ಮುತ್ತಿನ ಮೂಡಲಗಿ ಮುಕುಟ ಸದಾ ಭಕ್ತರ ಆಶಾ ಕಿರಣ ಮೂಡಲಗಿ ಶ್ರೀ ಶ್ರೀ ಶಿವಬೋಧರಂಗ ಸಿದ್ಧ ಸಂಸ್ಥಾನ ಪೀಠದ ಪೀಠಾಧಿಕಾರಿಗಳಾದ ಪರಮಪೂಜ್ಯ ಶ್ರೀ ಶ್ರಿ ಪರಮಪೂಜ್ಯ ಶ್ರೀಪಾದಬೋಧ ಸ್ವಾಮೀಜಿ ಇನ್ನಿಲ್ಲಾ.

ವರದಿ:ಕೆ.ವಾಯ್ ಮೀಶಿ
ಮೂಡಲಗಿ: ಸ್ಥಳೀಯ ಶ್ರೀ ಶಿವಬೋಧರಂಗ ಸಿದ್ಧ‌ ಸಂಸ್ಥಾನ ಮಠದ 12ನೇ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿ (66) ಅವರು ರವಿವಾರ ರಾತ್ರಿ ನಿಧನಹೊಂದಿದ್ದಾರೆ.
ಮೂಡಲಗಿ ಹಾಗೂ ಸುತ್ತಲಿನ ಭಾಗಗಳಲ್ಲಿ ಹೆಚ್ಚು ಪ್ರಸಿದ್ಧರಾಗಿದ್ದ ಶ್ರೀಗಳ ಅಗಲಿಕೆಯಿಂದ ತಾಲೂಕಿನಲ್ಲಿ ನೀರವ ಮೌನ ಆವರಿಸಿದೆ. ಈ ಭಾಗದಲ್ಲಿ ನಡೆದಾಡುವ ದೇವರು, ಕಾಮಧೇನು, ಕಲ್ಪವೃಕ್ಷ ರಾಗಿದ್ದ ಸ್ವಾಮೀಜಿಯವರ ಅಂತ್ಯಕ್ರಿಯೆ ಲಾಕ್ ಡೌನ್ ಹಿನ್ನೆಲೆ ಕೆಲವೇ ಜನರ ಸಮ್ಮುಖದಲ್ಲಿ ರವಿವಾರ ರಾತ್ರಿಯೇ ನೆರವೇರಿಸಲಾಯಿತು.
ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ನರಸಿಂಹವಾಡಿಯಲ್ಲಿ 30 ಮಾರ್ಚ್‌ 1954ರಂದು ಜನಿಸಿದ ಶ್ರೀಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನರಸಿಂಹವಾಡಿಯಲ್ಲಿ‌ ಪೂರೈಸಿದರು. ಸಾಂಗಲಿಯ ಕಸ್ತೂರ ಬಾ ಕಾಲೇಜಿನಲ್ಲಿ ಬಿಎಸ್.ಸಿ ಪದವಿ ಪಡೆದುಕೊಂಡಿದ್ದರು.
1971ರಲ್ಲಿ ಮೂಡಲಗಿ ಸಿದ್ಧಸಂಸ್ಥಾನ ಮಠದ 12 ನೇ ಪೀಠಾಧಿಪತಿಗಳಾಗಿ ಪೀಠ ಅಲಂಕರಿಸಿದ್ದರು.ಮೂಡಲಗಿಯಲ್ಲಿ ಶ್ರೀ ಕಲ್ಮೇಶ್ವರ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಮಕ್ಕಳಿಗೆ ಶಿಕ್ಷಣಕ್ಕೆ ಆಸರೆ‌ಯಾಗಿದ್ದರು. ಅನೇಕ ಸಂಘ ಸಂಸ್ಥೆಗಳು, ಧಾರ್ಮಿಕ ಕಾರ್ಯಕ್ರಮಗಳು, ಶೈಕ್ಷಣಿಕ ಸಮಾರಂಭಗಳಲ್ಲಿ ಪಾಲ್ಗೊಂಡು ಪ್ರಗತಿ ಪಥದಲ್ಲಿರಲು ಆಶಿರ್ವದಿಸುತ್ತಿದ್ದರು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮಯ ಸತ್ವಯುತ ಹಿತನುಡಿಗಳು ಭಕ್ತರಿಗೆ ಪ್ರೋತ್ಸಾಹಕವಾಗಿದ್ದವು. ಶ್ರೀಗಳಿಗೆ ಪತ್ನಿ, ಇಬ್ನರು ಪುತ್ರರು ಇದ್ದಾರೆ.
