ವಿದ್ಯುತ್ ಅವಘಡ : ತಪ್ಪಿದ ಭಾರೀ ಅನಾಹುತ

ನಿವೃತ್ತ ಪಿಎಸ್ಐ ಮನೆಯಲ್ಲಿ ನಡೆದ ಘಟನೆ

ಫ್ರಿಜ್ ಬೆಂಕಿಗೆ ಆಹುತಿ

ಮೂಡಲಗಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಫ್ರಿಜ್ ಹೊತ್ತಿ ಉರಿದ ಘಟನೆ ಪಟ್ಟಣದ ಲಕ್ಷ್ಮಿ ನಗರದಲ್ಲಿ ನಡೆದಿದೆ.

ಲಕ್ಷ್ಮಿ ನಗರ ನಿವಾಸಿ ಶಿವಶಂಕರ ಶಾಬನ್ನವರ ಎಂಬವರ ಮಾಲಕತ್ವದಲ್ಲಿರುವ ಮನೆಯಲ್ಲಿ ವಾಸವಿದ್ದ ನಿವೃತ್ತ ಪಿಎಸ್ಐ ಬಸವರಾಜ್ ಉಪ್ಪಾರ ಅವರು ಲಾಕ್ ಡೌನ್ ಇರುವ ಹಿನ್ನೆಲೆ ತೋಟದ ಮನೆಯಲ್ಲಿ ವಾಸವಾಗಿದ್ದು, ಸೋಮವಾರದಂದು ಸಂಜೆ ಸುಮಾರು 4:30 ಗಂಟೆಗೆ ಶಾರ್ಟ್ ಸರ್ಕ್ಯೂಟ್​ನಿಂದ ಫ್ರಿಜ್ ಬೆಂಕಿಗೆ ಆಹುತಿಯಾಗಿದೆ.ಅಷ್ಟೇ ಅಲ್ಲದೇ ಮನೆಯ ಎಲ್ಲ ಕಿಡಿಕಿಗಳು ಬಂದ್ ಇರುವುದರಿಂದ ಅಡುಗೆ ಮನೆಯ ವಸ್ತುಗಳು ಹಾಗೂ ಇಡೀ ಮನೆಯೂ ಹೊಗೆಯಲ್ಲಿ ಮುಳುಗಿವೆ. ಅದೃಷ್ಟವಶ ಪಕ್ಕದಲ್ಲಿರುವ ಸಿಲಿಂಡರ್ ಗ್ಯಾಸ್ ಸ್ಪೋಟಗೊಂಡಿಲ್ಲ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಸ್ಥಳೀಯರ ಸಮಯಪ್ರಜ್ಞೆಯಿಂದ ಬಾಗಿಲು ತಗೆದು ಬೆಂಕಿ ನಂದಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಆಹಾರ ಕಿಟ್ ವಿತರಿಸುವುತ್ತಿರುವ ಪತ್ರಕರ್ತ ಹಣಮಂತ ಕಂಕಣವಾಡಿಯವರ ಕಾರ್ಯ ಶ್ಲಾಘನೀಯ : ಪಿಎಸ್‌ಐ ಬಾಲದಂಡಿ

  • ಮೂಡಲಗಿ ತಾಲೂಕಿನ ಹಳ್ಳೂರ, ಖಾನಟ್ಟಿ, ಗುರ್ಲಾಪೂರ, ತುಕ್ಕಾನಟ್ಟಿ ಗ್ರಾಮಗಳ ನಿರ್ಗತಿಕರಿಗೆ ಆಹಾರ ಕಿಟ್ ವಿತರಣೆ

ಮೂಡಲಗಿ : ಕೊರೊನಾ ಮಾಹಾಮಾರಿ ಎಲ್ಲೆಡೆ ಪಸರಿಸುವ ಪ್ರಸ್ತುತ ಕಾಲಘಟ್ಟದಲ್ಲಿ ಕರ್ತವ್ಯವನ್ನೇ ಧ್ಯೇಯವಾಗಿಸಿಕೊಂಡು ದುಡಿಯುವ ಪತ್ರಕರ್ತರು, ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರ ಸಂಕಷ್ಟ ಸಂದರ್ಭದಲ್ಲಿ ನೆರವಿಗೆ ಧಾವಿಸಿ ಆಹಾರ ಕಿಟ್ ವಿತರಿಸುತ್ತಿರುವ ಪತ್ರಕರ್ತರ ಹಣಮಂತ ಕಂಕಣವಾಡಿ ಅವರು ಕಾರ್ಯ ಶ್ಲಾಘನೀಯವಾಗಿದೆ ಎಂದು ಸ್ಥಳೀಯ ಪಿಎಸ್‌ಐ ಎಚ್ ವೈ ಬಾಲದಂಡಿ ಹೇಳಿದರು.

