ಸಕ್ಕರೆ ಜಿಲ್ಲೆಗೂ ವಕ್ಕರಿಸಿದ ಕೊರೊನಾ: ಇಂದು ಮೂವರಲ್ಲಿ ಪಾಸಿಟಿವ್

ಮಂಡ್ಯ: ನಿಜಾಮುದ್ದೀನ್ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ ಕೊರೊನಾ ಸೋಂಕಿತ ಧರ್ಮಗುರುಗಳ ಜೊತೆ ಸಂಪರ್ಕ ಹೊಂದಿದ ಜಿಲ್ಲೆಯ ಮೂವರಿಗೆ ಕೊರೊನಾ ದೃಢಪಟ್ಟಿದೆ. ಮೂರೂ ಸೋಂಕಿತರಿಗೂ ಮಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ಪೀಡಿತ ಸಂಖ್ಯೆ134, 135, 136, 137 ಮತ್ತು 138 ವ್ಯಕ್ತಿಗಳೊಂದಿಗೆ ಈ ಮೂವರು ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಕೊರೊನಾ ಪತ್ತೆಯಾಗಿದೆ. ಇವರು ರಾಜ್ಯದ 171, 172 ಮತ್ತು 173ನೇ ಸೋಂಕಿತರು. ಈ ಮೂವರೂ ಪುರುಷ ರೋಗಿಗಳು. ಇನ್ನೂ 7 ಮಂದಿಯ ವರದಿ ಬರಬೇಕಾಗಿದೆ.
ಧರ್ಮಗುರುಗಳ ಜೊತೆ ಒಟ್ಟು 10 ಮಂದಿ ಸಂಪರ್ಕ ಹೊಂದಿದ್ದು, ಇವರ ಜೊತೆಗೆ ಸಂಪರ್ಕ ಹೊಂದಿದ್ದ 48 ಮಂದಿಯನ್ನು ಐಸೊಲೇಷನ್ ವಾರ್ಡ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ 19 ಸೋಂಕಿತರು ಮಳವಳ್ಳಿ ಹಾಗೂ ನಾಗಮಂಗಲ ಪಟ್ಟಣ ನಿವಾಸಿಗಳಾಗಿದ್ದು, ಮಳವಳ್ಳಿ ಪಟ್ಟಣದ ಈದ್ಗಾ ಮೊಹಲ್ಲಾ ವಾರ್ಡ್ ಹಾಗೂ ನಾಗಮಂಗಲದ 14, 15 ಮತ್ತು 16ನೇ ವಾರ್ಡ್ಗಳನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ. ಜನ ಸಂಚಾರಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
ಈ ಪ್ರದೇಶದಲ್ಲಿ 3 ಕಿಲೋ ಮೀಟರ್ ಸುತ್ತಳತೆಯನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದು, ಈ ನಿಷೇಧಿತ ಪ್ರದೇಶದ 5 ಕಿಲೋ ಮೀಟರ್ ಸುತ್ತಳತೆ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಣೆ ಮಾಡಲಾಗಿದೆ
ವರದಿ :ಕೃಪ ಸಾಗರ್ ಗೌಡ
Share
WhatsApp
Follow by Email