ಗ್ರಾಮ ಪಂಚಾಯತ್ ಸಿಬ್ಬಂದಿಗೆ ಸೇವಾ ಭದ್ರತೆ: ಕನಿಷ್ಠ ವಿದ್ಯಾರ್ಹತೆ ತೊಡಕು ನಿವಾರಣೆ; 11,543 ನೌಕರರಿಗೆ ಮಾನ್ಯತೆ

ವೀರೇಶ್ ಎ.ನಾಡಗೌಡರ್, ಬೆಂಗಳೂರು.

ಗ್ರಾಮ ಪಂಚಾಯಿತಿಗಳಲ್ಲಿ ಹತ್ತಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಬಹುತೇಕ ಸೌಲಭ್ಯಗಳಿಂದ ವಂಚಿತರಾದ ಸಿಬ್ಬಂದಿಗೆ ಸರ್ಕಾರ ಬಹು ದೊಡ್ಡ ಕೊಡುಗೆ ಕೊಟ್ಟಿದೆ. ಕನಿಷ್ಠ ವಿದ್ಯಾರ್ಹತೆ ಇಲ್ಲದ ಕಾರಣಕ್ಕೆ ಕೊಟ್ಟಷ್ಟು ಸಂಬಳಕ್ಕೆ ದುಡಿಯುತ್ತಿದ್ದ ಸಹಸ್ರಾರು ಸಿಬ್ಬಂದಿಗೆ ಜೀವನ ಭದ್ರತೆ ಕಲ್ಪಿಸುವ ನಿರ್ಣಯವನ್ನು ಸರ್ಕಾರ ತೆಗೆದುಕೊಂಡಿದೆ.

2017ಕ್ಕೆ ಮುಂಚಿತವಾಗಿ ನೇಮಕಗೊಂಡು ಗ್ರಾಮ ಪಂಚಾಯಿತಿಗಳಲ್ಲಿ ಜವಾನ, ನೀರಗಂಟಿ, ಸ್ವಚ್ಛತಾಗಾರರಾಗಿ ಕೆಲಸ ಮಾಡುತ್ತಿದ್ದವರಿಗೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ನೀಡಲಾಗುತ್ತದೆ. ಇದರಿಂದಾಗಿ 11,543 ಸಿಬ್ಬಂದಿಗೆ ಸೇವಾ ಭದ್ರತೆಯ ಭಾವನೆ ಬಲವರ್ಧನೆಗೊಳ್ಳಲಿದೆ.

ಗ್ರಾಮೀಣ ಪ್ರದೇಶದಲ್ಲಿ ಕಸ-ಕಡ್ಡಿ ಎತ್ತಿ ನೈರ್ಮಲ್ಯ ಕಾಪಾಡುವುದು, ಕಚೇರಿಯಲ್ಲಿ ಜವಾನರಾಗಿ ದುಡಿಯುವುದು, ಕಾಲಕಾಲಕ್ಕೆ ನೀರು ಬಿಟ್ಟು ಜನರ ಬಾಯಾರಿಕೆ ತಣಿಸುವ ವೃತ್ತಿ ಕೈಗೊಂಡಿದ್ದ ಈ ಸಿಬ್ಬಂದಿಗೆ ಇನ್ನು ಮುಂದೆ ಸರ್ಕಾರದಿಂದಲೇ ನೇರವಾಗಿ ವೇತನ ಮತ್ತಿತರ ಸೌಲಭ್ಯಗಳು ದೊರೆಯಲಿವೆ. ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ 2017ಕ್ಕೂ ಮೊದಲು ಕರವಸೂಲಿ ಗಾರರು, ಕ್ಲರ್ಕ್ ಕಂ ಡೇಟಾ ಎಂಟ್ರಿ ಅಪರೇಟರ್, ವಾಟರ್ ಅಪರೇಟರ್, ಸ್ವಚ್ಛತಾಗಾರರು, ಅಟೆಂಡರ್ ಸೇರಿದಂತೆ ಒಟ್ಟು 18,672 ಸಿಬ್ಬಂದಿ ನೇಮಕ ಗೊಂಡು ನಾನಾ ಕಾರಣಗಳಿಗಾಗಿ ಅನುಮೋದನೆ ಸಿಕ್ಕಿರಲಿಲ್ಲ. ಈ ಪೈಕಿ ಒಟ್ಟು 11,543 ಸಿಬ್ಬಂದಿ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲ ಎಂಬ ಕಾರಣ ನೀಡಲಾಗಿತ್ತು.

