ಸಮುದ್ರ ಸೇತು ಯೋಜನೆ: ಬಹರೈನ್​​ನಿಂದ ಮಂಗಳೂರಿಗೆ ಬಂದಿಳಿದ 50 ಮೆಟ್ರಿಕ್ ಟನ್ ಆಕ್ಸಿಜನ್.

ಸಾಂದರ್ಭಿಕ ಚಿತ್ರ

ಮಂಗಳೂರು: ಕೊರೋನಾ 2ನೇ ಅಲೆಯಿಂದ ದೇಶ ತತ್ತರಿಸುತ್ತಿದೆ. ಆಕ್ಸಿಜನ್​ಗಾಗಿ ಎಲ್ಲೆಡೆ ಹಾಹಾಕಾರವಿದೆ. ಆಕ್ಸಿಜನ್​ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಹರಸಾಹಸಪಡುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಸಮುದ್ರ ಸೇತು-2 ಕಾರ್ಯಾಚರಣೆ ನಡೆಯುತ್ತಿದೆ. ಇದರ ಅಂಗವಾಗಿ ಭಾರತದ ನೌಕಾಸೇನಾ ಹಡಗು ಐಎನ್‌ಎಸ್ ತಲ್ವಾರ್, 50 ಮೆಟ್ರಿಕ್ ಟನ್‌ ಆಮ್ಲಜನಕವನ್ನು ಮಂಗಳೂರು ಬಂದರಿಗೆ ತರಲಾಗಿದೆ. ಕೇಂದ್ರ ಸರ್ಕಾರ ಆಮ್ಲಜನಕದ ಟ್ಯಾಂಕರ್ ನ್ನು ಉಚಿತವಾಗಿ ನಿರ್ವಹಣೆ ಮಾಡುವಂತೆ ನವಮಂಗಳೂರು ಬಂದರಿಗೆ ಸೂಚನೆ ನೀಡಿತ್ತು.

ಬಹರೈನ್‌ನ ಮನಾಮಾದಿಂದ ಎರಡು ಕ್ರಯೋಜೆನಿಕ್ ಐಸೋ ಕಂಟೈನರ್‌ಗಳಲ್ಲಿ 50 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿಳಿದಿದೆ. ಆಕ್ಸಿಜನ್ ಜೊತೆಗೆ ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಮೆಡಿಕಲ್ ಉಪಕರಣಗಳೂ ಬಂದಿವೆ. ನವಮಂಗಳೂರು ಬಂದರಿಗೆ ಈ 50 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿಳಿಯಲಿದೆ. ವಿದೇಶಗಳಿಂದ ಆಕ್ಸಿಜನ್​ ತರುವ ಉದ್ದೇಶದಿಂದ ಭಾರತೀಯ ನೌಕಾಪಡೆ ಆಪರೇಷನ್​ ಸಮುದ್ರ ಸೇತು 2 ಕಾರ್ಯಾಚರಣೆ ಆರಂಭಿಸಿದೆ. ಏಳು ಭಾರತೀಯ ನೌಕಾ ಹಡಗುಗಳಾದ ಕೋಲ್ಕತ್ತಾ, ಕೊಚ್ಚಿ, ತಲ್ವಾರ್​, ತಬಾರ್​, ತ್ರಿಕಾಂಡ್​, ಜಲಶ್ವಾ ಮತ್ತು ಐರಾವತ್​ ಈ ಕಾರ್ಯಾಚರಣೆಗೆ ನಿಯೋಜನೆಗೊಂಡಿವೆ.

ಮೊದಲ ಹಂತದಲ್ಲಿ ಬಹರೈನ್​, ಸಿಂಗಾಪುರ ಮತ್ತು ಥಾಯ್ಲೆಂಡ್​ಗಳಿಂದ ಆಮ್ಲಜನಕ ತರಲು ಯೋಜನೆ ರೂಪಿಸಲಾಗಿದೆ. ದೇಶದಲ್ಲಿ ಉಂಟಾಗಿರುವ ಆಮ್ಲಜನಕ ಸಮಸ್ಯೆ ಸರಿದೂಗಿಸುವ ಉದ್ದೇಶದಿಂದ ಆಪರೇಷನ್​ ಸಮುದ್ರ ಸೇತು-2 ಯೋಜನೆ ಹಮ್ಮಿಕೊಳ್ಳಲಾಗಿದೆ.

ಇನ್ನು ರಾಜ್ಯದಲ್ಲಿ ಆಕ್ಸಿಜನ್​ ಸಮಸ್ಯೆ ಸೇರಿದಂತೆ ಕೋವಿಡ್​ ನಿರ್ವಹಣೆಗೆ ಸಿಎಂ ಸಚಿವರಿಗೆ ಉಸ್ತುವಾರಿ ವಹಿಸಿದ್ದು, ಈ ಬಗ್ಗೆ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದಾರೆ. ಈ ಬೆನ್ನಲ್ಲೆ ಇಂದು ಆಕ್ಸಿಜನ್​ ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಚಿವ ಜಗದೀಶ್​ ಶೆಟ್ಟರ್​ ಸಭೆ ನಡೆಸಿದ್ದು, ಈ ಕುರಿತು ಪರಿಶೀಲನೆ ನಡೆಸಿದರು. ಸಭೆ ಬಳಿಕ ಮಾತನಾಡಿರುವ ಅವರು ನಮ್ಮ ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಆಗುತ್ತಿದೆ. ಅದರ ಬಳಕೆಗೆ ನಮಗೆ ಅವಕಾಶ ಮಾಡಿಕೊಡಿ ಎಂದು ಕೇಂದ್ರದ ಬಳಿ ಮನವಿ ಮಾಡಿಕೊಂಡಿದ್ದೇವೆ. ಈ ಕುರಿತು ಕೇಂದ್ರ ಸಚಿವ ಪಿಯೂಶ್​ ಗೊಯಲ್​ ಜೊತೆ ದೂರವಾಣಿ ಮೂಲಕ ಮಾತನಾಡಲಾಗಿದೆ. ಇಂದು ಸಂಜೆ ಕೇಂದ್ರದಿಂದ ಉತ್ತರ ಸಿಗುವ ಸಾಧ್ಯತೆ ಇದೆ ಎಂದರು.

ಆಕ್ಸಿಜನ್​ ಪೂರೈಕೆ ಸಮನ್ವಯತೆ ಜವಾಬ್ದಾರಿ ಹೊತ್ತಿರುವ ಬೆನ್ನಲ್ಲೆ ಈ  ಕುರಿತು ಇಂದು ಬೆಳಗ್ಗೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ರಾಜ್ಯದಲ್ಲಿನ ಆಕ್ಸಿಜನ್​ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ಇನ್ನು ಆಕ್ಸಿಜನ್ ಟ್ರಾನ್ಸ್‌ಪೋರ್ಟ್‌ ಸಮಸ್ಯೆ ವಿಚಾರ ಕುರಿತು ತಿಳಿಸಿದ ಅವರು, ಆಮ್ಲಜನಕವನ್ನು ಟ್ಯಾಂಕರ್‌ ಮೂಲಕ ಕಳಿಸುವ ಕೆಲಸ ಮಾಡುತ್ತಿದ್ದೇವೆ. ಪ್ರತಿ ದಿನ ಕೆಲಸ ಮಾಡಿ ಸಮಸ್ಯೆ ಸರಿಪಡಿಸಬೇಕು, ನಾಲ್ಕು ದಿನ ಎಂದು ಹೇಳಿದರೆ ಸಮಸ್ಯೆ ಬಗೆಹರಿಯಲ್ಲ. ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share
WhatsApp
Follow by Email