ಸಚಿವ ರಮೇಶ ಜಾರಕಿಹೊಳಿ ಕಂಬನಿ:
ಶ್ರೀಪಾದ ಬೋಧ ಸ್ವಾಮೀಜಿ ನಿಧನದಿಂದ ನಾಡಿಗೆ ಹಾನಿ ಉಂಟಾಗಿದೆ. ಹಲವು ಪರಿಸ್ಥಿತಿಗಳಲ್ಲಿ ನನಗೆ ಮಾರ್ಗದರ್ಶನ ಮಾಡಿದ್ದರು. ಮೂಡಲಗಿ ತಾಲೂಕು ರಚನೆ ಸೇರಿದಂತೆ ಎಲ್ಲ ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಶ್ರೀಗಳು ಹಲವಾರು ವರ್ಷಗಳಿಂದ ಅಪಾರ ಭಕ್ತರಿಗೆ ಮಾರ್ಗದರ್ಶನ ಮಾಡಿದ್ದರು. ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಸದ್ಭಕ್ತರಿಗೆಲ್ಲಾ ಅವರ ಆಶೀರ್ವಾದ ದೊರೆಯಲಿ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ‌ ದೇವರಲ್ಲಿ ಪ್ರಾರ್ಥಿಸಿದ್ದಾರೆ.‌
ಬಾಲಚಂದ್ರ ಜಾರಕಿಹೊಳಿ‌ ಶೋಕ: ಈ‌ ಭಾಗದ ನಡೆದಾಡುವ ದೇವರು ಎಂದೇ ಭಕ್ತರ ಹೃದಯದಲ್ಲಿ ನೆಲೆಸಿದ್ದ ಶ್ರೀಪಾದ ಬೊಧ ಮಹಾಸ್ವಾಮಿಗಳು ಐಕ್ಯರಾದ ಸುದ್ದಿ ಕೇಳಿ ದಿಗ್ಭ್ರಮೆ ಉಂಟಾಯಿತು. ಪೂಜ್ಯರ ಪವಿತ್ರ ಆತ್ಮಕ್ಕೆ ಭಕ್ತಿ‌ಪೂರ್ವಕ ಗೌರವವನ್ನು ಕೆ‌ಎಂಎಫ್ ರಾಜ್ಯಾಧ್ಯಕ್ಷ ‌ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಲ್ಲಿಸಿದ್ದಾರೆ.
ಶ್ರೀ ಮಠದ ಏಳ್ಗೆ ಹಾಗೂ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದ್ದರು. ಜೊತೆಗೆ ಶ್ರೀ ಮಠದ ಭಾವೈಕ್ಯತೆ ಮತ್ತು ಪರಂಪರೆಯನ್ನು ಪೂಜ್ಯರು ಯಥಾವತ್ತಾಗಿ ನಡೆಸಿಕೊಂಡು ಬಂದಿದ್ದರು. ಎಲ್ಲ ಸಮುದಾಯದವರನ್ನು ಒಂದೇ ಭಾವದಿಂದ ನೋಡಿಕೊಳ್ಳುತ್ತಿದ್ದರು.
ಸರಳ, ಸಜ್ಜನದ ಸಾಕಾರಮೂರ್ತಿಗೆ ಹೆಸರಾಗಿದ್ದರು. ಪೂಜ್ಯರ ಐಕ್ಯಯಿಂದಾದ ದುಃಖವನ್ನು ಭರಿಸುವ ಶಕ್ತಿಯನ್ನು ಪರಮಾತ್ಮನು ನೀಡಲಿ. ಪೂಜ್ಯರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸುವುದಾಗಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಶೋಕ‌ ಸಂತಾಪದಲ್ಲಿ ತಿಳಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೊಳಿಯವರು ಶ್ರೀಗಳ ಅಗಲಿಕೆ ಅತೀವ ದುಃಖ ನೀಡಿದೆ. ಶ್ರೀಗಳ ಸತ್ಕಾರ್ಯಗಳು ಅಜರಾಮರವಾಗಿವೆ ಎಂದು ಸಂತಾಪದಲ್ಲಿ ತಿಳಿಸಿದ್ದಾರೆ.
Share
WhatsApp
Follow by Email