ಬ್ರೇಕಿಂಗ್ ನ್ಯೂಸ್ ಹೆಚ್ಚುವರಿಯಾಗಿ ಆಹಾರ ಕಿಟ್‍ಗಳನ್ನು ವಿತರಣೆ :ಕೆಎಂಎಫ್ ರಾಜ್ಯಾಧ್ಯಕ್ಷ ಬಾಲಚಂದ್ರ ಜಾರಕಿಹೊಳಿ 04/05/202004/05/20201 min read admin ಗೋಕಾಕ: ಕೊರೋನಾ ಹಿಮ್ಮೆಟ್ಟಿಸಲು ಲಾಕ್‍ಡೌನ್ ಆದ ಸಂದರ್ಭದಲ್ಲಿ ಅರಭಾಂವಿ ಮತಕ್ಷೇತ್ರದ ಪ್ರತಿ ಕುಟುಂಬಗಳಿಗೆ ಈಗಾಗಲೇ 76,258 ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಿಸಿದ್ದು, ಸಮೀಕ್ಷೆ ಕಾರ್ಯಗಳಲ್ಲಿ ಕೆಲವೊಂದು ವಲಸಿಗರು, ಕೃಷಿ-ಕಟ್ಟಡ ಕಾರ್ಮಿಕರು, ಅಲೆಮಾರಿಗಳು, ನಿರಾಶ್ರಿತ ಕುಟುಂಬಗಳು ಉಳಿದುಕೊಂಡಿದ್ದು, ಅಂತಹ ಕುಟುಂಬಗಳ ಮರು ಸಮೀಕ್ಷೆ ಮಾಡಿಸಿ ಅವರಿಗೂ ಸಹ ಹೆಚ್ಚುವರಿಯಾಗಿ ಆಹಾರ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಅರಭಾಂವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.ಈ ಬಗ್ಗೆ ಸೋಮವಾರದಂದು ಮಾಧ್ಯಮಗಳಿಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ವಿಶ್ವವ್ಯಾಪಿಯಾಗಿ ಹರಡಿರುವ ಕೊರೋನಾ ವೈರಸ್ ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಸರ್ಕಾರ ಲಾಕ್‍ಡೌನ್ ವಿಧಿಸಿದ್ದರಿಂದ ಕುಟುಂಬಗಳ ನಿರ್ವಹಣೆಯಲ್ಲಿ ಸಾಕಷ್ಟು ತೊಂದರೆಗಳಾಗಿದ್ದನ್ನು ಮನಗಂಡು ಕ್ಷೇತ್ರದ ಪ್ರತಿಯೊಂದು ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ಅಳಿಲು ಸೇವೆಯನ್ನು ಮಾಡಿದ್ದಾಗಿ ಅವರು ಹೇಳಿದ್ದಾರೆ.ಕಳೆದ ಏಪ್ರೀಲ್ 25ರಿಂದ ಅರಭಾಂವಿ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮಗಳ ಪ್ರತಿ ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ಈಗಾಗಲೇ ವಿತರಿಸಲಾಗಿದೆ. ದುಡಿಯಲಿಕ್ಕೆ ಬಂದ ಕಾರ್ಮಿಕ ಕುಟುಂಬಗಳು, ಅಲೆಮಾರಿಗಳ ಸಮೀಕ್ಷೆ ಕಾರ್ಯ ನಡೆದಿರಲಿಲ್ಲ. ಈ ಕುಟುಂಬಗಳಿಗೂ ಅನುಕೂಲವಾಗಲು ಸೋಮವಾರದಂದು 8242 ಆಹಾರ ಧಾನ್ಯಗಳ ಕಿಟ್‍ಗಳನ್ನು ಟೀಂ ಎನ್‍ಎಸ್‍ಎಫ್ ಕ್ಷೇತ್ರಾದಾದ್ಯಂತ ವಿತರಿಸಿದೆ ಎಂದು ತಿಳಿಸಿದ್ದಾರೆ.