ಬ್ರೇಕಿಂಗ್ ನ್ಯೂಸ್ ರಹಸ್ಯವಾಗಿ ಮಧ್ಯರಾತ್ರಿ ಮುಂಬೈ ವೃದ್ಧೆಯ ಶವಸಂಸ್ಕಾರ; ತನಿಖೆಗೆ ಬೆಳಗಾವಿ ಜಿಲ್ಲಾಡಳಿತ ನಿರ್ಧಾರ 28/04/202028/04/2020 admin ಬೆಳಗಾವಿ: ಮುಂಬೈನ ಪನವೆಲ್ ನಲ್ಲಿ ನೆಲೆಸಿದ್ದ ವೃದ್ಧ ಮಹಿಳೆಯ ಮೃತದೇಹವನ್ನು ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮಕ್ಕೆ ತಂದು, ಭಾನುವಾರ ಮಧ್ಯರಾತ್ರಿ ಯಾರಿಗೂ ಗೊತ್ತಾಗದ ಹಾಗೆ ರಹಸ್ಯವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ. ಅನುಮಾನಾಸ್ಪದವಾಗಿ ನಡೆದಿರುವ ಈ ಘಟನೆಯಿಂದ ಗ್ರಾಮದಲ್ಲಿ ಭೀತಿಯ ವಾತಾವರಣ ಪಸರಿಸಿರುವ ಹಿನ್ನೆಲೆಯಲ್ಲಿ, ಇದನ್ನು ಸಮಗ್ರ ತನಿಖೆಗೆ ಒಳಪಡಿಸಲು ಬೆಳಗಾವಿ ಜಿಲ್ಲಾಡಳಿತ ನಿರ್ಧರಿಸಿದೆ.ವೃದ್ಧೆಯ ಮೃತದೇಹವನ್ನು ಅಂಬುಲನ್ಸ್ ನಲ್ಲಿ ತರಲಾಗಿತ್ತು. ಅಂತ್ಯಕ್ರಿಯೆ ಸಂದರ್ಭದಲ್ಲಿ ಕೇವಲ ಐದು ಮಂದಿ ಮಾತ್ರ ಇದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿದ್ದು, ಅಂತ್ಯಕ್ರಿಯೆ ಬಳಿಕ ಅಂಬ್ಯುಲನ್ಸ್ ನಲ್ಲಿ ಬಂದವರು ಅದೇ ಅಂಬ್ಯುಲನ್ಸ್ ನಲ್ಲಿ ವಾಪಸಾಗಿದ್ದಾರೆ. ಒಟ್ಟಾರೆ ಘಟನೆ ಅನುಮಾನಾಸ್ಪದವಾಗಿದ್ದು, ಮೃತ ಮಹಿಳೆ ಯಾರು? ಆಕೆ ಮುಂಬೈನಲ್ಲಿ ನೆಲೆಸಿದ್ದರೆ ಆಕೆಯ ಮೃತದೇಹವನ್ನು ಮಲಿಕವಾಡಕ್ಕೆ ಏಕೆ ತರಲಾಯಿತು? ಕೊರೊನಾ ಹಾಟ್ ಸ್ಪಾಟ್ ಆಗಿರುವ ಮುಂಬೈನಿಂದ ಮೃತದೇಹವನ್ನು ಕರ್ನಾಟಕಕ್ಕೆ ತರಲು ಪರವಾನಿಗೆ ಪಡೆಯಲಾಗಿತ್ತಾ? ಪಡೆಯಲಾಗಿದ್ದರೆ ಮಧ್ಯರಾತ್ರಿ ಗ್ರಾಮದ ಯಾರೊಬ್ಬರಿಗೂ ಗೊತ್ತಾಗದ ಹಾಗೆ ಅಂತ್ಯಕ್ರಿಯೆ ಪೂರ್ಣಗೊಳಿಸಿದ್ದು ಏಕೆ? ಮೊದಲಾದ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಾಗಿದೆ.ಜಿಲ್ಲಾಧಿಕಾರಿ ಸೇರಿದಂತೆ ಸ್ಥಳೀಯ ತಹಶೀಲದಾರ, ಉಪವಿಭಾಗಾಧಿಕಾರಿ ಅಷ್ಟೇ ಏಕೆ ಸ್ಥಳೀಯ ಪೊಲೀಸರಿಗೂ ಈ ಕುರಿತಂತೆ ಮಾಹಿತಿ ಇರಲಿಲ್ಲ. ರಾಜ್ಯದ ಗಡಿಗಳನ್ನು ಲಾಕ್ ಡೌನ್ ಹಿನ್ನೆಲೆಯಲ್ಲಿ ಸೀಲ್ ಮಾಡಲಾಗಿದ್ದು, ಕೇವಲ ಅಗತ್ಯ ವಸ್ತಗಳ ಸಾಗಾಟ ಅಥವಾ ವೈದ್ಯಕೀಯ ಎಮರ್ಜೆನ್ಸಿ ಸಂದರ್ಭದಲ್ಲಿ ಮಾತ್ರ ರಾಜ್ಯದ ಗಡಿಯನ್ನು ದಾಟಲು ಅವಕಾಶವಿದೆ. ಹಾಗಾದರೆ, ವೃದ್ಧೆಯ ಮೃತದೇಹವನ್ನು ಮುಂಬೈನಿಂದ ಮಲಿಕವಾಡಕ್ಕೆ ಹೇಗೆ ತರಲಾಯಿತು ಎನ್ನುವುದು ಈಗ ಯಕ್ಷಪ್ರಶ್ನೆಯಾಗಿ ಕಾಡುತ್ತಿದ್ದು, ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ.ಈ ಕುರಿತಂತೆ ಪತ್ರಕರ್ತರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ‘ಇದೊಂದು ತೀರಾ ಅನುಮಾಸ್ಪದ ಘಟನೆಯಾಗಿದ್ದು, ಇದರ ಹಿಂದಿನ ಸತ್ಯಾಸತ್ಯತೆ ಕಂಡುಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ತನಿಖೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.ಖಾಸಗಿ ಅಂಬ್ಯುಲನ್ಸ್ ಗಳ ದುರ್ಬಳಕೆ:ಲಾಕ್ ಡೌನ್ ಸಮಯದಲ್ಲಿ ಖಾಸಗಿ ಅಂಬ್ಯುಲನ್ಸ್ ಗಳ ದುರ್ಬಳಕೆ ನಡೆಯುತ್ತಿರುವ ಕುರಿತಂತೆ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ಬರುತ್ತಿದ್ದು, ಈ ಘಟನೆಯಲ್ಲಿಯೂ ಕೂಡ ಖಾಸಗಿ ಅಂಬ್ಯುಲನ್ಸ್ ದುರ್ಬಳಕೆ ಮಾಡಿಕೊಂಡಿರುವ ಸಂಶಯ ಕಾಡುತ್ತಿದೆ. ಅಂಬ್ಯುಲನ್ಸ್ ಗಳನ್ನು ಪೊಲೀಸರು ತಡೆಯುವುದಿಲ್ಲ. ಹೀಗಾಗಿ ಕೆಲವರು ಇದರ ದುರ್ಲಾಭ ಪಡೆದುಕೊಳ್ಳುತ್ತಿದ್ದಾರೆ. ಎರಡು ದಿನಗಳ ಹಿಂದಷ್ಟೇ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಸುಮಾರು 23 ಮಂದಿ ಖಾಸಗಿ ಅಂಬ್ಯುಲನ್ಸ್ ನಲ್ಲಿ ತೆರಳುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. Share