ಪಟ್ಟಣದ ಯಲ್ಲಮ್ಮ ದೇವಸ್ಥಾನದ ಹತ್ತಿರ ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಪತ್ರಕರ್ತರು ಯಾವತ್ತು ಕ್ರಿಯಾಶೀಲರಾಗಿ, ಸದಾ ಚಟುವಟಿಕೆಯಲ್ಲಿರುವವರು. ಯಾವುದೇ ದುರ್ಘಟನೆ, ಸಮಾಜ ಘಾತುಕ ಘಟನೆ, ಸಾಂಕ್ರಾಮಿಕ ರೋಗಗಳು ಬಂದಾಗ ಪತ್ರಕರ್ತರೇ ನಿರಂತರ ಸುದ್ದಿಯ ಬೆನ್ನುಬೀಳುವವರು. ಅದೇ ರೀತಿಯಲ್ಲಿ ಹಣಮಂತ ಕಂಕಣವಾಡಿಯವರು ತಾಲೂಕಿನ ಗುರ್ಲಾಪೂರ, ಹಳ್ಳೂರ, ಖಾನಟ್ಟಿ, ತುಕ್ಕಾನಟ್ಟಿ ಹಾಗೂ ಮೂಡಲಗಿ ಪಟ್ಟಣದ ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಕಿಟ್ ನೀಡಿ, ಅವರಿಗೆ ಧೈರ್ಯ ತುಂಬುವoತ ಕಾರ್ಯ ಮಾಡುತ್ತಿದ್ದಾರೆ ಎಂದರು.

ಮೂಡಲಗಿ ಪಟ್ಟಣದ ಯಲ್ಲಮ್ಮ ದೇವಸ್ಥಾನದ ಹತ್ತಿರ ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಕಿಟ್ ವಿತರಣೆ

ರಾಜ್ಯ ಪ್ರಶಸ್ತಿ ವಿಜೇತ ಸಿದ್ದಣ್ಣ ದುರುದುಂಡಿ ಮಾತನಾಡಿ, ಕೊರೊನಾ ಮಾಹಾಮಾರಿ ಈಗ ಎಲ್ಲೆಡೆ ವ್ಯಾಪಿಸುತ್ತಿದ್ದು ಆ ಬಗ್ಗೆ ಸಮಾಜಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಆದರಲ್ಲೂ ಪತ್ರಕರ್ತರು ಸಮಾಜ ಸೇವೆ ಹಾಗೂ ಸಂಕಷ್ಟದಲ್ಲಿ ಇರುವ ಬಡ ಜನರಿಗೆ ನೆರವಾಗುವುದು ಉತ್ತಮ ಕಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ಕೆಎಮ್‌ಎಫ್ ಮಾಜಿ ನಿರ್ದೇಶಕ ಶಂಕರ ಬೋಳನ್ನವರ, ಮೂಡಲಗಿ ಪುರಸಭೆ ಸದಸ್ಯ ಆನಂದ ಟಪಾಲದಾರ್, ಮಾಜಿ ಪುರಸಭೆ ಸದಸ್ಯ ರಾಮಪ್ಪ ನೇಮಗೌಡರ್, ಬಾಬು ಗದಾಡಿ, ನಾಗಪ್ಪ ಮರ್ದಿ, ಬಸಲಿಂಗಪ್ಪ ನಿಂಗನೂರು, ಬಸವರಾಜ ರೋಡನ್ನವರ, ಎಸ್.ಜಿ. ಹಂಚನಾಳ, ಮಹಾದೇವ ರಂಗಾಪೂರ, ಎಸ್.ಎಮ್ ಇಟನ್ಯಾಳ ಹಾಗೂ ಅನೇಕರು ಉಪಸ್ಥಿತರಿದ್ದರು.

ಕೂಲಿ ಕಾರ್ಮಿಕರಿಗೆ ಸ್ವಂತ ಹಣದಲ್ಲಿ ಆಹಾರ ಕಿಟ್ ವಿತರಣೆ : ದಳವಾಯಿ

ಮೂಡಲಗಿ : ಕೂಲಿ, ಕುಲಕಸುಬು ಮಾಡಿ ಜೀವನ ನಡೆಸುತ್ತಿರುವ ಬಡ ಕುಟುಂಬದ ಜನರಿಗೆ ಈ ಮಹಾಮಾರಿ ಕೊರೋನಾ ಹಿನ್ನೆಲೆ ಲಾಕ್‌ಡೌನ್ ಮಾಡಿದ್ದರಿಂದ ಕೆಲಸವಿಲ್ಲದೆ ಒಪ್ಪತ್ತಿನ ಊಟಕ್ಕೂ ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ನೆರವು ನೀಡುವುದು ಪ್ರತಿಯೊಬ್ಬರ ಕತ್ಯರ್ವವಾಗಿದೆ ಎಂದು ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ ಹೇಳಿದರು.

