ಬಳ್ಳಾರಿ: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿ ಬಿದನೂರು ತಾಲೂಕಿನ ವೃದ್ಧೆ ಕರೊನಾದಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ವೃದ್ಧೆಯ ಸಾವಿಗೆ ಸಂಬಂಧಿಸಿದ ವರದಿ ಬಂದಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೂಲಕ ರಾಜ್ಯದಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿದೆ. ಗೌರಿಬಿದನೂರು ತಾಲೂಕಿನಲ್ಲಿ ಮೃತಪಟ್ಟ ವೃದ್ಧೆಯ ಮನೆಯ ಸುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಇದುವರೆಗೆ 1.30 ಲಕ್ಷ ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ. 214 ಜನರಿಗೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ 52 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕರೊನಾಗೆ ಸಂಬಂಧಿಸಿದಂತೆ ಸಭೆ ನಡೆಸುವೆ. ಮುಖ್ಯಮಂತ್ರಿ ಪ್ರತಿ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಜನರು ಆತಂಕಪಡಬಾರದು. ಆದರೆ, ಲಾಕ್ ಡೌನ್ ಇದ್ದರೂ ಅನೇಕ ಜನರು ಹೊರಗೆ ಬರುತ್ತಿದ್ದಾರೆ. ಮೊದಲು ಜೀವ ಉಳಿಸಿಕೊಳ್ಳಿ ಎಂದು ಸಚಿವ ಶ್ರೀರಾಮುಲು ಮನವಿ. ಪೊಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲು ಸೂಚಿಸುವೆ ಎಂದು ಹೇಳಿದರು. ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಗುರುವಾರ ಕರೊನಾ ವೈರಸ್ ಸಂಬಂಧಿಸಿದಂತೆ ಸಭೆ ಆಯೋಜಿಸಲಾಗಿತ್ತು. ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಬಿ.ನಾಗೇಂದ್ರ, ಎಂಎಲ್ಸಿಗಳಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸಿ.ಕೆ.ಬಾಬಾ ಹಾಗೂ ಇತರರು ಹಾಜರಿದ್ದರು.
ಅಥಣಿ:ಕೋರೋನ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಗಡಿ ಗ್ರಾಮಗಳಾದ ಕೊಟ್ಟಲಗಿ,ಬಾಳಿಗೇರಿ,ತೇಲಸಂಗ,ಕಾಗವಾಡ ಸೇರಿದಂತೆ ಹಲವಾರು ಚೆಕ್ ಪೊಸ್ಟಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ ಪ್ರತಿಯೊಂದು ಚೆಕ್ ಪೋಸ್ಟ್ ಗಳಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ತಪಾಸಣೆಗೊಳಪಡಿಸಿ ಪ್ರಯಾಣಿಕರನ್ನು ಪರೀಕ್ಷಿಸುತ್ತಿದ್ದಾರೆ ಅಲ್ಲದೆ ಯಾವುದೇ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗುವ ವಾಹನವಾಗಲಿ ಅಥವಾ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಪ್ರವಾಸಿಗರ ವಾಹನಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಜನ ಅರಿವಿಲ್ಲದೆ ಇನ್ನೂ ದೂರದೂರದಿಂದ ಗುಡ್ಡಾಪುರ ಮುಂತಾದ ದೇವಸ್ಥಾನಗಳಿಗೆ ಹೋಗುವ ಪ್ರಯತ್ನಗಳನ್ನು ಮಾಡುತ್ತಿದ್ದು ಚೆಕ್ ಪೋಸ್ಟ್ದಲ್ಲಿರುವ ಸಿಬ್ಬಂದಿಗಳು ಸಂಪೂರ್ಣವಾಗಿ ಅವರಿಗೆ ಪ್ರವೇಶ ನಿರಾಕರಿಸಿ ಹಿಂತಿರುಗಿಸುತ್ತಿರುವುದು ಗಡಿಗ್ರಾಮ ಕೊಟ್ಟಲಗಿ ಚೆಕ್ ಪೋಸ್ಟ್ನಲ್ಲಿ ಕಂಡುಬಂತು.
ಅಥಣಿ: ದೇಶಾದ್ಯಂತ 144 ಜಾರಿ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಗುಂಪು ಕೂಡಿದ್ದ ಜನರಿಗೆ ಅಥಣಿ ಡಿವೈಎಸ್ ಪಿ ಎಸ್ ವಿ ಗಿರೀಶ್ ಕಡಖ್ ವಾರ್ನ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ದಿನಸಿ ಅಂಗಡಿಗಳ ಪರವಾನಿಗೆ ಕೊಡಲು ಅಥಣಿ ಪುರಸಭೆ ಮುಂದಾಗಿದ್ದು ತರಕಾರಿ ಮಾರಾಟಕ್ಕೆ ಸಂಬoಧಿಸಿದoತೆ ಪಟ್ಟಣದ ವ್ಯಾಪಾರಿಗಳಿಗೆ ಈ ಹಿಂದೆಯೆ ಮನೆ ಮನೆಗೆ ತೆರಳಿ ವ್ಯಾಪಾರ ಮಾಡಲು ಅನುವು ಮಾಡಿಕೊಡಲಾಗಿತ್ತು. ಆದರೂ ಕೂಡ ತರಕಾರಿ ಮಾರುಕಟ್ಟೆಯಲ್ಲಿ ಜನರು ಗುಂಪು ಕೂಡಿದ್ದು ಗಮನಕ್ಕೆ ಬರುತ್ತಿದ್ದಂತೆಯೇ ಜನರನ್ನು ಚದುರಿಸುವದಕ್ಕಾಗಿ ಅಲ್ಲಲ್ಲಿ ಲಾಠಿ ರುಚಿ ಉನ್ನಿಸಿ ಜನರನ್ನು ಮನೆಗೆ ತೆರಳುವಂತೆ ಮಾಡಿದರು. ಶಾಂತಿ ಸುವ್ಯವಸ್ಥೆ ಕಾಪಾಡಲು ಜನರಿಗೆ ಎಷ್ಟು ಸಲ ಹೇಳಿದರು ಕೂಡ ಕೇಳದ ಹಿನ್ನೆಲೆಯಲ್ಲಿ ಲಾಠಿ ಬೀಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು ಕಂಡು ಬಂತು.