ಬೆಂಗಳೂರು: ದೇಶಾದ್ಯಂತ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗಿದೆ. ಈ ಸಿಹಿ ಕ್ಷಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೊಸ 5 ಯೋಜನೆಗಳನ್ನೂ ಘೋಷಿಸಿ, ಜನತೆಗೆ ಶುಭ ಸುದ್ದಿ ನೀಡಿದ್ದಾರೆ
ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶೇ.100 ರಷ್ಟು ಶೌಚಾಲಯ ನಿರ್ಮಾಣಕ್ಕೆ 250 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು, ಮಾದರು ಮತ್ತಿತರ ಕುಶಲಕರ್ಮಿಗಳಿಗೆ ತಲಾ 50 ಸಾವಿರ ರೂ. ವರೆಗೆ ಸಹಾಯ ಧನ ಘೋಷಿಸಿದ್ದಾರೆ
ರೈತ ವಿದ್ಯಾನಿಧಿ ಯೋಜನೆಯನ್ನು ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ವಿಸ್ತರಿಸಿದ್ದಾರೆ. ರಾಜ್ಯದಲ್ಲಿ ಹೊಸದಾಗಿ 4,050 ಅಂಗನವಾಡಿ ತೆರೆಯಲು ನಿರ್ಧರಿಸಲಾಗಿದ್ದು, ಇದರಿಂದ 8,100 ಮಹಿಳೆಯರಿಗೆ ಉದ್ಯೋಗ ಸಿಗಲಿದೆ. ರಾಜ್ಯದ ಸೈನಿಕರು ಕರ್ತವ್ಯದಲ್ಲಿದ್ದಾಗ ಮಡಿದರೆ, ಅವರ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಘೋಷಣೆ ಮಾಡಲಾಗಿದೆ
ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಮಾತನಾಡಿದ ಬೊಮ್ಮಾಯಿ:
ದೇಶ ಮೊದಲು, ದೇಶ ಕಟ್ಟಲು ಯುವಕರು ಮುಂದಾಗಬೇಕು ಎಂದು ಕರೆ ಕೊಟ್ಟರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸದೃಢ ಭಾರತ ನಿರ್ಮಾಣ ಆಗಿದೆ. ಸಶಕ್ತ ಭಾರತವಾಗಿ ನಿರ್ಮಾಣ ಆಗುತ್ತಿದೆ. ಕೋವಿಡ್ ಸಮಯದಲ್ಲಿ ಸರ್ಕಾರಿ ನೌಕರರು ಮಾಡಿರುವ ಕೆಲಸ ಶ್ಲಾಘನೀಯ. ರಾಜ್ಯದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು
ಸ್ತ್ರೀ ಶಕ್ತಿ ಸಂಘ ಅಭಿವೃದ್ಧಿ ಮಾಡಿದ್ದೇವೆ, ಶಾಲೆಗಳ ಅಭಿವೃದ್ಧಿ ಮಾಡುತ್ತಿದ್ದೇವೆ. ಸ್ಕಿಲ್ ಡೆವೆಲಪ್‌ಮೆಂಟ್ ಮಾಡುವ ಕೆಲಸ ನಡೆಯುತ್ತಿದೆ. 8 ಸಾವಿರ ಸರ್ಕಾರಿ ಶಾಲಾ ಕೊಠಡಿಗಳನ್ನು ಹೊಸದಾಗಿ ನಿರ್ಮಾಣ ಮಾಡುತ್ತಿದ್ದೇವೆ. ಆರೋಗ್ಯ ಕೇಂದ್ರಗಳನ್ನು ಅಪ್ ಗ್ರೇಡ್ ಮಾಡುತ್ತಿದ್ದೇವೆ. ಯುವಕರಿಗೆ 5 ಲಕ್ಷ ಉದ್ಯೋಗ ನೀಡುವ ವಿವೇಕಾನಂದ ಯೋಜನೆ ಜಾರಿ ಮಾಡಲಾಗಿದೆ, ಕನಕದಾಸ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದೇವೆ. ಕ್ಷೀರ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆ ಮಾಡಿದ್ದೇವೆ ಎಂದು ತಿಳಿಸಿದರು.
3 ಸಾವಿರ ರಾಜ್ಯ ಹೆದ್ದಾರಿ ನಿರ್ಮಾಣ, ರೈಲ್ವೇ ಯೋಜನೆ ನಿರ್ಮಾಣ ಮಾಡುತ್ತಿದ್ದೇವೆ. ವಯಸ್ಸಾದವರಿಗೆ ಕನ್ನಡಕ ಕೊಡುವ ಕೆಲಸ ಮಾಡುತ್ತಿದ್ದೇವೆ. ಆ್ಯಸಿಡ್ ದಾಳಿಗೆ ಒಳಗಾದವರಿಗೆ 10 ಸಾವಿರ ರೂ. ಸಹಾಯ ಧನ ನೀಡುತ್ತಿದ್ದೇವೆ. ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನ ಹೆಚ್ಚು ಮಾಡಿದ್ದೇವೆ. ಮಳೆಯಿಂದ ಮನೆ ಕಳೆದುಕೊಂಡರೆ 5 ಲಕ್ಷ ರೂ. ಪರಿಹಾರ ಕೊಡಲಾಗುತ್ತಿದೆ ಎಂದರು.
ನೀರಾವರಿ ಯೋಜನೆ ಸಂಪೂರ್ಣ ಮಾಡುವ ನಿಟ್ಟಿನಲ್ಲಿ ಸಂಕಲ್ಪ ಮಾಡಿದ್ದೇವೆ. ಸಾರಿಗೆಯಲ್ಲಿ ಮುಂದಿನ ದಿನಗಳಲ್ಲಿ ಹೊಸ ಕಾರ್ಯಕ್ರಮ ಜಾರಿ ಮಾಡುತ್ತಿದ್ದೇವೆ. ಸಂಶೋಧನಾ ಅಭಿವೃದ್ಧಿ ನೀತಿ, ಉದ್ಯೋಗ ನೀತಿ ಜಾರಿ ಮಾಡಿದ್ದೇವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಪ್ ಗ್ರೇಡ್ ಮಾಡಲಾಗುತ್ತಿದೆ. ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. 750 ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ. ದೇಶದ 5 ಟ್ರಿಲಿಯನ್ ಡಾಲರ್ ಆರ್ಥಿಕ ಕೊಡುಗೆಗೆ 1 ಟ್ರಿಲಿಯನ್ ಕರ್ನಾಟಕದಿಂದ ಕೊಡುಗೆ ನೀಡುವ ಸಂಕಲ್ಪ ಮಾಡಿದ್ದೇವೆ. ನಾವೆಲ್ಲಾ ಒಟ್ಟಾಗಿ ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡೋಣ ಎಂದು ಜನತೆಗೆ ಕರೆ ನೀಡಿದ್ದಾರೆ.