ಯೋಗೇಶ್ವರ್ ನಿಮ್ಮ ನಾಲಗೆ ಬಿಗಿ ಇರಲಿ: ಸಂಸದ ಸುರೇಶ್‌

ಚನ್ನಪಟ್ಟಣ : 5 ವರ್ಷ ಬಿಜೆಪಿ ಸರ್ಕಾರ ಇದ್ದಾಗ ಮೆಡಿಕಲ್ ಕಾಲೇಜು ಮಾಡಲಿಲ್ಲ. ಅರಣ್ಯ ಮಂತ್ರಿ ಆಗಿದ್ರು, ಪ್ರವಾಸೋದ್ಯಮ ಮಂತ್ರಿ ಆಗಿದ್ರು. ಆಗ ಯಾಕೆ ಮೆಡಿಕಲ್ ಕಾಲೇಜು ಮಾಡಲಿಲ್ಲ. ಈಗ ಬಣ್ಣ ಹಾಕೊಂಡು ನಾಟಕ ಮಾಡಲು ಬಂದಿದ್ದಾನೆ. ಯೋಗೇಶ್ವರ್ ನಾಲಗೆ ಬಿಗಿ ಹಿಡಿದುಕೊಳ್ಳಲಿ ಎಂದು ಸಂಸದ ಸುರೇಶ್‌ ತಾಕೀತು ಮಾಡಿದರು.

ಬ್ಲಾಕ್ ಮೇಲ್: ಯಡಿಯೂರಪ್ಪ ಅವರನ್ನು ಇವನು ಬ್ಲಾಕ್ ಮೇಲ್ ಮಾಡಿದ್ದ. ಅದ್ಯಾವುದೋ ಸಿಡಿ ಇಟ್ಟುಕೊಂಡು ಸರ್ಕಾರ ಕಿತ್ತಿದ್ದಾಯ್ತು. ಈಗ ಕಾಂಗ್ರೆಸ್ ಸರ್ಕಾರ ತೆಗೆತೀನಿ ಅಂತ ಹೇಳುತ್ತಿದ್ದಾನೆ. ಬರೀ ಸರ್ಕಾರ ಬೀಳಿಸೋ ಕೆಲಸ ಮಾತ್ರಾನ ಇವನು ಮಾಡೋದು. ಜನರಿಗೋಸ್ಕರ ಏನು ಮಾಡಿದ್ದಾನೆ ಎಂದು ಪ್ರಶ್ನಿಸಿದರು. ಸಿಡಿ ಇಡ್ಕೊಂಡು ಎಲ್ಲಾ ಮಠಗಳಿಗೂ ಓಡಾಡ್ತಿದ್ದಾನೆ ಅಂತ ಮಾಧ್ಯಮಗಳಲ್ಲಿ ಬಂದಿತ್ತು. ಬಿಎಸ್‌ವೈ ಸರ್ಕಾರದಲ್ಲಿ ಸಿಡಿ ಇದೆ ಅಂತ ಓಡಾಡುತ್ತಿದ್ದ. ಸಮ್ಮಿಶ್ರ ಸರ್ಕಾರ ಬೀಳಿಸಲು ಕಾರಣ ಯಾರು.? ಸರ್ಕಾರ ತೆಗೆದೆ ಅಂತ, ಬಾಂಬೆ ಬಾಯ್ಸ್ ಸೃಷ್ಟಿ ಮಾಡ್ದೆ ಅಂತ ಅವನೇ ಹೇಳ್ಕೊಂಡವನೆ.

ನನಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಅಂತ ಹೇಳ್ಕೊಂಡಿದ್ದವರು ಯಾರು. ಮೊದಲು ಅವನ ಹಿನ್ನೆಲೆ ಬಗ್ಗೆ ಚರ್ಚೆ ಮಾಡಿಕೊಳ್ಳಲಿ. ನಾವು ಕೆಲಸ ಮಾಡೋದಕ್ಕೆ ತಾಳ್ಮೆಯಿಂದ ಅವಕಾಶ ಕೊಡಿ. ವಿರೋಧ ಪಕ್ಷದ ಸಲಹೆಗಳನ್ನ ಸಕಾರಾತ್ಮಕವಾಗಿ ಸ್ವೀಕಾರ ಮಾಡುತ್ತಿದ್ದೇವೆ. ಆದರೆ ಬಾಯಿಗೆ ಬಂದಹಾಗೆ ಮಾತನಾಡಿದರೆ ನಾವು ಕೇಳಲ್ಲ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಏಕವಚನದಲ್ಲೇ ವಾಗ್ದಾಳಿ ಮಾಡಿದರು.

ಮೆಡಿಕಲ್ ಕಾಲೇಜು ಎಲ್ಲೂ ಹೋಗಲ್ಲ: ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಎಲ್ಲೂ ಹೋಗಲ್ಲ. ಕನಕಪುರದ ಮೆಡಿಕಲ್ ಕಾಲೇಜು ಕನಕಪುರದಲ್ಲೇ ಆಗುತ್ತೆ. ರಾಮನಗರದ ಮೆಡಿಕಲ್ ಕಾಲೇಜು ರಾಮನಗರಲ್ಲೇ ಆಗುತ್ತೆ ಎಂದು ಸಂಸದ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದರು. ತಾಲೂಕಿನ ವಂದಾರಗುಪ್ಪೆ ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯ ಉದ್ದೇಶದಿಂದ ಬಂದ್ ಮಾಡುವವರಿಗೆ ನಮ್ಮದೇನು ತಕರಾರಿಲ್ಲ. ಮೆಡಿಕಲ್ ಕಾಲೇಜು ವಿಚಾರವಾಗಿ ಯಾರು ಗೊಂದಲ ಹುಟ್ಟಾಕ್ತಿದ್ದಾರೋ ಗೊತ್ತಿಲ್ಲ. 

ಜಿಲ್ಲೆಯ ಜನರ ಹಿತ ಕಾಪಾಡುವುದು ನಮ್ಮ ಕರ್ತವ್ಯ. ಐದು ವರ್ಷದಲ್ಲಿ ನಮ್ಮ ಕೆಲಸ ಪೂರ್ಣ ಮಾಡುತ್ತೇವೆ. ರಾಜಕೀಯಕ್ಕಾಗಿ ಗೊಂದಲ ಮಾಡುವವರು ಮಾಡಲಿ. 20 ವರ್ಷದಿಂದ ಮಲಗಿದ್ದವರು ಈಗ ಎದ್ದಿದ್ದಾರೆ. ಅವರ ಪಾಡಿಗೆ ಅವರು ಆರೋಪ ಮಾಡಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಪರೋಕ್ಷ ಟಾಂಗ್ ನೀಡಿದರು. ಬಿ.ಎಲ್.ಸಂತೋಷ್ ಸಂಪರ್ಕದಲ್ಲಿ ಕಾಂಗ್ರೆಸ್‌ನ 45 ಶಾಸಕರಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದನ್ನ ಉಲ್ಟಾ ಮಾಡಿಕೊಳ್ಳಿ. ಅವರೇ 45 ಜನ ನಮ್ಮತ್ರ ಬರ್ತಾರೆ ಅನ್ಕೊಳಿ ಎನ್ನುವ ಮೂಲಕ ಪರೋಕ್ಷವಾಗಿ ಆಪರೇಷನ್ ಹಸ್ತದ ಬಗ್ಗೆ ಸುಳಿವು ನೀಡಿದರು.

Share
WhatsApp
Follow by Email