ಬೆಳಗಾವಿ: ಕೋವಿಡ್ 19 ಸೋಂಕಿತರ ಚಿಕಿತ್ಸೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದ ಕರೊನಾ ವಾರಿಯರ್ ನರ್ಸ್ ಸುಗಂಧಾ ಕೊನೆಗೂ ಮನೆಗೆ ಮರಳಿದ್ದಾರೆ. ಅಮ್ಮ ಮನೆಗೆ ಬರುತ್ತಿರುವ ಸುದ್ದಿ ತಿಳಿದು ಅವರ ಮಗಳು ಓಡೋಡಿ ಬಂದು ಅಮ್ಮನನ್ನು ಅಪ್ಪಿಕೊಂಡು, ಮುದ್ದಾಡಿದ್ದಲ್ಲದೆ, ತನ್ನನ್ನು ಕಂಡು ಅಮ್ಮನ ಕಣ್ಣಲ್ಲಿ ಜಿನುಗಿದ ನೀರನ್ನು ಒರೆಸಿ ಪ್ರೀತಿ, ಮಮತೆ ತೋರಿದಳು.
ಕೆಲದಿನಗಳ ಹಿಂದಷ್ಟೇ ಬೆಳಗಾವಿಯ ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿದ್ದ ನರ್ಸ್ ಸುಗಂಧಾ ಅವರನ್ನು ಪುತ್ರಿ ದೂರದಿಂದಲೇ ನೋಡಿ, ಕಣ್ಣೀರು ಹಾಕುತ್ತಾ, ಅಮ್ಮ ಬಾಮ್ಮಾ… ನನ್ನನ್ನು ಎತ್ತಿಕೋ… ಎಂದು ಕಣ್ಣೀರು ಹಾಕಿದ್ದ ದೃಶ್ಯ ಎಲ್ಲರ ಮನಕಲಕಿತ್ತು.
ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಾ, ಹೋಟೆಲ್ನಲ್ಲಿ 14 ದಿನಗಳ ಕ್ವಾರಂಟೈನ್ನಲ್ಲಿದ್ದ ಕರೊನಾ ವಾರಿಯರ್ ನರ್ಸ್ ಸುಗಂಧಾ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಫೋನ್ ಮಾಡಿ ಸುಗಂಧಾ ಅವರಿಗೆ ಸಮಾಧಾನ ಹೇಳಿದ್ದರು.
ಇದೀಗ 21 ದಿನಗಳ ಬಳಿಕ ಮನೆಗೆ ಮರಳಿದ ಸುಗಂಧಾ ಅವರನ್ನು ಕಂಡು ಮಗಳು ಓಡೋಡಿ ಬಂದು ಅಪ್ಪಿಕೊಂಡ ದೃಶ್ಯ ಎಲ್ಲ ಕಣ್ಣನ್ನು ತೇವವಾಗಿಸಿತು. ಪುತ್ರಿಯನ್ನು ಎತ್ತಿಕೊಂಡು ಮುದ್ದಾಡಿದ ಸುಗಂಧಾ ಅವರ ಸಂತೋಷಕ್ಕೆ ಪಾರವೇ ಇಲ್ಲವಾಗಿತ್ತು.