ಇದರಿಂದ ಅರಭಾಂವಿ ಕ್ಷೇತ್ರದಲ್ಲಿ ಒಟ್ಟಾರೆ 84,500 ಕುಟುಂಬಗಳಿಗೆ ದಿನಬಳಕೆಯ ದಿನಸಿ ವಸ್ತುಗಳ ಕಿಟ್‍ಗಳನ್ನು ನೀಡಿದಂತಾಗಿದೆ. ಕೊರೋನಾ ಆರಂಭದ ದಿನಗಳಲ್ಲಿ ಇಡೀ ಕ್ಷೇತ್ರದಲ್ಲಿ 2.50 ಲಕ್ಷ ಮಾಸ್ಕ್‍ಗಳನ್ನು ಸಾರ್ವಜನಿಕರಿಗೆ ನೀಡಲಾಗಿದೆ. ಜಗತ್ತಿನಾದ್ಯಂತ ಪೆಢಂಭೂತದಂತೆ ಕಾಡುತ್ತಿರುವ ಕೊರೋನಾ ವೈರಸ್ ಹಿಮ್ಮೆಟ್ಟಿಸಲು ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಾಗೂ ಯೋಜನಾಬದ್ಧವಾಗಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ: ಕೊರೋನಾ ವೈರಸ್ ಹರಡದಂತೆ ಮುಂಜಾಗೃತಿ ಕ್ರಮಗಳನ್ನು ಕೈಗೊಂಡು ಹಗಲಿರುಳು ಶ್ರಮಿಸಿ, ಪ್ರತಿಯೊಂದು ಕುಟುಂಬಗಳಿಗೆ ಅಗತ್ಯವಿರುವ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ಅವರವರ ಮನೆ ಬಾಗಿಲಿಗೆ ತಲುಪಿಸಲು ಶ್ರಮಿಸಿರುವ ಎಲ್ಲ ಅಧಿಕಾರಿಗಳ ಕಾರ್ಯಕ್ಕೆ ಬಾಲಚಂದ್ರ ಜಾರಕಿಹೊಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿ ಹಂತದಲ್ಲೂ ಶ್ರಮಿಸಿರುವ ಆರೋಗ್ಯ, ಕಂದಾಯ, ಪೊಲೀಸ್, ಪಂಚಾಯತರಾಜ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿಗಳು ಸೇರಿದಂತೆ ಕೋರೊನಾ ವಾರಿಯರ್ಸ್, ಜನಪ್ರತಿನಿಧಿಗಳು-ಮುಖಂಡರುಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.ಮುಂಜಾಗೃತೆ ವಹಿಸಿ: ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಈವರೆಗೆ ದೇವರ ದಯೆಯಿಂದ ಕೊರೋನಾ ಪ್ರಕರಣಗಳು ಕಂಡು ಬಂದಿಲ್ಲಾ. ಇಂದಿನಿಂದ ಲಾಕ್‍ಡೌನ್ ಸಡಿಲಿಕೆಯಾಗಿದ್ದರಿಂದ ಸಾರ್ವಜನಿಕರು ಯಾವುದೇ ಕಾರಣಕ್ಕೂ ನಿಲಕ್ಷ್ಯ ಮಾಡಬೇಡಿ, ಇದೊಂದು ಸಾಂಕ್ರಮಿಕ ರೋಗವಾಗಿರುವದರಿಂದ ತಮ್ಮ ಜೀವಕ್ಕೆ ಆಪತ್ತು ತಂದುಕೊಳ್ಳಬೇಡಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಲಾಕ್‍ಡೌನ್ ನಿಯಮಗಳನ್ನು ಪಾಲಿಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಎಲ್ಲರೂ ಕಡ್ಡಾಯವಾಗಿ ಮಾಸ್ಕ್‍ನ್ನು ಧರಿಸಿ, ಮಾರಕ ಕೊರೋನಾ ವೈರಸ್ ಸೋಲಿಸಲು ಪಣ ತೋಡುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ. Share