ಭಾನುವಾರದಂದು ಪಟ್ಟಣದ ಎಪಿಎಮ್‌ಸಿ ಆವರಣದಲ್ಲಿ ಕಾಂಗ್ರೆಸ ಮುಖಂಡ ಅರವಿಂದ ದಳವಾಯಿ ಅವರು ತಮ್ಮ ಸ್ವಂತ ಖರ್ಚಿನಿಂದ ಕೂಲಿ ಕಾರ್ಮಿಕರಿಗೆ ಹಾಗೂ ಬಡ ಮಹಿಳೆಯರಿಗೆ ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವುಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ ಪಟ್ಟಣದ ವಿವಿಧ ವಾರ್ಡುಗಳಲ್ಲಿಯ ಹಾಗೂ ಅರಭಾವಿ ಕ್ಷೇತ್ರದ ವಿವಿಧ ಗಾಮಗಳಿಗೆ ತೆರಳಿ ಅಲ್ಲಿನ ಬಡವರಿಗೆ ದಿನಸಿ ಕಿಟ್ ವಿತರಿಸುವುದಾಗಿ ಹೇಳಿ, ನಾಳೆಯಿಂದ ಜಿಲ್ಲೆ ಅನ್‌ಲಾಕ್ ಆಗುತ್ತಿದೆ ಎಂದು ಮೈಮರೆಯದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಜಾಗರೂಕರಾಗಿರಲು ಹೇಳಿದರು.

ಹಿರಿಯ ಕಾಂಗ್ರೆಸ ಮುಖಂಡ ಎಸ್ ಆರ್ ಸೋನವಾಲ್ಕರ,ಅರಭಾವಿ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸಲೀಂ ಇನಾಮದಾರ ಮಾತನಾಡಿ, ಕೊರೋನಾ ಮಹಾಮಾರಿಯಿಂದ ಇಡೀ ರಾಜ್ಯವೇ ತಲ್ಲಣಗೊಂಡಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಮಾಡುವುದರ ಮೂಲಕ ತಮ್ಮ ಜೀವವನ್ನು ರಕ್ಷಿಸಿಕೊಳ್ಳಬೇಕು ಎಂದರು.

ಕಾoಗ್ರೆಸ ಕಾರ್ಯಕರ್ತರಾದ ಬಸವರಾಜ ಪಾಟೀಲ, ಹಸನಸಾಬ ಮುಗುಟಖಾನ, ವಿರುಪಾಕ್ಷಿ ಮುಗುಳಖೋಡ, ಶರೀಫ್ ಪಟೇಲ, ಗಿರೀಶ ಕರಡಿ, ಮಲೀಕ ಕಳ್ಳಿಮನಿ, ರವಿ ಮೂಡಲಗಿ, ರಾಜು ಅತ್ತಾರ, ಚನ್ನಯ್ಯಾ ನಿರ್ವಾನಿ, ಇರ್ಶಾದ ಪೈಲವಾನ, ರಾಬರ್ಟ ಮೂಡಲಗಿ, ಮದಾರಸಾಬ ಜಕಾತಿ, ಸಾಹೇಬ ಪೀರಜಾದೆ, ಮಲ್ಲಿಕಾರ್ಜುನ ಕಬ್ಬೂರ, ಮೈನೂದ್ದೀನ ಬಳಿಗಾರ, ರಮಜಾನ ಬಿಜಾಪೂರ, ರಾಹುಲ ಕಾಂಬಳೆ, ಕುಮಾರ ದೊಡಮನಿ ಉಪಸ್ಥಿತರಿದ್ದರು.

ಮೂಡಲಗಿ ಕೋರ್ಟ್ ಆವರಣದಲ್ಲಿ ಬಸವ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಣೆ

ಮೂಡಲಗಿ : 12ನೇ ಶತಮಾನದಲ್ಲಿ ಜಾತಿ ಭೇದವನ್ನು ಅಂಧಾನುಕರಣೆ ಎಲ್ಲ ವಿಶೇಷವಾದ ಕಾಲದಲ್ಲಿ ಇಂತಹ ಸಾಮಾಜಿಕ ಅನಿಷ್ಟದ ವಿರುದ್ಧ ಕ್ರಾಂತಿಯನ್ನು ಆರಂಭಿಸಿದವರು ಬಸವಣ್ಣನವರು ಎಂದು ಹಿರಿಯ ನ್ಯಾಯವಾದಿ ಎ. ಕೆ. ಮದಗಣ್ಣವರ ಹೇಳಿದರು

