ಜಿಲ್ಲೆಯಲ್ಲಿ 22 ಪ್ರಕರಣಗಳು ಪತ್ತೆ; ಅಧಿಕಾರಿಗಳ ಮುನ್ನೆಚ್ಚರಿಕೆ- ತಪ್ಪಿದ ದೊಡ್ಡ ಅನಾಹುತ  ಜನರು ಭಯಪಡುವ ಅಗತ್ಯವಿಲ್ಲ: ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ

ಜಿಲ್ಲೆಯಲ್ಲಿ 22 ಪ್ರಕರಣಗಳು ಪತ್ತೆ; ಅಧಿಕಾರಿಗಳ ಮುನ್ನೆಚ್ಚರಿಕೆ- ತಪ್ಪಿದ ದೊಡ್ಡ ಅನಾಹುತ ಜನರು ಭಯಪಡುವ ಅಗತ್ಯವಿಲ್ಲ: ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ


ಬೆಳಗಾವಿ: ಅಜ್ಮೀರದಿಂದ ಪ್ರಯಾಣ ಮಾಡಿ ಜಿಲ್ಲೆಯ ಗಡಿ ಪ್ರವೇಶ ಮಾಡಿದ್ದ 22 ಜನರಿಗೆ ಕೋವಿಡ್-19 ಸೋಂಕು ಇರುವುದು ಪತ್ತೆಯಾಗಿರುತ್ತದೆ. ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡು ಅವರನ್ನು ಮುಂಚಿತವಾಗಿಯೇ ಕ್ವಾರೆಂಟೈನ್ ಮಾಡಿರುವುದರಿಂದ ಸೋಂಕಿತರು ಜಿಲ್ಲೆಯಲ್ಲಿ‌ಎಲ್ಲಿಯೂ ಪ್ರಯಾಣ ಮಾಡಿರುವುದಿಲ್ಲ. ಆದ್ದರಿಂದ ಜಿಲ್ಲೆಯ ಜನರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಸ್ ಬಿ. ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇಂದು ರಾಜಸ್ಥಾನದ ಅಜ್ಮೀರದ ಪ್ರಯಾಣದ ಹಿನ್ನೆಲೆ ಹೊಂದಿರುವ 22 ಪ್ರಕರಣಗಳ ದಾಖಲಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 107 ಕೋವಿಡ್ 19 ಪ್ರಕರಣಗಳು ದಾಖಲಾಗಿವೆ.

ಅಧಿಕಾರಿಗಳ ಮುನ್ನೆಚ್ಚರಿಕೆ; ತಪ್ಪಿದ ಅನಾಹುತ:
ಮೇ 2 ರಂದು ಅಜ್ಮೀರ ಜಿಲ್ಲೆಯ ಡೆಪ್ಯುಟಿ ಕಮೀಷನರ್ ನೀಡಿರುವ ಪಾಸ್ ಮೇರೆಗೆ ಒಟ್ಟು 38 ಜನರು ಖಾಸಗಿ ಬಸ್ ಮುಖಾಂತರ ಜಿಲ್ಲೆಯ ಮೂಲಕ ರಾಜ್ಯದ ಗಡಿಯನ್ನು ಪ್ರವೇಶ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ತಡೆದು ಅವರನ್ನು ಮರಳಿ ಕಳುಹಿಸಿದ್ದರು.
ಆದಾಗ್ಯೂ ಅವರು ಪುನಃ ಅನ್ಯ ಮಾರ್ಗದ ಮೂಲಕ ಗಡಿ ಒಳಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ಪುನಃ ತಡೆದು, ವಾಹನವನ್ನು ವಶಪಡಿಸಿಕೊಂಡು ಅದರಲ್ಲಿದ್ದ 38 ಜನರನ್ನು ನಿಪ್ಪಾಣಿ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿ ಇರಿಸಿದ್ದರು.
ಮೇ 7 ರಂದು ಎಲ್ಲ 38 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 30 ಜನರಿಗೆ ಕೋವಿಡ್- 19 ಸೋಂಕು ದೃಢಪಟ್ಟಿರುತ್ತದೆ.

