ಕೊರೊನಾಗೆ ನಂದಿನಿ ಹಾಲು ಬೇಡಿಕೆ ಕುಸಿತ. ರೈತರ ಹಾಗೂ ಗ್ರಾಹಕರ ಹಿತಾಸಕ್ತಿಗೆ ಸದಾಬದ್ಧ- ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

.
ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಹೇರಲಾಗಿರುವ ಲಾಕ್‍ಡೌನ್‍ನಿಂದಾಗಿ ನಂದಿನಿ ಹಾಲು ಹಾಗೂ ಮೊಸರಿಗೆ ಬೇಡಿಕೆ ಕುಸಿದಿದೆ. ನಿತ್ಯ 8 ಲಕ್ಷ ಲೀಟರ್ ಹಾಲು ಮಾರಾಟವಾಗದೇ ಉಳಿಯುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶನಿವಾರ ಕೆಎಂಎಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೊರೊನಾ ವೈರಸ್ ಹರಡುವಿಕೆ ತಡೆಯಲು ಕೆಎಂಎಫ್ ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಹಾಲು ಉತ್ಪಾದಕರ ಸಂಘಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಇನ್ನೂ 10 ಲಕ್ಷ ಲೀಟರ್ ಮಾರಾಟವಾಗದೇ ಉಳಿಯುವ ಸಾಧ್ಯತೆಯಿದೆ ಎಂದರು.
ಕೆಎಂಎಫ್ ತನ್ನ 14 ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ ನಿತ್ಯ 9 ಲಕ್ಷ ಹೈನುಗಾರ ರೈತರಿಂದ 68 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತಿದೆ. ಈ ಹಾಲಿನ ಸಂಗ್ರಹ 68 ಲಕ್ಷ ದಿಂದ 70 ಲಕ್ಷ ಲೀಟರ್‍ಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಸಂಗ್ರಹವಾಗುವ 70 ಲಕ್ಷ ಲೀಟರ್ ಹಾಲಿನ ಪೈಕಿ 40 ಲಕ್ಷ ಲೀಟರ್ ಹಾಲು (ಹಾಲು, ಮೊಸರು, ಟೆಟ್ರಾ, ಫೆಕ್ಸಿ) ಮಾರಾಟವಾಗುತ್ತಿದೆ. 15 ಲಕ್ಷ ಲೀಟರ್ ಹಾಲನ್ನು ಪೌಡರ್ ಮಾಡಲಾಗುತ್ತಿದೆ. ಇದರ ಜೊತೆಗೆ ಹೊರಗಿನ ಪೌಡರ್ ಪ್ಲಾಂಟ್‍ಗಳನ್ನು ಸಂಪರ್ಕಿಸಿ 7 ಲಕ್ಷ ಲೀಟರ್ ಹಾಲನ್ನು ಫೌಡರ್ ಮಾಡಲಾಗುತ್ತಿದೆ ಎಂದರು.
ಹಾಲಿನ ಸಂಸ್ಕರಣೆಗೆ ಅನೇಕ ಬಗೆಯ ಕಚ್ಛಾ ಪದಾರ್ಥಗಳ ಕೊರತೆ ಕಂಡುಬರುತ್ತಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 15000 ಕಾರ್ಮಿಕರ ಪೈಕಿ ಹಾಲಿ 5000 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರೆ. ಮುಂಬರುವ ದಿನಗಳಲ್ಲಿ ಕಾರ್ಮಿಕರ ತೀವ್ರ ಕೊರತೆ ಎದುರಾಗುವ ಸಾಧ್ಯತೆಗಳಿವೆ. ಹಾಲಿನ ಮಾರಾಟಕ್ಕೆ ಕಚ್ಚಾ ಪದಾರ್ಥಗಳ ಸಾರಿಗೆ ಅವಶ್ಯಕತೆಯಿದೆ. ಲಾರಿಗಳು ಮತ್ತು ಡ್ರೈವರ್‍ಗಳ ಕೊರತೆಯಿಂದಾಗಿ ಅಲ್ಲಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದರು.
ರಾಮನಗರದಲ್ಲಿ ಹೊಸದಾಗಿ ಪ್ರತಿ ದಿನ 100 ಮೆಟ್ರಿಕ್ ಟನ್ ಸಾಮಥ್ರ್ಯದ ಹಾಲಿನ ಪುಡಿ ಘಟಕವನ್ನು ಸ್ಥಾಪನೆ ಮಾಡಲಾಗಿದ್ದು, ಕಾರ್ಮಿಕರ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಮಾ. 30 ರಿಂದ 3 ಲಕ್ಷ ಲೀಟರ್ ಹಾಲನ್ನು ಪೌಡರ್ ಆಗಿ ಪರಿವರ್ತಿಸಲಾಗುವುದು. ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಸೇರಿ ಚರ್ಚಿಸಿ, ಸಂಸ್ಥೆಯು ಯಾವ ರೀತಿ ಬದುಕಿಸಬೇಕು. ರೈತರಿಗೆ ಯಾವ ರೀತಿ ಅನುಕೂಲ ಮಾಡಿಕೊಡುವ ಬಗ್ಗೆ ಚರ್ಚಿಸಲಾಗುವುದು. ಪರಿಸ್ಥಿತಿ ಹೀಗೆ ಮುಂದುವರೆದರೆ ನಾವು ಕಠಿಣ ತೀರ್ಮಾನ ಕೈಗೊಳ್ಳಲು ಬದ್ಧರಿದ್ದೆವೆ. ರೈತರ ಹಿತಾಸಕ್ತಿ ಕಾಪಾಡುವುದುದರ ಜೊತೆಗೆ ಸಂಸ್ಥೆಯು ಹೆಮ್ಮೆರವಾಗಿ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರೈತರು ಹಾಗೂ ಗ್ರಾಹಕರು ಕೆಎಂಎಫ್ ಜೊತೆಗೆ ಸಹಕಾರ ನೀಡಬೇಕು ಎಂದು ಸಂಸ್ಥೆಯ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದರು.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ, ಪಶುಸಂಗೋಪನಾ ಇಲಾಖೆ ನಿರ್ದೇಶಕ ಡಾ. ಎ.ಎನ್. ಹೆಗಡೆ, ಅಭಿಯಂತರರು ಮತ್ತು ಖರೀದಿ ವಿಭಾಗದ ಡಾ. ಸುರೇಶಕುಮಾರ, ಮಾರುಕಟ್ಟೆ ವಿಭಾಗದ ನಿರ್ದೇಶಕ ಡಾ.ಎಂ.ಟಿ.ಕುಲಕರ್ಣಿ, ಮದರ ಡೈರಿ ನಿರ್ದೇಶಕ ಡಾ.ಸತ್ಯನಾರಾಯಣ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ಕೆ. ವಾಯ್. ಮೀಶಿ

Share
WhatsApp
Follow by Email