ಹೀಗಾಗಿ ಇವರಿಗೆ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ದೊರೆಯುತ್ತಿರಲಿಲ್ಲ. ಕನಿಷ್ಠ ವೇತನ ಜಾರಿಗೊಳಿಸುವವರೆಗೆ ಬಿಡಿಗಾಸಿನ ಸಂಬಳಕ್ಕೆ ಈ ಸಿಬ್ಬಂದಿ ದುಡಿಯುತ್ತಿದ್ದರು. ಗ್ರಾಮ ಪಂಚಾಯಿತಿಗಳು ಸ್ವಂತ ಸಂಪನ್ಮೂಲಗಳಿಂದ ಈ ಸಿಬ್ಬಂದಿಗೆ ವೇತನ ಪಾವತಿಸಬೇಕಾಗಿದ್ದರಿಂದ ಚುನಾಯಿತ ಪ್ರತಿನಿಧಿಗಳ ದಾಕ್ಷಿಣ್ಯಕ್ಕೆ ಈ ಸಿಬ್ಬಂದಿ ಸಿಲುಕಬೇಕಿತ್ತು. ಅಲ್ಲದೆ, ಗ್ರಾಪಂಗಳಲ್ಲಿ ಸಂಪನ್ಮೂಲ ಸಂಗ್ರಹವಾಗದ ಕಾರಣ ವೇತನಕ್ಕಾಗಿ ಪಟ್ಟು ಹಿಡಿಯುವ ಸ್ಥಿತಿಯೂ ಇವರಿಗಿರಲಿಲ್ಲ. ಸ್ಥಳೀಯರ ಮುಲಾಜಿಗೆ ಬಿದ್ದು ಅನಿವಾರ್ಯವಾಗಿ ಕೆಲಸ ಮಾಡಬೇಕಿತ್ತು.

ರಾಜಕೀಯ ಹಸ್ತಕ್ಷೇಪದಿಂದ ಮುಕ್ತಿ: ಸಂಬಳ ಪಾವತಿ, ನಿವೃತ್ತಿ ಸೌಲಭ್ಯ, ಅನುಕಂಪದ ಹುದ್ದೆ ಮತ್ತಿತರ ವಿಚಾರಗಳಲ್ಲಿ ಹೊಸ ಆದೇಶದಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ತುಸು ನೆಮ್ಮದಿ ಸಿಗಲಿದೆ. ಸ್ಥಳೀಯ ರಾಜಕೀಯ ಹಸ್ತಕ್ಷೇಪಕ್ಕೆ ಹೆಚ್ಚು ಅವಕಾಶ ಇಲ್ಲದೇ ಇರುವುದರಿಂದ ಕರ್ತವ್ಯ ನಿರ್ವಹಣೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಒತ್ತು ಸಿಗಲಿದೆ.

ಉಳಿದವರಿಗೂ ಅನ್ವಯಿಸಲಿ: 2017ರಿಂದ ಈಚೆಗೆ ನೇಮಕಗೊಂಡಿರುವ ಅಂದಾಜು 3 ಸಾವಿರ ಸಿಬ್ಬಂದಿ ಇನ್ನೂ ಜಿಲ್ಲಾ ಪಂಚಾಯಿತಿಗಳಿಂದ ಅನುಮೋದನೆ ಪಡೆಯದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿಯನ್ನೂ ಹೊಸ ಆದೇಶದ ವ್ಯಾಪ್ತಿಗೆ ಸೇರಿಸಬೇಕು ಎಂಬ ಆಗ್ರಹ ಕೂಡ ಸರ್ಕಾರದ ಮುಂದಿದೆ.

