ಕರ್ನಾಟಕದಲ್ಲಿ BMTC ಮತ್ತು KSRTC ಸೆರಿದಂತೆ ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ನಿಗಮಗಳ ಕಾರ್ಯಾಚರಣೆ ಅನ್ನು ಪ್ರೈವೇಟೈಜ಼್ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮುಂದಾಗಿದೆ.
ಎಲೆಕ್ಟ್ರಿಕ್ ಬಸ್‌ಗಳಿಗೆ ಬದಲಾಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿರುವ ಸರ್ಕಾರವು 2030ರ ವೇಳೆಗೆ ಇಡೀ ಫ್ಲೀಟ್ ಅನ್ನು ಎಲೆಕ್ಟ್ರಿಕ್ ಬಸ್‌ಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.
ಒಪ್ಪಂದ ಹೇಗಿದೆ?
ಒಟ್ಟಾರೆ ವೆಚ್ಚದ ಗುತ್ತಿಗೆ ವ್ಯವಸ್ಥೆ ಅಡಿಯಲ್ಲಿ 12 ವರ್ಷಗಳ ಅವಧಿಗೆ ಬಸ್‌ಗಳನ್ನು ಓಡಿಸಲಾಗುತ್ತದೆ. ಒಪ್ಪಂದದ ಮೇರೆಗೆ ಬಿಡ್‌ದಾರರೇ ಚಾಲಕರನ್ನು ನೇಮಿಸಿಕೊಳ್ಳಲಿದ್ದು, ಬಸ್‌ಗಳನ್ನು ನಿರ್ವಹಣೆ ಮಾಡುತ್ತಾರೆ ಎಂದು ತಿಳಿಸಿದರು. ಹೀಗೆ ಗುತ್ತಿಗೆ ಆಧಾರದಲ್ಲಿ ಬಸ್ ಖರೀದಿ ಮತ್ತು ಚಾಲಕ, ನಿರ್ವಾಹಕರ ಹೊಣೆಯನ್ನೂ ಆ ಕಂಪನಿಗಳಿಗೆ ವಹಿಸಿಕೊಡಲಾಗುತ್ತಿದೆ.
ಇದರಿಂದಾಗಿ ಸರ್ಕಾರಿ ಬಸ್ ಚಾಲಕರು ಮತ್ತು ನಿರ್ವಾಹಕರ ನೇಮಕಾತಿ ಹಾಗೂ ಅವರ ಉದ್ಯೋಗಕ್ಕೆ ಆಪತ್ತು ಬರಬಹುದು ಎಂದು ಹೇಳಬಹುದು.
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 90 ಎಲೆಕ್ಟ್ರಿಕ್ ಬಸ್ ಸಂಚಾರ ಮಾಡಲಿವೆ!
ಸ್ಮಾರ್ಟ್ ಸಿಟಿ ಯೋಜನೆಯಡಿ 90 ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಫಾಸ್ಟರ್ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ -2 (FAME-2) ಯೋಜನೆಯಡಿ, 300 ಬಸ್‌ಗಳನ್ನು ಗುತ್ತಿಗೆಯಲ್ಲಿ ತೆಗೆದುಕೊಳ್ಳಲಾಗುವುದು. ಅದರಲ್ಲಿ 75 ಬಸ್‌ಗಳು ಈಗಾಗಲೇ ಬೆಂಗಳೂರು ರಸ್ತೆಗಳಲ್ಲಿ ಸಂಚರಿಸುತ್ತಿವೆ ಎಂದು, ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳ ವಿವರ ಕೇಳಿದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್‌ಗೆ ಉತ್ತರಿಸಿದ ಶ್ರೀರಾಮುಲು ಹೀಗೆ ಮಾಹಿತಿ ನೀಡಿದ್ದಾರೆ.
