ಜನತಾ ಕರ್ಫ್ಯೂ; ಅನಗತ್ಯವಾಗಿ ಮನೆಯಿಂದ ಹೊರಬಂದರೆ ಕೇಸ್‌ ದಾಖಲು , ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಎಚ್ಚರಿಕೆ

ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ನಾಳೆ ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಹೊರಬಂದರೆ ಪ್ರಕರಣ ದಾಖಲಿಸಿ, ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ.
ಸಾರ್ವಜನಿಕರು ಬೀದಿಗೆ ಬಂದು ಗುಂಪು ಸೇರುವುದು, ನಿಂತುಕೊಳ್ಳುವುದು, ಟೈಂಪಾಸ್ ಮಾಡುವುದು ಮಾಡಿದರೆ ಕೇಸ್‌ ದಾಖಲಿಸಲಾಗುತ್ತದೆ. ಸಾರ್ವಜನಿಕರು ಜನತಾ ಕರ್ಫ್ಯೂವನ್ನು ಬಹಳ ಗಂಭಿರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಸಾರ್ವಜನಿಕರು ಮನೆಯಲ್ಲಿಯೇ ಇರಬೇಕು, ಪ್ರವಾಸ, ವಾಕಿಂಗ್, ಕಾರ್ಯಕ್ರಮ ಅಂತ ಓಡಾಡುವಂತಿಲ್ಲ. ರಸ್ತೆ ಮೇಲೆ ತಿರುಗಾಡುತ್ತಿದ್ದರೆ 31(L) ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಜೊತೆ ಮಾತುಕತೆ ನಡೆಸಿದ್ದೇವೆ ಎಂದರು.
ಜನತಾ ಕರ್ಫ್ಯೂಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ. ಹೊಟೇಲ್‌ಗಳು ಬಂದ್‌ ಆಗಿರಲಿವೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ರಸ್ತೆಗಿಳಿಯುವುದು ಅನುಮಾನ ಎನ್ನಲಾಗಿದೆ. ಈಗಾಗಲೇ ಭಾರತೀಯ ರೈಲ್ವೇ ಕೂಡ ಶನಿವಾರ ಮಧ್ಯರಾತ್ರಿಯಿಂದಲೇ ಎಲ್ಲಾ ಪ್ಯಾಸೆಂಜರ್‌ ರೈಲುಗಳನ್ನು ರದ್ದುಗೊಳಿಸಿದೆ.
Share
WhatsApp
Follow by Email