ಸಂಘರ್ಷವಾದರೂ ಮಹಿಷ ದಸರಾ ಆಚರಿಸಲು ಬಿಡುವುದಿಲ್ಲ: ಸಂಸದ ಪ್ರತಾಪ್ ಸಿಂಹ

ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಿಸಲು ಬಿಡುವುದಿಲ್ಲ. ಸಂಘರ್ಷವಾದರೂ ತಡೆಯುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಿಸಲು ಬಿಡುವುದಿಲ್ಲ. ಸಂಘರ್ಷವಾದರೂ ತಡೆಯುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಷ ದಸರಾ ಆಚರಣೆ ಅಸಂಬದ್ಧ ಮತ್ತು ಅನಾಚಾರ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆಚರಿಸಲು ಅವಕಾಶ ನೀಡಿರಲಿಲ್ಲ. ಈಗಲೂ ಆಚರಿಸಲು ಬಿಡುವುದಿಲ್ಲ ಎಂದು ಹೇಳಿದರು. ಸಾರ್ವಜನಿಕರು ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲು ಚಾಮುಂಡಿಬೆಟ್ಟಕ್ಕೆ ಬರುತ್ತಾರೆ. ಆಸ್ತಿಕರಿಗೆ ಚಾಮುಂಡೇಶ್ವರಿ ಇದ್ದಾಳೆ. ನಾಸಿಕ್ತರಿಗೆ ಬೇರೆಯವರು ಇರಬಹುದು. 

ಮಹಿಷ ದಸರಾ ಹೆಸರಿನಲ್ಲಿ ಚಾಮುಂಡಿಬೆಟ್ಟದಲ್ಲಿ ಅನಾಚಾರ ಮಾಡಲು ಬಿಡುವುದಿಲ್ಲ. ಮಹಿಷ ದಸರಾ ನಿಲ್ಲಿಸುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್‌‍ ಆಯುಕ್ತರಿಗೆ ನೇರವಾಗಿ ಹೇಳುತ್ತಿದ್ದೇನೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ಸಂಘರ್ಷವಾದರೂ ಪರವಾಗಿಲ್ಲ ತಡೆಯುತ್ತೇವೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಷ ದಸರಾ ಆಚರಣೆಗೆ ಅವಕಾಶ ನೀಡದಂತೆ ಮನವಿ ಮಾಡುತ್ತೇನೆ. ಮಹಿಷ ದಸರಾ ಆಚರಿಸುವವರಿಗೆ ಒಂದು ಕೇಳುತ್ತೇನೆ. ಅವರ ಮನೆಯಲ್ಲಿ ಯಾವುದಾದರೂ ಫೋಟೋ ಇಟ್ಟು ಆಚರಿಸಲಿ. 

ಮಹಿಷನಂತಹ ಮಗು ಹುಟ್ಟಲೆಂದು ಕೇಳಿಕೊಳ್ಳಲಿ. ಹೊರಗೆ ಆಚರಿಸಿ ಹಿಂದೂ ಭಕ್ತರ ಭಾವನೆಗೆ ಧಕ್ಕೆ ತರುವುದು ಬೇಡ ಎಂದು ಅವರು ಹೇಳಿದರು. ಸಿದ್ದರಾಮಯ್ಯ ಸರ್ಕಾರವಿದ್ದಾಗ ಮಹಿಷ ದಸರಾಗೆ ಅನುಮತಿ ನೀಡಿದ್ದರು. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿ ಮಹಿಷ ದಸರಾಗೆ ಮಟ್ಟ ಹಾಕಿದ್ವಿ. ಅದೇನೋ ಗೊತ್ತಿಲ್ಲ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗ ಧರ್ಮ ವಿರೋಧಿಗಳಿಗೆ ಶಕ್ತಿ ಬರುತ್ತೆ. ಅದನ್ನೇ ಇಂದು ಮಹಿಷ ದಸರಾ ರೂಪದಲ್ಲಿ ನೋಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ರಾತ್ರಿಯಿಡಿ ಮಲಗಿ ಮಹಿಷ ದಸರಾ ತಡೆಯುತ್ತೇವೆ: ಚಾಮುಂಡಿಬೆಟ್ಟದಲ್ಲಿ ರಾತ್ರಿಯಿಡಿ ಮಲಗಿ ಮಹಿಷ ದಸರಾ ಆಚರಣೆ ತಡೆಯುತ್ತೇವೆ. ಮಹಿಷ ದಸರಾ ಮಾಡಲು ಬಿಡುವುದಿಲ್ಲ, ತಡೆದೆ ತಡೆಯುತ್ತೇವೆ ಎಂದು ಮೈಸೂರಿನ ಕೆ.ಆರ್. ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಎಚ್ಚರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂಸ್ಕೃತಿಕ ನಗರಿಯಲ್ಲಿ ಮಹಿಷ ದಸರಾ ಆಚರಣೆಗೆ ಅವಕಾಶ ನೀಡುವುದಿಲ್ಲ. ಆಚರಣೆ ತಡೆಯಲು ಈಗಾಗಲೇ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ. ದಸರಾ ಸಂದರ್ಭದಲ್ಲಿ ಪೂಜೆ, ಪ್ರಸಾದ ಚಾಮುಂಡಿಗೆ ಮಾತ್ರ ಸಲ್ಲಬೇಕು. 

ಅದೇಗೆ ಮಹಿಷ ದಸರಾ ಮಾಡುತ್ತಾರೋ ನೋಡುತ್ತೇವೆ ಎಂದು ಸವಾಲು ಹಾಕಿದರು. ಬಹುಸಂಖ್ಯಾತರ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಹುಟ್ಟುಹಬ್ಬವನ್ನ ಸ್ಮಶಾನದಲ್ಲಿ ಮಾಡಿಕೊಳ್ಳಲಿ ಅದು ಅವರವರ ಇಷ್ಟ. ಆದರೆ, ಈ ಕೆಟ್ಟ ಆಚರಣೆ ಮೂಲಕ ಬಹುಸಂಖ್ಯಾತರ ಭಾವನೆಗೆ ವಿರುದ್ಧ ನಿಂತಿದ್ದಾರೆ. ಬೇಕೆಂದರೆ ಅವರವರ ಮನೆಯಲ್ಲಿ ಮಹಿಷ ದಸರಾ ಆಚರಿಸಿಕೊಳ್ಳಲಿ. ಮಹಿಷ ದಸರಾ ಆಚರಣೆಯ ಹಿಂದಿನ ದಿನವೇ ನಾವೆಲ್ಲ ಚಾಮುಂಡಿಬೆಟ್ಟಕ್ಕೆ ತೆರಳಿ ಮಲಗುತ್ತೇವೆ. ಆ ಮೂಲಕ ಮಹಿಷ ದಸರಾ ಆಚರಣೆಗೆ ನಾವು ಬಿಡುವುದಿಲ್ಲ ಎಂದು ಅವರು ತಿಳಿಸಿದರು.

Share
WhatsApp
Follow by Email