ಅದರಲ್ಲಿ 22 ಜನ ಬೆಳಗಾವಿ ಜಿಲ್ಲೆಯವರು ಆಗಿದ್ದು, ಇವರು ಹುಕ್ಕೇರಿ, ಅಥಣಿ, ಚಿಕ್ಕೋಡಿ, ರಾಯಬಾಗ ಹಾಗೂ ಬೆಳಗಾವಿ ತಾಲ್ಲೂಕುಗಳಿಗೆ ಸೇರಿದವರಾಗಿದ್ದಾರೆ.

ಉಳಿದ 8 ಜನರು ಬಾಗಲಕೋಟೆ ಜಿಲ್ಲೆಯವರ ಪೈಕಿ ಬಾದಾಮಿ ಮತ್ತು ಬಾಗಲಕೋಟೆಯವರಾಗಿದ್ದಾರೆ.
ಈ ಎಲ್ಲ ಜನರು ಬೆಳಗಾವಿ ಜಿಲ್ಲೆಯ ಗಡಿ ಪ್ರವೇಶಿಸಿದ ಮೇ‌ 2 ರಿಂದಲೇ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಿರುವುದರಿ‌ಂದ ಮುಂದೆ ಆಗಬಹುದಾಗಿದ್ದ ಅನಾಹುತವನ್ನು ಅಧಿಕಾರಿಗಳು ತಪ್ಪಿಸಿದ್ದಾರೆ.
ಇಲ್ಲಿಗೆ ಬರುವ ಮುಂಚೆ ಇವರೆಲ್ಲರೂ ಸುಮಾರು ಒಂದೂವರೆ ತಿಂಗಳಿನಿಂದ ಅಜ್ಮೇರ್ ನಲ್ಲಿ ಇದ್ದರು. ನಂತರ ನೇರವಾಗಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಗೆ ಒಳಪಡಿಸಿರುವುದರಿಂದ ಜಿಲ್ಲೆಯ ಇತರರ ಜತೆ ಅವರು ಸಂಪರ್ಕಕ್ಕೆ ಬಂದಿರುವುದಿಲ್ಲ. ಆದ್ದರಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ.
ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿದ್ದ 30 ಜನರನ್ನು ಆಸ್ಪತ್ರೆಗೆ ಸೇರಿಸಲಾಗುತ್ತಿದೆ.

ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ:
ಜಿಲ್ಲೆಯ ಗಡಿಯಲ್ಲಿ ಕಟ್ಟುನಿಟ್ಟಾಗಿ ಎಲ್ಲ ವಾಹನಗಳ ತಪಾಸಣೆ ಮಾಡಲಾಗುತ್ತಿದ್ದು, ಸಂಬಂಧಿಸಿದ ಜಿಲ್ಲೆಗಳಿಗೂ ಮಾಹಿತಿಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಆರೋಗ್ಯ ತಪಾಸಣೆಗೆ ತಂಡಗಳನ್ನು ನಿಯೋಜಿಸಲಾಗಿದ್ದು, ದಾಖಲೆಗಳನ್ನು ಕೂಡ ತಪಾಸಣೆ ಮಾಡಲಾಗುತ್ತಿದೆ. ಕೋವಿಡ್-೧೯ ನಿಯಂತ್ರಿಸಲು ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಒಂದು ವೇಳೆ ಇಂದಿನ ಪ್ರಕರಣಗಳು ಕಣ್ತಪ್ಪಿ ಜಿಲ್ಲೆಯನ್ನು ಪ್ರವೇಶಿಸಿದ್ದರೆ ದೊಡ್ಡ ಅನಾಹುತ ಆಗುತ್ತಿತ್ತು. ಅಧಿಕಾರಿಗಳು ಅತ್ಯುತ್ತಮ ಕೆಲಸ ಮಾಡುವ ಮೂಲಕ ಎಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸಿರುತ್ತಾರೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Share
WhatsApp
Follow by Email