ಲಾಠಿ ಏಟು ಬೀಳುತ್ತಿದ್ದಂತೆಯೆ ತರಕಾರಿ ವ್ಯಾಪಾರಿಗಳು ಸ್ಥಳದಲ್ಲೇ ತರಕಾರಿ ಬಿಟ್ಟು ಓಡಿದರೆ ಖರೀದಿಗೆ ಬಂದವರು ಕೂಡ ದಿಕ್ಕಾಪಾಲಾದ್ದರು. ಈ ವೇಳೆ ಅಥಣಿ ಸಿಪಿಐ ಶಂಕಗೌಡ ಬಸನಗವಡಾ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮಹಂತೇಶ್, ಕೌಲಾಪೂರ,ಕಿರಿಯ ಆರೋಗ್ಯ ನಿರಿಕ್ಷಕ ಬಸವರಾಜ ಬೋಳಿಶೆಟ್ಟಿ, ಮತ್ತು ಪುರಸಭೆ ಹಾಗೂ ಪೋಲಿಸ್ ಸಿಬ್ಬಂದಿ ಉಪಸ್ಥಿತರಿದ್ದರು. ಅಥಣಿ ಪಟ್ಟಣದಲ್ಲಿ ಶಿಸ್ತು ಮತ್ತು ಶಾಂತಿ ಕಾಪಾಡಿಕೊಳ್ಳಲು ಹಾಗೂ ಕೊರೊನಾ ಜಾಗೃತಿ ಮೂಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಉಳಿದ ಇಲಾಖೆಯ ಹಾಗೂ ತಮ್ಮ ಇಲಾಖೆಯ ಗುತ್ತಿಗೆ ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಸಹಕರಿಸುತ್ತಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ್ ಕವಲಾಪೂರ ಹೇಳಿದರು
ಅಥಣಿ : ಕೊರೊನಾ ಸೋಂಕಿನ ತಗಲಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿ ಹರಡಿದ ವ್ಯಕ್ತಿಯ ವಿರುದ್ಧ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಪೊಲೀಸ್ರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಅರೋಪಿ ಪರಾರಿಯಾಗಿದ್ದು, ಪತ್ತೇಗಾಗಿ ಪೊಲೀಸ್ ತಂಡ ರಚನೆ ಮಾಡಿದ್ದಾರೆ ಗೌಡೇಶ ಬಿರಾದಾರ ತುಂಗಳ ಎಂಬ ಹೆಸರಿನ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು ಆತ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ” ಗೋವಾ ರಾಜ್ಯಕ್ಕೆ ಕೂಲಿ ಅರಸಿ ಹೋಗಿದ್ದ ಐಗಳಿ ಗ್ರಾಮದ 5 ಜನರು ಕೊರೋನಾ ಸೋಂಕಿಗೆ ತಗಲಿದೆ ಎಂಬ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ, ಇವತ್ತು ಗೋವಾದಿಂದ ಮರಳಿ ಬರುವಾಗ ಅಥಣಿಯಲ್ಲಿ ವಶಕ್ಕೆ ಪಡೆದುಕೊಂಡ ಸಿಬ್ಬಂದಿ ” ಎಂಬುವ ಮೆಸೇಜನ್ನು ಪೋಸ್ಟ್ ಮಾಡಿ ಕರೋನಾ ( ಕೊವಿಡ – 19 ) ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ಸುಳ್ಳು ವದಂತಿಯನ್ನು ಹರಡಿ ಸಾರ್ವಜನಿಕ ನೆಮ್ಮದಿ ಹಾಳು ಮಾಡಿದ ಅಪರಾಧದ ಮೇಲೆ ಕಲಂ 505 (1) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಅಥಣಿ ಡಿವೈಎಸ್ಪಿ ಎಸ್, ವಿ, ಗಿರೀಶ್ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಲ್ಲಿ ಭಯ ಭೀತಿ ಹುಟ್ಟಿಸಿ ಶಾಂತಿ ಕೆಡಿಸಿ ನೆಮ್ಮದಿ ಹಾಳುಮಾಡುವ ಇಂತಹಾ ಸುಳ್ಳು ವದಂತಿಗಳನ್ನು ಹಬ್ಬಿಸುವ ಕೀಡಿ ಗೇಡಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು
ಮುದ್ದೇಬಿಹಾಳ: ಕೋರೋನಾ ವೈರಸ್ ಹರಡದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ನೀಡಿದ ಲಾಕ್ ಡಾನ್ ವೇಳೆ ಸಾರ್ವಜನಿಕರಿಗೆ ಅಗತ್ಯ ಜೀವನಾಂಶಕ ವಸ್ತುಗಳ ಖರಿದಿಗಾಗಿ ಅವಕಾಶ ಕಲ್ಪಿಸಲಾಗಿದೆ. ಕಾರಣ ಸಾರ್ವಜನಿಕರು ಸಮಾಜಿಕ ಅಂತರ ಕಾಯ್ದಯಕೊಳ್ಳುವ ಮೂಲಕ ದಿನಸಿಗಳನ್ನು ಖರಿದಿ ಮಾಡಿಕೊಳ್ಳಬೇಕು ಕಿರಾಣಿ, ತರಕಾರಿ ಹಾಲು, ಔಷಧಿ ಆಸ್ಪತ್ರೆ ಹೊರತು ಪಡಿಸಿ ಇನ್ನಿತರ ಯಾವೂದೇ ಅಂಗಡಿಗಳನ್ನು ತರೆಯುವಂತಿಲ್ಲ ಮುಂದಿನ ಸರಕಾರದ ಆದೇಶದವರೆಗೂ ನಿಷೇದಾಜ್ಞೇ ಜಾರಿಯಲ್ಲಿರುತ್ತದೆ ಹಾಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ತಹಶಿಲ್ದಾರ ಜಿ ಎಸ್ ಮಳಗಿ ಹೇಳಿದರು.
