ಬೈಲಹೊಂಗಲ :ಶ್ರೀಮಾತಾ ದುರ್ಗಾಪರಮೇಶ್ವರಿ 12ನೇ ವರ್ಷದ ಜಾತ್ರಾ ಮಹೋತ್ಸವ ಮುಂದೂಡಿಕೆ

ಬೈಲಹೊಂಗಲ : ಮಾರ್ಚ 27 ರಿಂದ 29 ರವರೆಗೆ ನಡೆಯಬೇಕಾಗಿದ್ದ ಬಸವ ನಗರದ 4 ಅಡ್ಡರಸ್ತೆಯಲ್ಲಿರುವ ಶ್ರೀಮಾತಾ ದುರ್ಗಾಪರಮೇಶ್ವರಿ 12ನೇ ವರ್ಷದ ಜಾತ್ರಾ ಮಹೋತ್ಸವವನ್ನು ಸರಕಾರದ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ದೇವಸ್ಥಾನದ ಧರ್ಮದರ್ಶಿ ವೇ.ಮೂ.ಡಾ.ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ವೈರಸ್ ವಿಶ್ವವ್ಯಾಪಿ ಹರಡಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನಹಿತ ದೃಷ್ಟಿಯಿಂದ ದಿಟ್ಟ ನಿರ್ಧಾರಗಳನ್ನು ಕೈಗೊಂಡು ಮನವಿ ಮಾಡಿದ್ದರ ಪರಿಣಾಮ ದಿ.22 ರ ಜನತಾ ಕರ್ಪ್ಯೂಗೆ ಸಂಪೂರ್ಣ ಬೆಂಬಲವಿದೆ ಪ್ರತಿಯೊಬ್ಬ ನಾಗರಿಕರು ಸಹಕಾರ ನೀಡಬೇಕು ಎಂದರು.
ದಿ.27 ರಿಂದ 29 ರವರೆಗೆ ಹಮ್ಮಿಕೊಂಡಿದ್ದ ಶ್ರೀಮಾತಾ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವವನ್ನು ನಾಡಿನ ಸ್ವಾಸ್ಥ ಕಾಪಾಡಲು ಮುಂದೂಡಲಾಗಿದ್ದು ವರ್ಷ ಪದ್ದತಿಯಂತೆ ಸರಳವಾಗಿ ದುರ್ಗಾದೇವಿಗೆ ಹೋಮ, ಹವನ, ಪೂಜೆ ಪುನಸ್ಕಾರ ಜಾತ್ರಾ ಕಮೀಟಿಯ ಸದಸ್ಯರಷ್ಟೆ ಪಾಲ್ಗೊಂಡು ನೆರವೇರಿಸುವರು. ಜಾತ್ರಾ ಮಹೋತ್ಸವವನ್ನು ಸರಕಾರದ ಆದೇಶದ ಮೇರೆಗೆ ಮುಂದಿನ ದಿನಮಾನಗಳಲ್ಲಿ ನಿಗದಿಪಡಿಸಿ ಸದ್ಭಕ್ತರಿಗೆ ತಿಳಿಸುವುದಾಗಿ ಧರ್ಮದರ್ಶಿ ವೇ.ಮೂ.ಡಾ.ಮಹಾಂತಯ್ಯ ಶಾಸ್ತ್ರೀಜಿ ಅವರು ತಿಳಿಸಿದರು.
ಪ್ರತಿಯೊಬ್ಬ ಭಾರತೀಯನು ಸರಕಾರದ ಆದೇಶ ಪಾಲಿಸಿ ದೇಶದಲ್ಲಿ ಕೊರೊನಾ ಹರಡದಂತೆ ಎಚ್ಚರಿಕೆ ವಹಿಸಿರಿ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ದೇವತಾ ಆರಾಧನೆಯನ್ನು ಮಾಡಿರಿ, ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ, ಸರಕಾರದ ನಿರ್ದೇಶನಗಳನ್ನು ಉಲ್ಲಂಘಿಸಬೇಡಿ, ಸದೃಡ ದೇಶ ನಿರ್ಮಾಣಕ್ಕೆ ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಅನಕ್ಷರಸ್ತರಿಗೆ ತಿಳಿಹೇಳಿ ಎಂದು ಶ್ರೀಗಳು ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಜಾತ್ರಾ ಕಮೀಟಿ ಅಧ್ಯಕ್ಷ ರಾಜು ಕುಡಸೋಮನ್ನವರ, ಉಪಾಧ್ಯಕ್ಷ ಸುಭಾಸ ತುರಮರಿ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಹಂಪಿಹೊಳಿ, ರುದ್ರಪ್ಪ ಮೆಟಗುಡ್ಡ, ಪರಶುರಾಮ ರಾಯಬಾಗ, ಗದಿಗೆಪ್ಪ ಮಡಿವಾಳರ, ಕುಮಾರ ರೇಶ್ಮಿ, ಸಿದ್ರಾಮ ಲಿಂಗಶೆಟ್ಟಿ ಮತ್ತಿತರರು ಇದ್ದರು.

Share
WhatsApp
Follow by Email