ಮೂಡಲಗಿ : ಅಲೆಮಾರಿಗಳಿಗಿಲ್ಲ ಪಡಿತರ, ಹಸಿವಿನಿಂದ ಕಂಗಾಲು

ಮೂಡಲಗಿ: ಇಲ್ಲಿನ ಗಂಗಾನಗರದಲ್ಲಿರುವ 11 ಅಲೆಮಾರಿ ಕುಟುಂಬದವರು ಕೊರೊನಾ ವೈರಾಣು ಸೋಂಕು ನಿಯಂತ್ರಣಕ್ಕಾಗಿ ಜಾರಿಯಾಗಿರುವ ಲಾಕ್‌ಡೌನ್‌ನಿಂದಾಗಿ ಆಹಾರ ಸಾಮಗ್ರಿ ಇಲ್ಲದೆ ಹಸಿವಿನಿಂದ ಬಳಲುತ್ತಿದ್ದಾರೆ.
ಕೊಂಚಿಕೊರವ ಸಮಾಜದ ಈ ಜನರು ಕೂದಲು, ಪ್ಲಾಸ್ಟಿಕ್ ಸಂಗ್ರಹಿಸಿ ಮಾರಿ ಅದರಿಂದ ಬದುಕು ನಡೆಸುವವರು. ಲಾಕ್‌ಡೌನ್‌ನಿಂದಾಗಿ ಅವರೆಲ್ಲ ರಸ್ತೆಗೆ ಬರುವಂತಿಲ್ಲ.
‘ಕೂದಲಾ, ರದ್ದಿ ಆಯಕೊಂಡು ಮಾರಿ, ಆಟು ಈಟು ಕಾಸಿನಿಂದ ಜೀವನಾ ಮಾಡಿಕೊಂಡಿವಿರ್ರೀ. ಉದ್ಯೋಗ ಕಟ್‌ಆಗಿ ಈಗ ಏನೂ ಸಿಗಲದಂಗಾ ಆಗೈತ್ರೀ’ ಎಂದು ಮುತ್ತು ಧಾರವಾಡ ಲಾಕ್‌ಡೌನ್‌ನಿಂದ ಆಗಿರುವ ಕಷ್ಟದ ಬಗ್ಗೆ ತಮ್ಮ ಅಳಲು ತೋಡಿಕೊಳ್ಳುತ್ತಾರೆ.
‘ಹಳ್ಯಾಗ ಜನರು ನಮ್ಮನ್ನು ಕಂಡರೆ ಒಂದು ನಮೂನಿ ಮಾಡತ್ತಾರ್ರೀ… ಎಲ್ಲಿಯೂ ಹೋಗಲದಾಂಗ ಆಗೇತ್ರೀ..’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಸಣ್ಣ, ಸಣ್ಣ ಮಕ್ಕಳದಾವ್ರೀ… ಹೊಟ್ಟಿಗೆ ಕೂಳ ಇಲ್ಲದ ಖಾಲಿ ಹೊಟ್ಟೇಲಿ ಮಲಗಿಸಬೇಕಾಗೈತ್ರೀ’ ಎಂದು ಮಹಿಳೆಯರು “ವರದಿಗಾರನ” ಎದುರು ಕಣ್ಣೀರಿಟ್ಟರು.
ಕೊಂಚಿಕೊರವ ಸಮಾಜದ ಕೆಲವು ಕುಟುಂಬಗಳು ಎರಡು ದಶಕಗಳಿಂದ ಮೂಡಲಗಿಯಲ್ಲಿ ವಾಸಿಸುತ್ತಿವೆ. ಆಧಾರ್‌ ಕಾರ್ಡ್‌ ಇದ್ದು, ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಆದರೆ, ಪಡಿತರ ಚೀಟಿಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ಸದ್ಯ ಸರ್ಕಾರ ಕೊಡುವ ಪಡಿತರವೂ ಅವರಿಗೆ ದೊರೆಯುತ್ತಿಲ್ಲ. ‘ನಂದಿನಿ’ ಹಾಲು ಮಾತ್ರ ಉಚಿತವಾಗಿ ತಲುಪುತ್ತಿದೆ.
ಸಂಘ, ಸಂಸ್ಥೆಯವರು ದಿನಸಿ ಕಿಟ್‌ಗಳನ್ನು ಊರಲ್ಲಿ ಕೊಡುತ್ತಿದ್ದಾರೆ. ಇಂತಹ ಜನರ ಬಗ್ಗೆ ಗಮನಹರಿಸಿಲ್ಲ. ಕೊಂಚಿಕೊರವರಂಥ ಇನ್ನೂ ಅನೇಕ ಕುಟುಂಬಗಳು ತಾಲ್ಲೂಕಿನಾದ್ಯಂತ ಅಲ್ಲಲ್ಲಿ ಗುಡಿಸಲು ಹಾಕಿಕೊಂಡು ಜೀವಿಸುತ್ತಿವೆ. ಕೊರೊನಾ ಭೀತಿಯಲ್ಲಿ, ಹಸಿವಿನಿಂದ ಬಳಲುತ್ತಿವೆ. ಸಹಾಯಹಸ್ತಕ್ಕಾಗಿ ಕಾಯುತ್ತಿವೆ.
Share
WhatsApp
Follow by Email