ಪಟ್ಟಣದ ಮಿನಿವಿಧಾನ ಸೌಧ ಸಭಾಭವನದಲ್ಲಿ ಗುರವಾರ ಕಿರಾಣಿ ವರ್ತಕರು ದಿನಸಿ ಅಂಗಡಿ, ತರಕಾರಿ ವ್ಯಾಪಾರಸ್ಥರ ಹಾಗೂ ತರಕಾರಿ ದಲ್ಲಾಳಿಗಳ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ಇಡೀ ವಿಶ್ವವ್ಯಾಪಿ ಕೋರೋನಾ ರೋಗ ಬೀತಿಯಿಂದ ಜನರು ತತ್ತರಿಸಿಹೋಗಿದ್ದಾರೆ ಅದರಂತೆ ತಾಲೂಕಿಗೆ ಈ ಮಹಾಮಾರಿ ರೋಗ ಹರಡದಂತೆ ಏನೇಲ್ಲ ಕ್ರಮ ಕೈಗೊಳ್ಳಬೇಕು ಎಂಬುದನ್ನು ತಿರ್ಮಾನಿಸಿ ಜನರ ಹಿತದೃಷ್ಠಿಯಿಂದ ಜಿಲ್ಲಾಧಿಕಾರಿಗಳು ಸೂಚನೆ ಮೇರೆಗೆ ಬಿಗಿ ಬಂದೋಬಸ್ತ ಕಟ್ಟೆಚ್ಚರ ವಹಿಸಲಾಗಿದೆ ಎಂದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ ಮಾತನಾಡಿ ಯಾವೂದೋ ಒಂದು ವಯಕ್ತಿಕ ಹಿತಾಸಕ್ತಿಯಿಂದ ಈ ತಿರ್ಮಾನ ಕೈಗೊಳ್ಳಲಾಗಿಲ್ಲ ಕೋರೋನಾ ವೈರಾಣು ತಾಲೂಕಿನಲ್ಲಿ ನುಸುಳದಂತೆ ಒಬ್ಬರಿಂದ ಇನ್ನೊಬ್ಬರಿ ಹರಡದಂತೆ ಈ ರೀತಿ ತಿರ್ಮಾನ ಕೈಗೊಳ್ಳಲಾಗಿದೆ.
ಇದು ಹೀಗೇ ಎಷ್ಟು ದಿನಗಳವರೆಗೆ ಇರುತ್ತದೆ ಏನೋ ಗೊತ್ತಿಲ್ಲ ಕಾರಣ ಜನರಿಗೆ ದಿನಬಳಕೆಗೆ ಆಹಾರ ಧಾನ್ಯ ಸೇರಿದಂತೆ ಅಗತ್ಯ ಜೀವನಾಂಶ ವಸ್ತಗಳನ್ನು ಒದಗಿಸುವ ಸರಕಾರದ ಕರ್ತವ್ಯವೂ ಕೂಡ ಆಗಿದೇ ಈ ನಿಟ್ಟಿನಲ್ಲಿ ಕಿರಾಣಿ, ದಿನಸಿ ಅಂಗಡಿ ವ್ಯಾಪಾರಸ್ತರು ಸಂಪೂರ್ಣ ಅಂಗಡಿಗಳನ್ನು ತೆರೆಯದೇ ಜನರಿಗೆ ಬೇಕಾಗುವ ಜೀವನಾಂಶ ವಸ್ತುಗಳನ್ನು ಮನೆಮನೆಗೆ ತಲುಪಿಸುವ ಅವಕಾಶ ನೀಡಿದೆ ಅದರಂತೆ ತರಕಾರಿ ವ್ಯಾಪಾರಸ್ತರು ಒಂದೇ ಕಡೆ ಇಟ್ಟುಕೊಂಡು ಮಾರಾಟ ಮಾಡುವ ಬದಲಾಗಿದೆ ಪಟ್ಟಣದ ಪ್ರತಿ ವಾರ್ಡುಗಳಿಗೆ ತಳ್ಳುವ ಗಾಡಿ, ಅಟೋ ಸೇರಿದಂತೆ ಇತರೇ ವಾಹಗಳ ಮೂಲಕ ವ್ಯಾಪಾರ ಮಾಡಲು ಪುರಸಭೆಯಿಂದ ಪರವಾನಿ ಪತ್ರ ನೀಡಲಾಗುವುದು ಅಂತಹವರು ಮಾತ್ರ ವ್ಯಾಪಾರ ಮಾಡಬಹುದು ಎಂದರು.
ಈ ಸoದರ್ಭದಲ್ಲಿ ಸಿಪಿಐ ಆನಂದ ವಾಗ್ಮೋರೆ ಹಾಗೂ ಪಿಎಸ್ ಮಲ್ಲಪ್ಪ ಮಡ್ಡಿ ಅವರು ಮಾತನಾಡಿ ಸರಕಾರದ ಆದೇಶವನ್ನು ಉಲ್ಲಂಘಸಿ ನಡೆದುಕೊಂಡರೇ ಯಾರೇ ಅಗಿರಲಿ ತಕ್ಷಣವೇ ಅಂತವರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟ ಲಾಗುವುದು ಈಗಾಗಲೇ ಸಾಕಷ್ಟು ಬಾರಿ ತೀಲಿಸಿದರು ಸಾರ್ವಜನಿಕರು ಸಂಚಾರ ಮಾಡುವುದು ಗುಂಪು ಗುಂಪಾಗಿ ನಿಲ್ಲುವುದು ಕಡಿಮೇಯಾಗಿಲ್ಲ ಅದಕ್ಕೆಲ್ಲ ಈಗಲೇ ಮುಕ್ತಾಯ ಹೇಳಬೇಕು ಎಂದರು.ಈ ವೇಳೆ ಗಣ್ಯ ವ್ಯಾಪಾರಸ್ತರಾದ ಗಫೂರಸಾಬ ಮಕಾನದಾರ, ಅಪ್ಪು ದೇಗಿನಾಳ,ವಿ ಕೆ ದೇಶಪಾಂಡೆ ,ಪಿಂಟು ಸಾಲಿಮನಿ ಸೇರಿದಂತೆ ಮತ್ತಿತರರು ಇದ್ದರು.
