ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ಶುಕ್ರವಾರ ವಶಪಡಿಸಿಕೊಂಡ ನಗದು
ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಅಧ್ಯಕ್ಷರಾಗಿದ್ದ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಎರಡು ಮನೆಗಳಲ್ಲಿ ಶೋಧ ನಡೆಸಿರುವ ಲೋಕಾಯುಕ್ತ ಪೊಲೀಸರು, ₹6.26 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಗುರುವಾರ ಆರಂಭಿಕ ಹಂತದ ಕಾರ್ಯಾಚರಣೆಯಲ್ಲಿ ₹2.02 ಕೋಟಿ ನಗದು ವಶಕ್ಕೆ ಪಡೆಯಲಾಗಿತ್ತು. ಒಟ್ಟು ₹8.28 ಕೋಟಿ ನಗದನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದು, ಸಂಸ್ಥೆಯ ತನಿಖಾ ತಂಡವು ಪ್ರಕರಣವೊಂದರಲ್ಲಿ ವಶಕ್ಕೆ ಪಡೆದ ದಾಖಲೆಯ ಮೊತ್ತ ಇದಾಗಿದೆ.
ಕೆಎಸ್‌ಡಿಎಲ್‌ಗೆ ರಾಸಾಯನಿಕ ಪೂರೈಕೆ ಟೆಂಡರ್ ಪ್ರಕ್ರಿಯೆಯಲ್ಲಿ ಖರೀದಿ ಆದೇಶ ನೀಡಲು ಎರಡು ಕಂಪನಿಗಳಿಂದ ₹40 ಲಕ್ಷ ಲಂಚ ಪಡೆಯುತ್ತಿದ್ದ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದರು.
ಶಾಸಕರಿಂದ ಶೇ 30ರಷ್ಟು ಲಂಚಕ್ಕೆ ಬೇಡಿಕೆ :
ಸಾಬೂನು ತಯಾರಿಕೆಗೆ ಬಳಸುವ ಎಣ್ಣೆ ಪೂರೈಕೆಗೆ ಸಂಬಂಧಿಸಿದ ಎರಡು ಟೆಂಡರ್‌ಗಳಲ್ಲಿ ಚೆಮಿಕ್ಸಿಲ್ ಕಾರ್ಪೋರೇಷನ್ ಮತ್ತು ಡೆಲಿಷಿಯಾ ಕೆಮಿಕಲ್ಸ್ ಎಂಬ ಕಂಪನಿಗಳು ಬಿಡ್ ಸಲ್ಲಿಸಿದ್ದವು. ಅವುಗಳನ್ನು ಮಾನ್ಯಮಾಡಿ, ಕಾರ್ಯಾದೇಶ ಮತ್ತು ಖರೀದಿ ಆದೇಶ ನೀಡುವಂತೆ ಚೆಮಿಕ್ಸಿಲ್ ಕಾರ್ಪೋರೇಷನ್‌ನ ಶ್ರೇಯಸ್ ಕಶ್ಯಪ್ ಕೆಎಸ್‌ಡಿಎಲ್ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಭೇಟಿ ಮಾಡಿದ್ದರು. ಮೊದಲ ಭೇಟಿಯಲ್ಲೇ, ಟೆಂಡರ್ ಮೊತ್ತದ ಶೇಕಡ 30ರಷ್ಟನ್ನು ಲಂಚದ ರೂಪದಲ್ಲಿ ಕೊಡುವಂತೆ ಅವರು ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿದೆ.
ಗುತ್ತಿಗೆದಾರರು ವಿರೂಪಾಕ್ಷಪ್ಪ ಅವರ ಸೂಚನೆಯಂತೆ ಅವರ ಮಗ ಪ್ರಶಾಂತ್ ಮಾಡಾಳ್ ಅವರನ್ನು ಜನವರಿ 12ರಿಂದ ಹಲವು ಬಾರಿ ಭೇಟಿಮಾಡಿದ್ದರು. ಆರಂಭದಲ್ಲಿ ₹1.20 ಕೋಟಿ ಲಂಚಕ್ಕೆ ಒತ್ತಾಯಿಸಿದ್ದ ಪ್ರಶಾಂತ್, ನಂತರ ₹81 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಬೇಡಿಕೆಯಂತೆ ಲಂಚ ನೀಡಲು ಒಪ್ಪಿಕೊಂಡ ಬಳಿಕ ಜ. 28 ಹಾಗೂ 30ರಂದು ಎರಡೂ ಕಂಪನಿಗಳಿಗೆ ಖರೀದಿ ಆದೇಶ ಕೊಡಿಸಿದ್ದರು.