10-20 ತಿಂಗಳು ವೇತನ ಬಾಕಿ!: ಗ್ರಾಮ ಪಂಚಾಯಿತಿಗಳು ಸ್ವಂತ ಸಂಪನ್ಮೂಲದಿಂದ ವರ್ಗ 1ರ ಅಡಿ ತನ್ನ ಸಿಬ್ಬಂದಿಗೆ ವೇತನ ಪಾವತಿ ಮಾಡಬೇಕಿತ್ತು. ಅನೇಕ ಕಡೆ ಸಂಪನ್ಮೂಲ ಕೊರತೆ ಮತ್ತಿತರ ಕಾರಣಗಳಿಂದ 10-20 ತಿಂಗಳಾದರೂ ಸಂಬಳ ಪಾವತಿಯಾಗುತ್ತಿರಲಿಲ್ಲ. ಇದು ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮೇಲೆ ದೊಡ್ಡ ಪರಿಣಾಮ ಬೀರಿತ್ತು. ಈ ಸಮಸ್ಯೆ ವಿಧಾನ ಮಂಡಲದ ಅಧಿವೇಶನದಲ್ಲೂ ಅನೇಕ ಬಾರಿ ಚರ್ಚೆಯಾಗಿತ್ತು. ಈ ಸಮಸ್ಯೆಗೆ ಸರ್ಕಾರ ಒಂದು ಬಾರಿ ಶಾಶ್ವತ ಪರಿಹಾರ ನೀಡಿದೆ.

ಶೋಷಣೆಗೆ ಬ್ರೇಕ್: ವಿದ್ಯಾರ್ಹತೆ ಇಲ್ಲದ ಸಿಬ್ಬಂದಿಯನ್ನು ಕನಿಷ್ಠವಾಗಿ ನೋಡಲಾಗುತ್ತಿತ್ತು. ಭಯದಲ್ಲೇ ಕೆಲಸ ಮಾಡುವ ವಾತಾವರಣವನ್ನು ಸೃಷ್ಟಿಸಲಾಗಿತ್ತು. ಚುನಾಯಿತ ಪ್ರತಿನಿಧಿಗಳು ಹೇಳಿದ ಕೆಲಸ ಮಾಡಿಕೊಂಡು ತೆಪ್ಪಗಿರಬೇಕಿತ್ತು. ಈಗ ಸರ್ಕಾರ ಈ ಸಿಬ್ಬಂದಿಯ ಆಸರೆಗೆ ಬಂದಿದೆ. 2017ರಿಂದಲೇ ಕನಿಷ್ಠ ವೇತನ ನಿಗದಿಪಡಿಸಿದರೂ ಅನೇಕ ಕಡೆಗಳಲ್ಲಿ ಈ ಆದೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಸಿಬ್ಬಂದಿಯನ್ನು ಶೋಷಣೆ ಮಾಡಲಾಗುತ್ತಿತ್ತು. ಮೂರು ಸಾವಿರ, ಐದು ಸಾವಿರ ರೂ. ಸಂಬಳ ನೀಡುತ್ತಿದ್ದುದು ಉಂಟು. ಈಗ ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ.

ಏನು ಅನುಕೂಲ?

  • ಸೇವಾ ಭದ್ರತೆಯ ಭಾವನೆ ಬಲವರ್ಧನೆ
  • ಅನುಕಂಪದ ಮೇಲೆ ನೇಮಕಕ್ಕೆ ಅವಕಾಶ.
  • ನಿವೃತ್ತಿ ಉಪದಾನ ಸೌಲಭ್ಯ ಪಡೆಯಬಹುದು.
  • ನಿಗದಿತ ಸಮಯಕ್ಕೆ ನಿಶ್ಚಿತ ವೇತನ ಕೈಸೇರಲಿದೆ.
  • ವಿದ್ಯಾರ್ಹತೆ ಗಳಿಸಿದರೆ ಬಡ್ತಿ ಸೌಲಭ್ಯ.
  • ಪಂಚತಂತ್ರ-2 ಅಧೀನದಲ್ಲಿ ಬರುವುದರಿಂದ ನೇರವಾಗಿ ಸರ್ಕಾರದಿಂದ ಕನಿಷ್ಠ ವೇತನ ಪಾವತಿ.

Share
WhatsApp
Follow by Email