ಮೂಡಲಗಿ: ಕೊರೋನಾ ಮಾರಕ ವೈರಸ್‍ದಿಂದ ದೇಶವೇ ಬೆಚ್ಚಿ ಬಿಳಿಸುವಂತೆ ಮಾಡಿದೆ. ಪ್ರತಿಯೊಬ್ಬರಿಗೆ ಅವರ ಜೀವ ಕಾಪಾಡಿಕೊಳ್ಳುವದು ಅತ್ಯವಶ್ಯಕವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು. ಅವರು ಗುರುವಾರ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನಿರ್ಧೇಶನದಂತೆ ಗ್ರಾಮೀಣಾಭೀವೃದ್ಧಿ, ಶಿಕ್ಷಣ, ಪೋಲಿಸ್, ಆರೋಗ್ಯ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಕೊರೋನಾ ಮುಂಜಾಗೃತ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿದರು. ದೇಶಕ್ಕೆ ದೇಶವೇ ಈ ಮಾರಕ ವೈರಲ್ ವೈರಸ್‍ದಿಂದಾಗಿ ಮನುಕುಲ ಅಪಾಯದ ಅಂಚಿನಲ್ಲಿದೆ. ಈ ಮಾರಕ ರೋಗ ತಡೆಯಲು ನಾವು ಲಕ್ಷ್ಮಣ ರೇಖೆಯನ್ನು ಹಾಕಿಕೊಳ್ಳುವ ಮೂಲಕ ಪಾರಾಗಬಹುದು. ತಾಲೂಕಾಡಳಿತದಿಂದ ಸಾರ್ವಜನಿಕರಿಕೆ ತೊಂದರೆಯಾಗದ ನಿಟ್ಟಿನಲ್ಲಿ ಸಮರೋಪಾಧಿಯಲ್ಲಿ ಕಾರ್ಯವಾಗುತ್ತಿದೆ.
ಅಗತ್ಯ ದಿನಸಿ ತರಕಾರಿ ಹಾಲು ವಸ್ತುಗಳನ್ನು ನಿಗದಿತ ಅವಧಿಯಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಖರೀದಿಸಿ ಮನೆಯಲ್ಲಿಯೇ ಅರಾಮಾಗಿರಬೇಕು. ಗ್ರಾಮ ಪಂಚಾಯತಿ ತೆಗೆದುಕೊಳ್ಳುವ ಕ್ರಮಗಳನ್ನು ಸಾರ್ವಜನಿಕರು ಅಚ್ಚುಕಟ್ಟಾಗಿ ಪಾಲಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕರಿಸಬೇಕು. ಅಪಾಯದ ಕುರಿತು ಅರಿವಾದ ಕೂಡಲೇ ಆಶಾ ಕಾರ್ಯಕರ್ತೆಯರು, ಸ್ಥಳೀಯ ವೈದ್ಯರನ್ನು ಸಂಪರ್ಕಿಸಬೇಕು. ಅಗತ್ಯ ದಿನ ಬಳಕೆ ವಸ್ತುಗಳನ್ನು ಗ್ರಾಮೀಣ ಭಾಗಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ ತಾಲೂಕಾಡಳಿತವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಎರಡು ತಾಸಿಗೊಮ್ಮೆ ಕೈ ತೊಳೆದುಕೊಳ್ಳುವ ಮೂಲಕ ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕು. ಕೈಯಿಂದ, ಕೆಮ್ಮು, ಸೀನಿದಾಗ ಅಷ್ಟೇ ಅಲ್ಲದೆ ಕಣ್ಣಿನ ಮೂಲಕವು ಹರಡುವದರಿಂದ ಇವುಗಳಿಂದ ದೂರ ವಿರಲು ಪ್ರಯತ್ನಿಸಿ. ಲಾಕ್ ಡೌನ್ ಹಾಗೂ ಕಫ್ರ್ಯೂ ಇರುವದರಿಂದ ಕಾನೂನು ಪರಿಪಾಲಿಸುವ ಮೂಲಕ ಮಹಾ ಮಾರಿ ಕೊರೋನಾ ವಿರುದ್ದ ಮಹಾಸಮರ ಸಾರುವ ಮೂಲಕ ಹತ್ತಿಕ್ಕಲು ಎಲ್ಲರೂ ಸಹಕರಿಸಬೇಕೆಂದರು. ಬಿಇಒ ಅಜಿತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ ಮಾತನಾಡಿ, ಕೊರೋನಾ ಹತೋಟಿಗೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಪ್ರಧಾನಮಂತ್ರಿಯವರು ನೀಡಿರುವ ಲಾಕ್ ಡೌನ್ ಪಾಲಿಸಬೇಕು. ಅನಗತ್ಯ ಕಿರಿಕಿರಿ ಉಂಟಾದರೆ ಕಾನೂನಿನ ಪ್ರಕಾರ ಅಗತ್ಯ ಕ್ರಮವಹಿಸಲಾಗುವದು. ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆ ಜೊತೆಗೆ ತಮ್ಮ ಮನೆ ಅಕ್ಕ ಪಕ್ಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಶಿಕ್ಷಕರು, ಆಶಾಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು, ಪಂಚಾಯತ ಸಿಬ್ಬಂದಿ ಸಾರ್ವಜನಿಕರಲ್ಲಿ ವಿಶೇಷವಾಗಿ ಮಕ್ಕಳ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೊರೋನಾ ವೈರಲ್ ವೈರಸ್ ಹರಡದಂತೆ ಕ್ರಮಕೈಗೊಳ್ಳಲು ಸಲಹೆ ನೀಡಿದರು. ಸುಣಧೋಳಿ ಗ್ರಾಮ ವ್ಯಾಪ್ತಿಯಲ್ಲಿ ಮೇಡಿಕಲ್ಸ್, ಸಂತೆ, ದಿನಸಿ ಅಂಗಡಿಗಳ ಮುಂದೆ ಹಾಗೂ ಗ್ರಾ.