follow by Email