ರಾಮನಗರ: ಪೌಡರ್‍ಪ್ಲಾಂಟ್‍ನಲ್ಲಿ ದುಡಿಯುತ್ತಿರುವ ಕಾರ್ಮಿಕರು, ಸಿಬ್ಬಂದಿಗಳನ್ನು ಅಭಿನಂದಿಸಿದ ಬಾಲಚಂದ್ರ ಜಾರಕಿಹೊಳಿ

ರಾಮನಗರ: ಕೊರೊನಾ ಹಿನ್ನಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಟ್ರೇಟ್ರಾ/ಪ್ಲೆಕ್ಸಿಪ್ಯಾಕ್ ಮಾದರಿಯ ಹಾಲುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಇವುಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ದೊರೆಯುವಂತೆ ಮಾಡಲು ಮುಂದಿನ ದಿನಗಳಲ್ಲೂ ಸಹ ಸನ್ನದ್ಧರಾಗುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಸಂಜೆ ರಾಮನಗರದ ಹಾಲಿನ ಪುಡಿ ಘಟಕಕ್ಕೆ ಭೇಟಿ ನೀಡಿದ ಬಳಿಕ ಕೆಎಮ್‍ಎಫ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದರು.
ಟ್ರೇಟ್ರಾ/ಪ್ಲೆಕ್ಸಿಪ್ಯಾಕ್ ಹಾಲುಗಳು ದೀರ್ಘಕಾಲ ಬಾಳಿಕೆಗೆ ಬರುತ್ತಿದ್ದು, ಇದರಿಂದ ಗ್ರಾಹಕರಿಗೆ ಪ್ರಸಕ್ತ ಲಾಕ್‍ಡೌನ್ ಸನ್ನಿವೇಶದಲ್ಲಿ ಹೆಚ್ಚು ಅನುಕೂಲವಾಗಿದೆ. ಈ ಮಾದರಿಯ ಹಾಲುಗಳಿಗೆ ಗ್ರಾಹಕರಿಂದ ಹೆಚ್ಚೆಚ್ಚು ಬೇಡಿಕೆಗಳು ಬರುತ್ತಿವೆ ಎಂದು ಹೇಳಿದರು.
ಲಾಕ್‍ಡೌನ್ ಈಗಾಗಲೇ ಜಾರಿಯಲ್ಲಿದ್ದು, ಇದರ ತೆರವಿನ ನಂತರ ಗ್ರಾಹಕರಿಗೆ ಹಾಗೂ ರೈತರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಲಾಗುವುದು. ರಾಜ್ಯದಲ್ಲಿರುವ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳು ರೈತರು ಹಾಗೂ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು. ಇವರ ಹಿತದೃಷ್ಟಿಯೇ ನಮಗೆ ಮುಖ್ಯವಾಗಿದೆ ಎಂದು ಹೇಳಿದರು.
ದಕ್ಷಿಣ ಭಾರತದಲ್ಲಿಯೇ ದೊಡ್ಡದು ಎನ್ನಬಹುದಾದ ಹೊಸ ಪೌಡರ್‍ಪ್ಲಾಂಟ್‍ನ್ನು ರಾಮನಗರದಲ್ಲಿ 300 ಕೋಟಿ ರೂಗಳ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಪ್ರತಿದಿನ 10ಲಕ್ಷ ಲೀಟರ್ ಸಾಮಥ್ರ್ಯವನ್ನು ಇದು ಹೊಂದಿದೆ. ಲಾಕ್‍ಡೌನ್ ಹಿನ್ನಲೆಯಲ್ಲಿ ನಮ್ಮ ಸಂಸ್ಥೆಯಲ್ಲಿರುವ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿಕೊಂಡು ಕಾರ್ಮಿಕರ ಮೂಲಕ ಪ್ರತಿದಿನ 2ಲಕ್ಷ ಲೀಟರ್ ಹಾಲನ್ನು ಪುಡಿಯನ್ನಾಗಿ ಪರಿವರ್ತಿಸುತ್ತಿದ್ದಾರೆ. ಕ್ಲೀಷ್ಟಕರ ಸನ್ನಿವೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಸಂಸ್ಥೆಯ ಎಲ್ಲ ಅಧಿಕಾರಿಗಳು, ಕಾರ್ಮಿಕರು ಮತ್ತು ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ನುರಿತ ತಂತ್ರಜ್ಞರನ್ನು ಕರೆಯಿಸಿಕೊಂಡು ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸಲಾಗುವುದು. ರಾಮನಗರದಲ್ಲಿರುವ ಪೌಡರ್‍ಪ್ಲಾಂಟ್ ನಮ್ಮ ಸಂಸ್ಥೆಗೆ ಒಂದು ಹಿರಿಮೆಯಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಾಜಿ ಶಾಸಕ ಎಮ್.ವಿ.ನಾಗರಾಜ, ಕೆಎಮ್‍ಎಫ್ ಮಾಜಿ ಅಧ್ಯಕ್ಷ ಪಿ. ನಾಗರಾಜ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರಾಮಚಂದ್ರ, ಕೆಎಮ್‍ಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ, ಅಭಿಯಂತರ ನಿರ್ದೇಶಕ ಸುರೇಶಕುಮಾರ, ಪಶು ಸಂಗೋಪನಾ ನಿರ್ದೇಶಕ ಡಾ. ಡಿ.ಎನ್. ಹೆಗಡೆ, ಮಾರುಕಟ್ಟೆ ನಿರ್ದೇಶಕ ಮೃತ್ಯುಂಜಯ ಕುಲಕರ್ಣಿ, ರಾಮನಗರ ಹಾಲಿನ ಪುಡಿ ಘಟಕದ ಮುಖ್ಯಸ್ಥ ವಿಜಯಕುಮಾರ ಮುಂತಾದವರು ಉಪಸ್ಥಿತರಿದ್ದರು.
Share
WhatsApp
Follow by Email