ಪಂನ ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ ಗ್ರಾಹಕರಿಗೆ ಸಾಮಾಜಿಕ ದೂರ ಕಾಯ್ದುಕೊಳ್ಳಲು ಗುರ್ತನ್ನು ಗುರಿತಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಸಿದ್ದಾಪೂರ, ಸಿ.ಎಸ್ ವಾಲಿ, ಡಾ.ಪ್ರಶಾಂತ ಸಣ್ಣಕ್ಕಿ, ಗ್ರಾ.ಪಂ ಮಾಜಿ ಅಧ್ಯಕ್ಷ ಭೀಮಶಿ ಹೂವನ್ನವರ, ಕೆ.ಎಸ್ ಕಮತಿ, ಜಿ.ಬಿ ಪಾಟೀಲ, ಬಸವರಾಜ ಗೌಡರ, ರಾಜಕುಮಾರ ವಾಲಿ, ಬಸವರಾಜ ಗಾಣಿಗೇರ,ಬಸು ಸಿದ್ದಾಪೂರ, ಸಿದ್ದಪ್ಪ ಹರಿಜನ, ಪರಶುರಾಮ ಭಜಂತ್ರಿ, ಪಿಡಿಒ ಗಂಗಾಧರ ಮಲ್ಹಾರಿ, ಸಿ.ಆರ್.ಪಿ ಎಮ್.ಪಿ ಹಿರೇಮಠ, ಸಾಹಿತ್ಯ ಪರಿಷತ್ತ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ, ಕೆ.ಎಲ್.ಮೀಶಿ, ಕಾರ್ಯದರ್ಶಿ ಶಿವಾನಂದ ಪತ್ತಾರ, ಲೆಕ್ಕಿಗ ಬಸವರಾಜ ದೊಡಮನಿ ಹಾಗೂ ಗ್ರಾ.ಪಂ ಸದಸ್ಯರು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ವರದಿ: ಕೆ.ವಾಯ್ ಮೀಶಿ
ಬೆಳಗಾವಿ : ಜನರು ಒಂದೇ ಕಡೆ ಸೇರದಂತೆ ಮಾರುಕಟ್ಟೆ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸುವ ಮೂಲಕ ಎಲ್ಲೆಡೆ ಅಗತ್ಯ ವಸ್ತುಗಳು ಲಭಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದರು.
ಕೋವಿಡ್-19 ನಿಯಂತ್ರಣ ಕುರಿತು ನಗರದ ಪ್ರವಾಸಿಮಂದಿರದಲ್ಲಿ ನಡೆದ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತರಕಾರಿ ಮತ್ತು ದಿನಸಿ ಸಾಮಗ್ರಿಗಳನ್ನು ಜನರಿಗೆ ಸರಿಯಾಗಿ ತಲುಪಿಸಿದರೆ ಜನಸಂದಣಿ ನಿಯಂತ್ರಣ ಸೇರಿದಂತೆ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.
ಲಾಕ್ ಡೌನ್ ಗೆ ಸಂಬoಧಿಸಿದoತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ಎಲ್ಲ ಜನಪ್ರತಿನಿಧಿಗಳಿಗೆ ಕಳುಹಿಸಿ, ಅವರ ಮೂಲಕ ಆಯಾ ಕ್ಷೇತ್ರದಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಸಚಿವ ಶೆಟ್ಟರ್ ತಿಳಿಸಿದರು.
ಗಂಟಲು ಮಾದರಿ ತಪಾಸಣಾ ಪ್ರಯೋಗಾಲಯ ಸ್ಥಾಪನೆಗೆ ಸಂಬoಧಿಸಿದoತೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಜತೆ ಮಾತನಾಡಲಾಗಿದ್ದು, ಆದಷ್ಟು ಬೇಗನೇ ಆರಂಭಿಸುವುದಾಗಿ ತಿಳಿಸಿದ್ದಾರೆ.
ವೈದ್ಯರು, ಸಿಬ್ಬಂದಿ ಸೇರಿದಂತೆ ಅಗತ್ಯವಿರುವ ಸಲಕರಣೆಗಳನ್ನು ಮುಂಚಿತವಾಗಿಯೇ ಸಂಗ್ರಹಿಸಿಟ್ಟುಕೊಳ್ಳಬೇಕು.
ತುರ್ತು ಸಾಮಗ್ರಿ ಆಥವಾ ಸಲಕರಣೆಗಳ ಅಗತ್ಯವಿದ್ದರೆ ತಕ್ಷಣವೇ ಸರ್ಕಾರಕ್ಕೆ ಪ್ರಸ್ತಾವ ಕಳಿಸಿಕೊಡಬೇಕು ಎಂದು ಸಚಿವ ಶೆಟ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
21 ದಿನಗಳ ಲಾಕ್ ಡೌನ್ ಅನ್ನು ನಾವೆಲ್ಲರೂ ಕಡ್ಡಾಯವಾಗಿ ಪಾಲಿಸಿದಾಗ ಮಾತ್ರ ಕರೊನಾ ತಡೆಗಟ್ಟುವುದು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ ಎಂದು ಸಚಿವರು ಕರೆ ನೀಡಿದರು.
ಜಲಸಂಪನ್ಮೂಲ ಇಲಾಖೆಯ ಸಚಿವ ರಮೇಶ್ ಜಾರಕಿಹೊಳಿ ಅವರು ಮಾತನಾಡಿ, ಜಿಲ್ಲೆಯಲ್ಲಿ ತುರ್ತಾಗಿ ಪ್ರಯೋಗಾಲಯ ಆರಂಭಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದರು.
ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದ್ದು, ಜನರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮುನ್ನೆಚ್ಚರಿಕೆ ಮೇರೆಗೆ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ.
ಅಂಗನವಾಡಿ ಮಕ್ಕಳಿಗೆ ಮನೆ ಮನೆಗೆ ಆಹಾರ ಸಾಮಗ್ರಿಗಳನ್ನು ಕಳಿಸಲಾಗುತ್ತಿದೆ ಎಂದರು.
ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಮಾತನಾಡಿ, ಸರಕು ಸಾಮಗ್ರಿಗಳು ಸಾಗಾಣಿಕೆಗೆ ಯಾವುದೇ ನಿರ್ಬಂಧವಿಲ್ಲ; ಯಾವುದೇ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ ಮಾತನಾಡಿ, ನೆರೆಯ ರಾಜ್ಯ ಮತ್ತು ಬೆಂಗಳೂರಿನಿoದ ನೂರಾರು ಸಂಖ್ಯೆಯ ಯುವಕರು ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಹೀಗೆ ಬರುವ ಜನರ ಮೇಲೆ ತೀವ್ರ ನಿಗಾ ವಹಿಸಬೇಕು ಎಂದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ವ್ಯಾಪಾರ-ವಹಿವಾಟುಗಳಿಗೆ ಅವಕಾಶ ಕಲ್ಪಿಸುವಂತೆ ಸಲಹೆ ನೀಡಿದರು.
ನಗರದಲ್ಲಿ ಜನಸಂಚಾರವನ್ನು ಈ ಹಂತದಲ್ಲಿ ನಿಯಂತ್ರಿಸದಿದ್ದರೆ ಕಠಿಣ ಪರಿಸ್ಥಿತಿ ಎದುರಾಗಲಿದೆ ಎಂದು ಶಾಸಕ ಅಭಯ್ ಪಾಟೀಲ ಅಭಿಪ್ರಾಯಪಟ್ಟರು.
ತಾಲ್ಲೂಕು ಆಸ್ಪತ್ರೆಗೆ ವೆಂಟಿಲೇಟರ್ ಒದಗಿಸಲು ಮನವಿ:
ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಕಾರ್ಖಾನೆಗಳಲ್ಲಿ ನೂರಾರು ಕಾರ್ಮಿಕರು ಒಂದೇ ಕಡೆ ಕೆಲಸ ಮಾಡುತ್ತಿರುವುದರಿಂದ ಪೊಲೀಸರು ಹಾಗೂ ಆಶಾ ಕಾರ್ಯಕರ್ತರು ಆಗಾಗ ಭೇಟಿ ನೀಡಿ ಸೂಕ್ತ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರದಿಂದ ತುರ್ತು ಅನುದಾನ ಬಂದರೆ ತಾಲ್ಲೂಕು ಆಸ್ಪತ್ರೆಗಳಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಗೋವಾ ಹಾಗೂ ಮಹಾರಾಷ್ಟದಿಂದ ಆಗಮಿಸುವ ಜನರನ್ನು ಸಾಧ್ಯವಾದರೆ ಒಂದು ಕಡೆ ಕ್ವಾರಂಟೈನ್ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಶಾಸಕರಾದ ಲಕ್ಷಿ ಹೆಬ್ಬಾಳಕರ್ ಮನವಿ ಮಾಡಿಕೊಂಡರು.
ಹೊರದೇಶಗಳಿoದ ಬಂದಿರುವ 326 ಜನರ ಮೇಲೆ ನಿಗಾ ವಹಿಸಲಾಗಿದೆ. ಅವರ ಮನೆಯಲ್ಲಿಯೇ ಕ್ವಾರಂಟೈನ್ ಇರಿಸಲಾಗಿದೆ.
ಹತ್ತು ಜನರ ಮಾದರಿ ಕಳಿಸಲಾಗಿದ್ದು, ಎಲ್ಲ ಮಾದರಿಯ ವರದಿ ನೆಗೆಟಿವ್ ಬಂದಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ವಿವರಿಸಿದರು.
ಸರ್ಕಾರದ ನಿರ್ದೇಶನದ ಮೇರೆಗೆ ಅಂತರರಾಜ್ಯ ಹಾಗೂ ಅಂತರ್ ಜಿಲ್ಲಾ ಗಡಿಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಪ್ರತ್ಯೇಕ ಕೋವಿಡ್ ಆಸ್ಪತ್ರೆ ಸ್ಥಾಪನೆಯ ಸಾಧ್ಯತೆಗಳನ್ನು ಈಗಾಗಲೇ ಪರಿಶೀಲಿಸಲಾಗಿದೆ ಎಂದು ತಿಳಿಸಿದರು. ಕೋವಿಡ್-19 ನಿಯಂತ್ರಣಕ್ಕೆ ಸಂಬoಧಿಸಿದoತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು.
ಅಗತ್ಯ ವಸ್ತುಗಳ ಕೊರತೆಯಾಗದಂತೆ ಎಲ್ಲ ರೀತಿಯ ಸರಕು ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಅವಶ್ಯಕತೆ ಇರುವವ ಜನರಿಗೆ ಪಾಸ್ ಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ ತಿಳಿಸಿದರು.
1825 ಕ್ವಾರಂಟೈನ್ ವಾರ್ಡ ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ತಿಳಿಸಿದರು.
ತುರ್ತು ಸಂದರ್ಭದಲ್ಲಿ ಅನುಕೂಲವಾಗುವಂತೆ ಮೊರಾರ್ಜಿ ವಸತಿ ಶಾಲೆಗಳಲ್ಲೂ 200 ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಕೋವಿಡ್ ನಿಯಂತ್ರಣ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ಐಇಸಿ ಚಟುವಟಿಕೆಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಡಿ.ಎಚ್.ಓ. ಡಾ.ಎಸ್.ವಿ.ಮುನ್ಯಾಳ ವಿವರಿಸಿದರು.
ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ, ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ್ ಕೋರೆ, ಶಾಸಕರಾದ ಸತೀಶ್ ಜಾರಕಿಹೊಳಿ, ಅಭಯ್ ಪಾಟೀಲ, ಮಹೇಶ್ ಕುಮಠಳ್ಳಿ, ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡ್ರ, ಮಹಾದೇವಪ್ಪ ಯಾದವಾಡ, ಅನಿಲ್ ಬೆನಕೆ, ದುರ್ಯೋಧನ ಐಹೊಳೆ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು : ದಿನನಿತ್ಯ ಬಳಸುವ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕು. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಬೆಡ್ ಕೋವಿಡ್ -19 ಗಾಗಿ ಮೀಸಲಿಡುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಈ ಹಿನ್ನೆಲೆಯಲ್ಲಿ ವಿಧಾನ ಸೌಧದಲ್ಲಿ ಇಂದು ಸಿಎಂ ಯಡಿಯೂರಪ್ಪ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಡಿಎಚ್ಓಗಳ ಜತೆಗೆ ವಿಡಿಯೋ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಕೊರೋನಾ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸಿಎಂ ಮಾಹಿತಿ ಪಡೆದರು. ಮುಖ್ಯಮಂತ್ರಿ ಗಳ ವಿಡಿಯೋ ಕಾನ್ಪೆರೆನ್ಸ್ ನ ಮುಖ್ಯಾಂಶಗಳು : ಮಾನ್ಯ ಪ್ರಧಾನ ಮಂತ್ರಿ ಅವರ ಸೂಚನೆಯಂತೆ 21 ದಿನಗಳ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಲಾಕ್ ಡೌನ್ ಮೀರಿ ಹೊರಬರುವವರನ್ನು ಬಂಧನ ಮಾಡುವಂತೆ ಸೂಚನೆ ನೀಡಲಾಗಿದೆ. ಎಲ್ಲಾ ಜಿಲ್ಲೆಯ ಬಾರ್ಡರ್ ಗಳನ್ನು ಸೀಲ್ ಮಾಡುವಂತೆ ಸೂಚನೆ ನೀಡಲಾಗಿದೆ. ವಿಶೇಷವಾಗಿ ಕಾಸರಗೋಡು ಮೂಲಕ ಬರುವವರ ಮೇಲೆ ತೀವ್ರ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಡಿಸ್ಟಲರಿ ಕಂಪನಿಗಳ ಜೊತೆ ಸ್ಯಾನಿಟೈಸರ್ ಉತ್ಪಾದನೆ ಮಾಡಲು ಸೂಚನೆ ನೀಡಲಾಗಿದೆ. ಕೆಲವು ಕಂಪನಿಗಳ ಉಚಿತವಾಗಿ ನೀಡಲು ಮುಂದೆ ಬಂದಿವೆ. ಅದರ ಸದಾವಕಾಶ ಬಳಸಿಕೊಳ್ಳಲು ಸೂಚನೆ ನೀಡಲಾಯಿತು. ನಿಮ್ಮ ಏನೇ ಸಮಸ್ಯೆ ಇದ್ದರು ಕೂಡಲೇ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು ಅಂತ ಸೂಚನೆ ನೀಡಲಾಯಿತು. ಇಡೀ ರಾಜ್ಯದಲ್ಲಿ ಖಾಸಗಿ ಕ್ಲಿನಿಕ್ ಗಳು ಬಂದ್ ಮಾಡುವ ಹಾಗಿಲ್ಲ. ಕ್ಲಿನಿಕ್ ಬಂದ್ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ದಿನನಿತ್ಯ ಬಳಸುವ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ ಅಂತವರ ವಿರುದ್ದ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಬೆಡ್ ಕೋವಿಡ್ ಗಾಗಿ ಮೀಸಲಿಡುವಂತೆ ಸೂಚನೆ ನೀಡಲಾಯಿತು. ವೈದ್ಯರು ಮತ್ತು ನರ್ಸ್ ಗಳಿಗೆ ತೊಂದರೆ ಕೊಡುವ ಮನೆ ಮಾಲೀಕರಿಗೆ ಎಚ್ಚರಿಕೆ ನೀಡಬೇಕು. ಪಾಸ್ ಇದ್ದವರು ತುರ್ತು ಕೆಲಸ ಇದ್ದವರಿಗೆ ಮಾತ್ರ ಹೊರಗಡೆ ಹೋಗಲು ಅವಕಾಶ. ಡಿಸಿಎಂ ಗಳಾದ ಅಶ್ವಥ್ ನಾರಾಯಣ, ಲಕ್ಷ್ಮಣ್ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್, ಸಚಿವರಾದ ಅಶೋಕ್, ಸುರೇಶ್ ಕುಮಾರ್, ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದರು
ಗೋಕಾಕ: ನಿಮ್ಮ ಜೀವ ಉಳಿಸಿಕೊಳ್ಳಲು ಏಪ್ರೀಲ್ 14ರ ವರೆಗೆ ಮನೆಯಿಂದ ಆಚೆ ಬರಬೇಡಿ. ಮನೆಯಲ್ಲಿಯೇ ಉಳಿದುಕೊಂಡು ಕೊರೋನಾ ವೈರಸ್ ತಡೆಗಟ್ಟಲು ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗುರುವಾರ ಸಂಜೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಮಹಾಮಾರಿ ಕೊರೋನಾ ಸೋಂಕಿನಿಂದ ದೇಶವನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿವೆ. ಅವುಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಇಡೀ ಭಾರತ ದೇಶವನ್ನೇ ಲಾಕ್ ಡೌನ್ ಮಾಡಿದ್ದಾರೆ. 21 ದಿವಸದ ವರೆಗೆ ಸಾರ್ವಜನಿಕರು ಮನೆಯಿಂದ ಹೊರ ಬರದಂತೆ ಕರೆ ನೀಡಿದ್ದಾರೆ. ಅವರ ಕರೆಯನ್ನು ನಾವೆಲ್ಲರೂ ಪಾಲಿಸಬೇಕಿದೆ. ಇದರಿಂದ ಕೊರೋನಾ ವೈರಸ್ ಬರುವದನ್ನು ತಡೆಯಲು ಏಕೈಕ ಮಾರ್ಗವೇ ಮನೆಯಲ್ಲಿ ಉಳಿದುಕೊಳ್ಳುವದು ಎಂದು ಹೇಳಿದ್ದಾರೆ. ಅಗತ್ಯ ಕೆಲಸವಿದ್ದಾಗ ಮಾತ್ರ ಹೊರಗೆ ಬನ್ನಿ. ಅನಾವಶ್ಯಕವಾಗಿ ಗುಂಪು ಗುಂಪಾಗಿ ತಿರುಗಾಡಬೇಡಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಪ್ರತಿ ವ್ಯಕ್ತಿಯಿಂದ ಹರಡುವ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ಮಾಡಬೇಕಾದರೇ ನಮ್ಮಲ್ಲಿ ತಿಳುವಳಿಕೆ ಅಗತ್ಯವಾಗಿದೆ. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಹಗುರವಾಗಿ ತಿಳಿದುಕೊಂಡರೇ ಪ್ರಾಣಕ್ಕೆ ಅಪಾಯ ಬರುವದು ಖಚಿತ ಎಂದು ತಿಳಿಸಿದ್ದಾರೆ.
