ಬೆಂಗಳೂರು: ಪ್ರತಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಹೆಸರಿನಲ್ಲಿ ಸಂಘ ಸ್ಥಾಪಿಸಿ ‘ಯುವಕ, ಯುವತಿಯರಿಗೆ ಕೆಲಸ ಕೊಡಲು’ ₹10 ಲಕ್ಷದ ಯೋಜನೆ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಈ ಸಂಘದಲ್ಲಿ ಹಿಂದುಳಿದ ಸಮುದಾಯದ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾತನಾಡಿದರು.‘ಪ್ರತಿ ಗ್ರಾಮಗಳಲ್ಲಿ ಸ್ವಾಮಿ ವಿವೇಕಾನಂದ ಹೆಸರಿನಲ್ಲಿ ಸಂಘ ಸ್ಥಾಪಿಸುವ ಮೂಲಕ, 5 ಲಕ್ಷ ಯುವಕರು ಮತ್ತು 5 ಲಕ್ಷ ಯುವತಿಯರಿಗೆ ಕೆಲಸ ಕೊಡಲು ಉದ್ದೇಶಿಸಲಾಗಿದೆ‘ ಎಂದರು. ‘ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ನಿಜವಾದ ಹರಿಕಾರ. ಇಂದು ಮಾತು ಮಾತಿಗೂ ಸಾಮಾಜಿಕ ನ್ಯಾಯ ಎಂದು ಹೇಳುತ್ತಾರೆ. ಆದರೆ ಪದೇ ಪದೇ ಸಾಮಾಜಿಕ ನ್ಯಾಯ ಎನ್ನುವುದರ ಹಿಂದೆ ಸ್ವಾರ್ಥ ಇದೆ. ಸಾಮಾಜಿಕ ನ್ಯಾಯ ಎನ್ನುವುದು ಕೆಲವರ ಭಾಷಣದ ಸರಕಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡಿ ಪ್ರಯೋಜನವಿಲ್ಲ. ಕಾರ್ಯರೂಪಕ್ಕೆ ತರಬೇಕು‘ ಎಂದರು.
ನಾನು ಶಿಕ್ಷಣ, ಉದ್ಯೋಗ, ಸಬಲೀಕರಣ ಮೂರು ವಿಚಾರಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಅರಸು ಅವರ ಸಾಮಾಜಿಕ ನ್ಯಾಯದ ಕಲ್ಪನೆ ಈಡೇರಿಸಲು ಬದ್ಧನಾಗಿದ್ದೇನೆ. ಅವರು ಹಾಕಿಕೊಟ್ಟ ಮಾರ್ಗದಲ್ಲೇ ಸರ್ಕಾರ ಹೆಜ್ಜೆ ಹಾಕಲಿದೆ’ ಎಂದರು.‘ನಾವು ಅರಸು ಅವರ ಆದರ್ಶಗಳನ್ನು ಜೀವಂತವಾಗಿಟ್ಟುಕೊಳ್ಳಬೇಕು. ಕರ್ನಾಟಕದ ಇವತ್ತಿನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕದ ಯಶಸ್ಸಿಗೆ ಬಹುಪಾಲು ಅರಸು ಅವರ ದೂರದೃಷ್ಟಿಯೇ ಕಾರಣ. ಅವರು ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದರು. ಉಳುವವನೇ ಒಡೆಯ ಚಳವಳಿಗೆ ಕಾನೂನಿನ ಶಕ್ತಿ ತುಂಬಿದರು. ಕರ್ನಾಟಕದಲ್ಲಿ ಆಹಾರೋತ್ಪಾದನೆ ಗಣನೀಯವಾಗಿ ಹೇರಲು ಭೂ ಸುಧಾರಣೆಯೇ ಕಾರಣ’ ಎಂದರು. ‘ಮನುಷ್ಯ ಭೂಮಿ ನನ್ನದು, ನನ್ನದು ಎಂದು ಹೇಳುತ್ತಾನೆ. ಆದರೆ, ಸ್ಮಶಾನ ಕಂಡಾಗ ಅಲ್ಲಿ ಮನುಷ್ಯ ನನ್ನವನು ಎಂದು ಭೂಮಿ ಹೇಳುತ್ತದೆ. ಪ್ರಗತಿಪರ ದೂರದೃಷ್ಟಿಗೆ ದೇವರಾಜ ಅರಸು ಅವರ ನಿಲುವುಗಳೇ ಕಾರಣ. ಜನತಾ ಮನೆ, ಪಡಿತರ ವ್ಯವಸ್ಥೆ ಆರಂಭವಾಗಿದ್ದು ಅರಸು ಕಾಲದಲ್ಲಿ. ವ್ಯವಸಾಯದಲ್ಲಿ ಸುಧಾರಣೆ ತಂದಿದ್ದು ಅರಸು. ಕಾಳಿ ವಿದ್ಯುತ್ ಯೋಜನೆ ತಂದವರು ಅರಸು. ಸಣ್ಣ ಸಣ್ಣ ಸಮಾಜವನ್ನು ಗುರುತಿಸಿ, ನಾಯಕತ್ವ ಬೆಳೆಸಿ ರಾಜ್ಯ ನಾಯಕರನ್ನಾಗಿ ಮಾಡಿದ್ದರು. ಇವತ್ತು ಸಾಮಾಜಿಕ ನ್ಯಾಯ ಪ್ರತಿಪಾದನೆ ಕೇವಲ ಭಾಷಣಕ್ಕೆ ಸೀಮಿತವಾಗಿದೆ’ ಎಂದರು.‘ಸಮಾಜದ ಕಟ್ಟಕಡೆಯವರಿಗೆ ನ್ಯಾಯ ಸಿಗಬೇಕಿದೆ.ಹಿಂದುಳಿದ ಹಾಸ್ಟೆಲ್‌ಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು. ದೇವರಾಜ ಅರಸು ಹೆಸರಲ್ಲಿ ಪಿಎಚ್. ಡಿ ಮಾಡುತ್ತಿರುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಹಿಂದುಳಿದ ವರ್ಗದ ನಿಗಮ ಮಂಡಳಿಗೆ ಹೆಚ್ಚಿನ ಅನುದಾನ ನೀಡುತ್ತೇನೆ. ನಿಂತುಹೋಗಿದ್ದ ಮಹಿಳೆಯರ ಟೈಲರಿಂಗ್ ತರಬೇತಿ ಮತ್ತೆ ಮುಂದುವರಿಸುತ್ತೇವೆ’ ಎಂದೂ ಹೇಳಿದರು.‘ಅರಸು ಅವರು ನಮಗೆ ಬಹು ದೊಡ್ಡ ಪ್ರೇರಣೆ. ಅವರ ಮಾರ್ಗದರ್ಶನದಲ್ಲಿ ನಮ್ಮ ಸರ್ಕಾರ ಹೆಜ್ಜೆ ಇಡಲಿದೆ. ಇತ್ತೀಚೆಗೆ ಹಿಂದುಳಿದ ಮಠಗಳು ಉತ್ತಮ ಕೆಲಸ ಮಾಡುತ್ತಿವೆ. ಹಿಂದುಳಿದ ಮಠಗಳಿಗೆ ₹129 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ. ಸಾಧಕರಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಅರಸು ಅವರು ಪ್ರೇರಣೆಯಾಗಿ ನಮ್ಮ ಮುಂದೆ ನಿಂತಿದ್ದಾರೆ. ಅರಸು ಅವರ ದೂರದೃಷ್ಟಿ ವಿಚಾರಗಳಿಗೆ ಸರ್ಕಾರ ಕಂಕಣಬದ್ಧವಾಗಿದೆ’ ಎಂದೂ ಹೇಳಿದರು.ಕಾರ್ಯಕ್ರಮದಲ್ಲಿ ಡಾ. ಅಣ್ಣಯ್ಯ ಕುಲಾಲ್ ಅವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಲಾಯಿತು.ಅದಕ್ಕೂ ಮೊದಲು ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಡಿ. ದೇವರಾಜ ಅರಸು ಪ್ರತಿಮೆಗೆ ಮುಖ್ಯಮಂತ್ರಿ ಮಾಲಾರ್ಪಣೆ ಮಾಡಿದರು.ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಡಾ.ಸಿ.ಎನ್. ಅಶ್ವತ್ಥನಾರಾಯಣ್ ಶಾಸಕ ಕುಮಾರ್ ಬಂಗಾರಪ್ಪ, ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಹರತಾಳ ಹಾಲಪ್ಪ, ಎಂ.ಡಿ. ಲಕ್ಷ್ಮೀನಾರಾಯಣ್ ಇದ್ದರು.