ಮೂಡಲಗಿ ಪತ್ರಕರ್ತರ ಬಳಗದಿಂದ ಮನವಿ  ಪತ್ರಕರ್ತರಿಗೆ ಸರ್ಕಾರದ ವಿಶೇಷ ಪ್ಯಾಕೇಜ್‌ಗೆ ಒತ್ತಾಯ

ಮೂಡಲಗಿ ಪತ್ರಕರ್ತರ ಬಳಗದಿಂದ ಮನವಿ ಪತ್ರಕರ್ತರಿಗೆ ಸರ್ಕಾರದ ವಿಶೇಷ ಪ್ಯಾಕೇಜ್‌ಗೆ ಒತ್ತಾಯ

ಮೂಡಲಗಿ: ಕೊರೊನಾ ಸೋಂಕು ನಿಯಂತ್ರಣದ ಲಾಕ್‌ಡೌನ್ ಸಂದರ್ಭದಲ್ಲಿ ಪತ್ರಕರ್ತರು ಸುದ್ದಿ ಸಂವಹನದಲ್ಲಿ ಪರಿಶ್ರಮಪಟ್ಟಿದ್ದು, ಪತ್ರಕರ್ತರಿಗೂ ವಿಶೇಷ ಪ್ಯಾಕೇಜ್‌ವನ್ನು ಸರ್ಕಾರವು ಘೋಷಿಸಬೇಕು ಎಂದು ಮೂಡಲಗಿ ತಾಲ್ಲೂಕಾ ಪತ್ರಕರ್ತರ ಬಳಗದವರು ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಸ್ಥಳೀಯ ಎಲ್ಲ ಪತ್ರಕರ್ತರ ಸಂಘಟನೆಯವರು ತೆರಳಿ ತಹಶೀಲ್ದಾರ್ ಡಿ.ಜಿ. ಮಹಾತ್ ಅವರಿಗೆ ಮನವಿಯನ್ನು ಅರ್ಪಿಸಿ ವಿಶೇಷ ಪ್ಯಾಕೇಜ್‌ಕ್ಕಾಗಿ ಸರ್ಕಾರವನ್ನು ಒತ್ತಾಯಿಸಿದರು.
ಕೊರೊನಾ ಸೋಂಕು ನಿಯಂತ್ರಣದಲ್ಲಿ ಸರ್ಕಾರದ ಎಲ್ಲ ಕಾರ್ಯಯೋಜನೆಗಳಿಗೆ ಪತ್ರಕರ್ತರು ತಮ್ಮ ಜೀವದ ಹಂಗು ಬಿಟ್ಟು ಹಗಲಿರುಳು ಸುದ್ದಿ ಸಂವಹನಕ್ಕಾಗಿ ಶ್ರಮಿಸಿದ್ದಾರೆ. ಕೊರೊನಾ ಮತ್ತು ಕೋವಿಡ್ 19 ಸೋಂಕು ಹರಡದಂತೆ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವುದು, ಆರೋಗ್ಯ ನಿಯಮಗಳ ಅರಿವು ಮೂಡಿಸುವ ಮೂಲಕ ಪ್ರಾಮಾಣಿಕವಾದ ಸೇವೆಯನ್ನು ಸಲ್ಲಿಸಲಾಗುತ್ತಿದೆ. ಆದರೆ ಸರ್ಕಾರವು ಪತ್ರಕರ್ತರಿಗೆ ಯಾವದೆ ರೀತಿಯ ಪ್ಯಾಕೇಜ್ ಮತ್ತು ಸೌಲಭ್ಯವನ್ನು ಕಲ್ಪಿಸಿಕೊಡದೆ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ನಮಗೆಲ್ಲ ನೋವು ತಂದಿದೆ. ಸಾಕಷ್ಟು ಜನ ಪತ್ರಕರ್ತರು ಅದರಲ್ಲೂ ಗ್ರಾಮೀಣ ಭಾಗದಲ್ಲಿ ಬಡವರಿದ್ದು, ತೊಂದರೆಯಲ್ಲಿರುವರು. ಲಾಕ್‌ಡೌನ್ ಸಂದರ್ಭದಲ್ಲಿ ಆಗಿರುವ ತೊಂದರೆಗೆ ಪ್ರತಿಯಾಗಿ ಸರ್ಕಾರವು ಇತ್ತಿಚೆಗೆ ವಿವಿಧ ವರ್ಗದ ಜನರಿಗೆ ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸುವ ಮೂಲಕ ಶ್ಲಾಘನೀಯ ಕಾರ್ಯವನ್ನು ಮಾಡಿದೆ. ಆದರೆ ಪತ್ರಕರ್ತರನ್ನು ಮರೆತಿದ್ದು ಖೇದಕರ ಸಂಗತಿಯಾಗಿದೆ. ಆದ್ದರಿಂದ ಪತ್ರಕರ್ತರಿಗೂ ವಿಶೇಷ ಪ್ಯಾಕೇಜ್‌ವನ್ನು ಘೋಷಿಸಬೇಕು ಮತ್ತು ವಿಮೆ ಸೌಲಭ್ಯವನ್ನು ಕಲ್ಪಿಸಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮೂಡಲಗಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಉಂದ್ರಿ, ಕರ್ನಾಟಕ ಜನಸೇವಾ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ಯ.ಯ. ಸುಲ್ತಾನಪುರ, ಕರ್ನಾಟಕ ಪತ್ರಕರ್ತರ ಸಂಘದ ಪ್ರತಿನಿಧಿ ಎಲ್.ಸಿ. ಗಾಡವಿ, ಬಾಲಶೇಖರ ಬಂದಿ, ವಿ.ಎಚ್. ಬಾಲರಡ್ಡಿ, ಕೃಷ್ಣಾ ಗಿರೆಣ್ಣವರ, ಎಸ್.ಎಂ. ಚಂದ್ರಶೇಖರ, ಅಲ್ತಾಫ ಹವಾಲ್ದಾರ್, ಸತೀಶ ಲಂಕೆಪ್ಪನ್ನವರ, ಮಹಾದೇವ ನಡವಿನಕೇರಿ, ಶಿವಾನಂದ ಹಿರೇಮಠ, ಮಲ್ಲು ಬೋಳನ್ನವರ, ಸುರೇಶ ಪಾಟೀಲ, ರಾಜಶೇಖರ ಮಗದುಮ, ಈಶ್ವರ ಢವಳೇಶ್ವರ, ಪ್ರವೀಣ ಮಾವರಕರ, ಸುರೇಶ ಎಮ್ಮಿ, ಭೀಮಶಿ ತಳವಾರ, ಸಚಿನ ಪತ್ತಾರ ಭಾಗವಹಿಸಿದ್ದರು.
Share
WhatsApp
Follow by Email