921 ಎಲೆಕ್ಟ್ರಿಕ್ ಬಸ್‌ಗಳಿಗೆ ಆರ್ಡರ್ ಮಾಡಿದ ಸರ್ಕಾರ:
ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಅಡಿಯಲ್ಲಿ 921 ಎಲೆಕ್ಟ್ರಿಕ್ ಬಸ್‌ಗಳಿಗೆ ಆರ್ಡರ್ ಮಾಡಲಾಗಿದೆ. ಹೆಚ್ಚುತ್ತಿರುವ ಡೀಸೆಲ್ ವೆಚ್ಚದೊಂದಿಗೆ, ಎಲೆಕ್ಟ್ರಿಕ್ ಬಸ್‌ಗಳಿಗೆ ಬದಲಾಯಿಸುವುದರಿಂದ ನಮಗೆ ವೆಚ್ಚವನ್ನು ಉಳಿಸಲು ಸಹಾಯ ಮಾಡುತ್ತದೆ ಮತ್ತು ಇದು ಪರಿಸರ ಸ್ನೇಹಿಯಾಗಿದೆ,’ಎಂದು ಸಚಿವ ಶ್ರೀರಾಮುಲು ಹೇಳಿದರು.
ಡೀಸೆಲ್ ಬಸ್‌ಗೆ ಹೋಲಿಸಿದರೆ, ಎಲೆಕ್ಟ್ರಿಕ್ ಬಸ್ ಹೇಗೆ ಉತ್ತಮ?
ಕರ್ನಾಟಕದ ಮಟ್ಟಿಗೆ ಮಾತ್ರವಲ್ಲ. ದೇಶದಲ್ಲಿ ಡೀಸೆಲ್ ಬಸ್‌ಗಳಿಗೆ ಹೋಲಿಸಿದರೆ, ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣೆಯು ಬೆಸ್ಟ್ ಆಗಿರುತ್ತದೆ ಎಂದು ಸಚಿವ ಶ್ರೀರಾಮುಲು ತಮ್ಮ ಲಿಖಿತ ಉತ್ತರದಲ್ಲಿ ವಿವರಣೆ ಕೊಟ್ಟರು. ಏಕೆಂದರೆ ಡೀಸೆಲ್ ಬಸ್‌ಗಳ ನಿರ್ವಹಣಾ ವೆಚ್ಚ ಪ್ರತಿ ಕಿ.ಮೀಗೆ ಸುಮಾರು 68.53 ರೂಪಾಯಿ ಆಗಿರುತ್ತದೆ. ಆದರೆ ಅದೇ ಪ್ರತಿ ಕಿ.ಮೀಗೆ ಎಲೆಕ್ಟ್ರಿಕ್ ಬಸ್‌ಗಳ ಮೇಲೆ ಭರಿಸುವ ವೆಚ್ಚವು 54 ರಿಂದ 64 ರೂಪಾಯಿ ಆಗಿರುತ್ತದೆ ಎಂದು ತಿಳಿಸಿದರು.
ಸರ್ಕಾರಿ ಚಾಲಕರು, ಕಂಡೆಕ್ಟರ್ ಮೆಲೆ ಪರಿಣಾಮ ಬೀರಲಿದೆಯಾ?
ನಾವು ಹೊಸದಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುವ ಯಾವುದೇ ಯೋಜನೆಯನ್ನು ಹಾಕಿಕೊಂಡಿಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ”ನಮ್ಮ ಎಲ್ಲಾ ಎಸ್‌ಆರ್‌ಟಿಸಿಗಳು ಎಲೆಕ್ಟ್ರಿಕ್ ಬಸ್‌ಗಳಾಗಿ ಬದಲಾಗುತ್ತವೆ. ನಾವು ಹೊಸದಾಗಿ ಬಸ್‌ಗಳನ್ನು ಖರೀದಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ನಾವು ಆದ್ಯತೆ ನೀಡುತ್ತೇವೆ. ಒಂದು ಹಂತದಲ್ಲಿ ಏಜೆನ್ಸಿಗಳು ಒಪ್ಪಂದದ ಮೇರೆಗೆ ಬಸ್‌ಗಳನ್ನು ಓಡಿಸಲು ಪ್ರಾರಂಭಿಸಿದರೆ ಮುಂದಿನ ದಿನಗಳಲ್ಲಿ ಈ ಕ್ರಮವು ಸರ್ಕಾರಿ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳ ಮೇಲೆ ಪರಿಣಾಮ ಬೀರಬಹುದು” ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.