ಅರಟಾಳ ; ಸಾರ್ವಜನಿಕರು ಎಪ್ರೀಲ್ 14ರವರೆಗೆ ಮನೆಯಲ್ಲಿ ಕಾಲ ಕಳೆಯಬೇಕು. ಹೋರಗಡೆ ತಿರುಗಾಡಬಾರದು. ಪರಸ್ಥಳದಿಂದ ಹೊಸಬ್ಬರು ಗ್ರಾಮಕ್ಕೆ ಬಂದರೆ ತಕ್ಷಣ ಗ್ರಾಮ ಪಂಚಾಯತ ಹಾಗೂ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು ಎಂದು ಗ್ರಾಪಂ ಪಿಡಿಒ ಎ. ಜಿ. ಎಡಕೆ ಹೇಳಿದರು. ಅವರು ಗುರುವಾರ ಸಮೀಪದ ಹಾಲಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತ ವತಿಯಿಂದ ಕರೋನಾ ವೈರಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು ಕಾಣಿಸಿಕೊಂಡರೆ ಆಲಕ್ಷ ಮಾಡದೆ ಆರೋಗ್ಯ ಕೇಂದ್ರಕ್ಕೆ ಹೋಗಿ ವೈದ್ಯರನ್ನು ಭೇಟ್ಟಿಯಾಗಬೇಕು. ಕರೋನಾ ವೈರಸ್ ಬಗ್ಗೆ ಸಾರ್ವಜನಿಕರು ಅಂಜುವ ಅವಶ್ಯಕತೆಯಿಲ್ಲ. ಎಲ್ಲರು ಎಚ್ಚರವಹಿಸಿದರೆ ವೈರಸ್ ಭಯವಿಲ್ಲ. ಗ್ರಾಮ ಪಂಚಾಯತ ವ್ಯಾಪ್ತಿಯ ಮೂರು ಗ್ರಾಮಗಳಿಗೆ ಮುಂಜಾಗೃತ ಕ್ರಮವಾಗಿ ಪಾಗಿಂಗ ಮೂಲಕ ಔಷಧಿ ಸಿಂಪಡಿಸಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಅವರು ಪ್ರತಿ ಕ್ಷಣ ಗ್ರಾಮದ ಮೇಲೆ ನಿಗಾ ಇಟ್ಟು, ಕರೋನಾ ವೈರಸ್ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವರು. ಆದಷ್ಟು ಎಲ್ಲರು ಗುಂಪು, ಗುಂಪಾಗಿ ನಿಲುವುದು. ಕಟ್ಟೆಗಳ ಮೇಲೆ ಕುಳಿತುಕೊಳ್ಳವುದು ಮಾಡಬಾರದು. ಒಬ್ಬರಿಂದ ಒಬ್ಬರು ಆರು ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಕೈತೊಳೆದುಕೊಂಡು ಮನೆಯೊಳಗೆ ಹೋಗಬೇಕು ಎಂದರು. ಕಾರ್ಯದರ್ಶಿ ಜೀತೇಂದ್ರ ಗದಾಡೆ, ಗ್ರಾಪಂ ಉಪಾಧ್ಯಕ್ಷ ಶಿವಾನಂದ ಹೊನಗೌಡ, ಸದಸ್ಯರಾದ ಸಿದ್ದು ಅಥಣಿ, ಚಂದ್ರಪ್ಪ ನಾಟೀಕರ, ರಾಯಪ್ಪ ಗೌಡಪನ್ನವರ, ಶಿವಲಿಂಗ ಬೇವನೂರ, ರಾವಸಾಬ ಬಿರಾದಾರ, ಅಣ್ಣಪ್ಪ ಬೇಡರಟ್ಟಿ, ಅಂಗವಿಕಲರ ಸಂಘದ ತಾಲೂಕಾ ಅಧ್ಯಕ್ಷ ಡಾ ಬಸವರಾಜ ಕೆಂಚಗೊoಡ, ಚನ್ನಬಸು ಬಿರಾದಾರ, ಸದಾನಂದ ನಾವಿ, ಸದಾನಂದ ಮಾಡಗ್ಯಾಳ, ಎಮ್. ಪಿ. ಪಾಟೀಲ, ಮಹಾದೇವ ಮಾದರ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯ ಕಾರ್ಯಕ್ರಮದಲ್ಲಿ ಇದ್ದರು.