ಮರು ಮದುವೆಗೆ ಅಡ್ಡಿ ಎಂದು ಮಗುವನ್ನೇ ಕೊಂದ ಪಾಪಿ ತಂದೆ!

ರಾಯಚೂರು: ಮರು ಮದುವೆಗೆ ತನ್ನ ಮಗು ಅಡ್ಡಿಯಾಗುತ್ತದೆ ಎಂದು ತಂದೆಯೋರ್ವ ತನ್ನ 14 ತಿಂಗಳ ಮಗುವನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಲಿಂಗಸುಗೂರು ತಾಲೂಕಿನ ಕನಸಾವಿ ಗ್ರಾಮದ ನಿವಾಸಿ ಮಹಾಂತೇಶ್(32) ತನ್ನ ಮಗುವನ್ನೇ ಹತ್ಯೆಗೈದ ತಂದೆಯಾಗಿದ್ದು, ಅಭಿನವ(14ತಿಂಗಳು) ಮೃತ ಮಗುವಾಗಿದೆ.

ಆರೋಪಿಯು ಎರಡನೇ ಮದುವೆಯಾಗಲು ಯತ್ನಿಸುತ್ತಿದ್ದು, ಮೊದಲ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿ ಅವಮಾನಿಸುತ್ತಿದ್ದ. ಎರಡನೇ ಮದುವೆಯಾಗಲು ಮುಂದಾಗಿದ್ದ ಆರೋಪಿ, ತನ್ನ ಮರು ಮದುವೆಗೆ ಮಗು ಅಡ್ಡಿಯಾಗುತ್ತದೆ ಎಂದು ಮಗುವನ್ನು ಹತ್ಯೆ ಗೈದಿದ್ದಾನೆ ಎನ್ನಲಾಗಿದೆ.

ಮಗುವನ್ನು ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಗ್ರಾಮದಲ್ಲಿ ಬಚ್ಚಿಟ್ಟಿದ್ದ. ಈ ನಡುವೆ ಮಗು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಮಹಾಂತೇಶ್ ಮೇಲೆ ಅನುಮಾನ ಬಂದಿದೆ. ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ಆರೋಪಿ ಮೃತದೇಹವನ್ನು ಸುಟ್ಟಿರುವುದಾಗಿ ಹೇಳಿದ್ದ. ಮೂರು ದಿನಗಳ ಬಳಿಕ ಶವ ಬಚ್ಚಿಟ್ಟಿರುವ ಸ್ಥಳವನ್ನು ತೋರಿಸಿದ್ದಾನೆ.

ಇದೀಗ ಮೃತದೇಹವನ್ನು ಹೊರತೆಗೆದಿರುವ ಪೊಲೀಸರು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಮುದಗಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share
WhatsApp
Follow by Email