ಆ ನಂತರ ಶ್ರೇಯಸ್ ಅವರನ್ನು ಕರೆಸಿಕೊಂಡ ಆರೋಪಿ, ಲಂಚದ ಹಣ ತಲುಪಿಸುವಂತೆ ಒತ್ತಾಯಿಸಿದ್ದರು. ವಾಟ್ಸ್ ಆ್ಯಪ್ ಮೂಲಕ ಹಲವು ಬಾರಿ ಕರೆಮಾಡಿ ಹಣ ತಲುಪಿಸುವಂತೆ ಒತ್ತಡ ಹೇರಿದ್ದರು. ಬುಧವಾರ (ಮಾರ್ಚ್ 1) ಮಧ್ಯಾಹ್ನ ಕರೆಮಾಡಿ, ಗುರುವಾರ ಸಂಜೆ 5.30ಕ್ಕೆ ಕ್ರೆಸೆಂಟ್ ರಸ್ತೆಯಲ್ಲಿರುವ ಖಾಸಗಿ ಕಚೇರಿಯಲ್ಲಿ ಭೇಟಿಮಾಡಿ ಹಣ ತಲುಪಿಸುವಂತೆ ಸೂಚಿಸಿದ್ದರು. ಬಳಿಕ ಶ್ರೇಯಸ್ ಲೋಕಾಯುಕ್ತ ಪೊಲೀಸರನ್ನು ಭೇಟಿಮಾಡಿ ದೂರು ಸಲ್ಲಿಸಿದ್ದರು ಎಂಬುದನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಅಧ್ಯಕ್ಷ ಸ್ಥಾನ ತ್ಯಜಿಸಿದ ವಿರೂಪಾಕ್ಷಪ್ಪ
ಲಂಚ ಪ್ರಕರಣದಲ್ಲಿ ಮಗ ಬಂಧಿತನಾಗಿರುವ ಕಾರಣದಿಂದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಚನ್ನಗಿರಿಯಲ್ಲಿದ್ದ ಅವರು ಗುರುವಾರ ರಾತ್ರಿಯೇ ಬೆಂಗಳೂರಿಗೆ ದೌಡಾಯಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಪ್ತರ ಮೂಲಕ ಶುಕ್ರವಾರ ಬೆಳಿಗ್ಗೆ ರಾಜೀನಾಮೆ ಪತ್ರ ತಲುಪಿಸಿದ್ದಾರೆ.
‘ಗುರುವಾರ ನಡೆದ ಲೋಕಾಯುಕ್ತ ದಾಳಿಗೂ ನನಗೂ ಸಂಬಂಧವಿಲ್ಲ. ಇದು ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ನಡೆದಿರುವ ಷಡ್ಯಂತ್ರ. ಆದರೂ ನನ್ನ ಮೇಲೆ ಆಪಾದನೆ ಬಂದಿರುವುದರಿಂದ ನೈತಿಕ ಹೊಣೆ ಹೊತ್ತು ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಧೈರ್ಯವಾಗಿ ದೂರು ಕೊಡಿ: ಬಿ.ಎಸ್. ಪಾಟೀಲ
‘ಈ ಪ್ರಕರಣದಲ್ಲಿ ದೂರುದಾರರ ಧೈರ್ಯವನ್ನು ಮೆಚ್ಚುತ್ತೇವೆ. ಲಂಚಕ್ಕೆ ಬೇಡಿಕೆ ಇಡುವವರು ಎಷ್ಟೇ ದೊಡ್ಡವರಾಗಿದ್ದರೂ ಕ್ರಮ ನಿಶ್ಚಿತ. ಸಾರ್ವಜನಿಕರು ಲಂಚದ ಬೇಡಿಕೆಯನ್ನು ಒಪ್ಪಿಕೊಳ್ಳದೆ ಧೈರ್ಯದಿಂದ ದೂರು ನೀಡಬೇಕು’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕರ ಮಗನನ್ನು ಬಂಧಿಸಿದ್ದೇವೆ. ಶಾಸಕರ ಮನೆಯಲ್ಲೂ ಶೋಧ ನಡೆಸಲಾಗಿದೆ. ಸರ್ಕಾರದ ಕೆಲಸ ಮಾಡುವುದಕ್ಕೆ ಲಂಚ ಕೇಳುವವರಿಗೆ ಕಠಿಣ ಕ್ರಮ ಆಗಲೇಬೇಕು’ ಎಂದರು.