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬಸವ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾದ ಬಸವಣ್ಣನವರ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಬಸವಣ್ಣನವರು ಅಂತರ್ಜಾತಿ ವಿವಾಹ ಜಾರಿಗೆ ತಂದರು, ಬಸವೇಶ್ವರ ದೃಷ್ಟಿಯಲ್ಲಿ ಇಡೀ ಮಾನವ ಜನಾಂಗವೇ ಒಂದು ಕುಟುಂಬವಿದ್ದಂತೆ ಯಾವುದೇ ತಾರತಮ್ಯವಿಲ್ಲದೆ ಜಾತಿಭೇದವನ್ನು ಖಂಡಿಸಿ, ಸಕಲರಿಗೂ ಲೇಸನ್ನೇ ಬಯಸಿದವರು ಬಸವಣ್ಣನವರು ಎಂದು ಹೇಳಿದರು.
ಕೊರೋನಾ ವೈರಸ್ ಇಡೀ ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಹಿನ್ನೆಲೆ ನಮ್ಮ ಭಾರತ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ ಆದ್ದರಿಂದ ಬಸವ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ನ್ಯಾಯವಾದಿ ಸಂಘದ ಮಾಜಿ ಮಹಿಳಾ ಪ್ರತಿನಿಧಿ ಶಿಲ್ಪಾ ಗೌಡಿಗೌಡರ ಮಾತನಾಡಿ, ಛಲದಿಂದ ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆ ಎಲ್ಲಿ ಬೆಳೆದ ಅಂಬೇಡ್ಕರ್ ಅವರು ನಮ್ಮ ದೇಶದ ಅಪೂರ್ವ ನಾಯಕರಲ್ಲಿ ಒಬ್ಬರು ಹಾಗೂ ಬಸವಣ್ಣನವರು ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ಸ್ಥಾನವನ್ನು ಕಲ್ಪಿಸಿ ಕೊಟ್ಟಿರುವುದಕ್ಕೆ ಆಧ್ಯಾತ್ಮಿಕ ಕ್ಷೇತ್ರದ ಧ್ರುವತಾರೆ ಶರಣೆ ಅಕ್ಕಮಹಾದೇವಿಯವರು ಹಾಗೂ ಇತರೆ ಶರಣೆಯರು ಸಾಕ್ಷಿಯಾಗಿದ್ದಾರೆ. ಬಸವಣ್ಣನವರು ಸತ್ಯ ಶುದ್ಧ ಕಾಯಕ ಮತ್ತು ದಾಸೋಹ ತತ್ವ, ಸ್ತ್ರೀ ಸಮಾನತೆ ವೈಚಾರಿಕ ಚಿಂತನೆ ಜಾತ್ಯತೀತ ಸಮಾಜದ ಕಲ್ಪನೆ, ದಯವೇ ಧರ್ಮದ ಮೂಲ, ನಡೆ-ನುಡಿಯಲ್ಲಿ ಸಮನ್ವಯತೆ, ಸಮಾಜದ ನೈಜ್ಯ ದರ್ಶನ, ದೇಹವೇ ದೇವಾಲಯ ಹೀಗೆ ಹಲವಾರು ಪರಿಕಲ್ಪನೆಗಳ ಮೇಲೆ ಬಸವಣ್ಣನವರ ವಚನಗಳ ಕ್ರಾಂತಿಯನ್ನೇ ಮಾಡಿದ್ದಾರೆ ಎಂದು ಹೇಳಿದರು.

ಬಿ ವೈ ಹೆಬ್ಬಾಳ ಮಾತನಾಡಿ, ಕೊರೋನಾ ವೈರಸ್ ಹಿನ್ನೆಲೆ ಬಸವ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿಯನ್ನು ಸರಕಾರದ ಆದೇಶದಂತೆ ಅತಿ ಸರಳ ರೀತಿಯಲ್ಲಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು, ನ್ಯಾಯಾಲಯದ ಆವರಣದಲ್ಲಿ ಮಹಾತ್ಮರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಕೀಲರಾದ
ಎಸ್.ಎಸ್.ಗೌಡಿಗೌಡರ, ಆರ್. ಬಿ. ಮಮದಾಪುರ, ಐ. ಎಮ್. ಹಿರೇಮಠ್, ಎಲ್. ಬಿ. ವಡರ್, ಆರ್. ಬಿ. ಪತ್ತಾರ್, ಎ. ಎಸ್. ಕೌಜಲಗಿ, ಎನ್. ಬಿ. ನೇಮಗೌಡರ್, ಎಸ್. ವೈ. ಸಣ್ಣಕ್ಕಿ, ಎಮ್. ಪಿ ಅರಸಪ್ಪಗೋಳ, ಉಪಸ್ಥಿತರಿದ್ದರು

WhatsApp
Follow by Email