PM Caresಗೆ 2.5 ಲಕ್ಷ ದೇಣಿಗೆ ನೀಡಿದ್ದವನ ತಾಯಿಗೆ ಬೆಡ್ ಸಿಗದೆ ಸಾವು!

ಪಿಎಂ ಕೇರ್ಸ್​ಗೆ 2.51 ಲಕ್ಷ ದೇಣಿಗೆ ನೀಡಿದ್ದೇನೆ. ಆದರೂ, ಸಾಯುತ್ತಿರುವ ನನ್ನ ತಾಯಿಗೆ ಆಕ್ಸಿಜನ್ ಬೆಡ್​ ದೊರಕಲಿಲ್ಲ. ಇನ್ನು ಮುಂದೆ ಬರುತ್ತಿರುವ 3ನೇ ಕೊರೋನಾ ಅಲೆಯಲ್ಲಿ ಬೆಡ್ ಕಾಯ್ದಿರಿಸಲು ನಾನು ಎಷ್ಟು ಹಣವನ್ನು ದೇಣಿಗೆಯಾಗಿ ನೀಡಬೇಕೆಂದು ದಯವಿಟ್ಟು ಸಲಹೆ ನೀಡಿ ಎಂದು ಆತ ಅಲವತ್ತುಕೊಂಡಿದ್ದಾನೆ.

ನವ ದೆಹಲಿ: ಕಳೆದ ಮಾರ್ಚ್​ ತಿಂಗಳಲ್ಲಿ ಭಾರತಕ್ಕೆ ಕೊರೋನಾ ಮೊದಲ ಅಲೆ ಅಪ್ಪಳಿಸಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ಸೂಕ್ತ ವೆಂಟಿಲೇಟರ್​ ಸೌಲಭ್ಯ ಇಲ್ಲದೆ ಸಾವಿರಾರು ಜನ ಮೃತಪಟ್ಟಿದ್ದರು. ಹೀಗಾಗಿ ಆಸ್ಪ್ರೆಗಳಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಲು ಹಾಗೂ  ದೇಶದಲ್ಲಿ ಉಲ್ಬಣವಾಗುತ್ತಿರುವ ಕೊರೋನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಫಂಡ್‌ ಸ್ಥಾಪಿಸಿತ್ತು. ಆರಂಭದಲ್ಲಿ PM Cares ಸಾಕಷ್ಟು ವಿವಾಗಳಿಗೆ ಒಳಗಾದರೂ ಸಹ ಜನ ಇದಕ್ಕೆ ಕೋಟ್ಯಾಂತರ ಹಣವನ್ನು ದೇಣಿಯಾಗಿ ನೀಡಿದ್ದರು ಎಂಬುದು ಮಾತ್ರ ಸುಳ್ಳಲ್ಲ. ಆದರೆ, ಪಿಎಂ ಕೇರ್ಸ್​ಗೆ ಹೀಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ ವ್ಯಕ್ತಿಯ ತಾಯಿ ಇಂದು ಬೆಡ್​ ಸಿಗದೆ ಸಾವನ್ನಪ್ಪಿರುವ ಕರುಣಾಜನಕ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ.

ಕೋಟ್ಯಾಂತರ ಮಂದಿ ಪಿಎಂ ಕೇರ್ಸ್ ಫಂಡ್‌ಗೆ ದೇಧ-ವಿದೇಶಗಳ ಕೋಟಿ-ಕೋಟಿ ದೇಣಿಗೆ ನೀಡಿದ್ದಾರೆ. ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ದೇಣಿಗೆ ನೀಡಿದ್ದು, ಜನರಿಗೆ ಸಹಾಯ ಮಾಡಲು ತಿಳಿಸಿದ್ದಾರೆ. ಆದರೆ, ಇದ್ಯಾವುದು ಜನರಿಗೆ ದೊರಕುತ್ತಿಲ್ಲ ಎಂದು ಹಲವು ಟೀಕೆಗಳು ಕೇಳಿಬಂದಿವೆ. ಇವುಗಳ ಜೊತೆಗೆ ಅಹ್ಮದಾಬಾದ್‌ನ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿ ಈ ಟೀಕೆಗೆ ಪುಷ್ಠಿ ನೀಡಿದ್ದಾರೆ.

ಅಹ್ಮದಾಬಾದ್‌ನ ವಿಜಯ್ ಪರಿಕ್ ಎಂಬುವವರು ಪಿಎಂ ಕೇರ್ಸ್ ಫಂಡ್‌ಗೆ 2 ಲಕ್ಷದ 51 ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಇಷ್ಟು ದೇಣಿಗೆ ನೀಡಿದ್ದರು ನನ್ನ ತಾಯಿಗೆ ಒಂದು ಬೆಡ್ ಸಿಗಲಿಲ್ಲ. ಅವರು ಸಾವನ್ನಪ್ಪಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಟ್ವೀಟ್​ನಲ್ಲಿ, “ಪಿಎಂ ಕೇರ್ಸ್​ಗೆ 2.51 ಲಕ್ಷ ದೇಣಿಗೆ ನೀಡಿದ್ದೇನೆ. ಆದರೂ, ಸಾಯುತ್ತಿರುವ ನನ್ನ ತಾಯಿಗೆ ಆಕ್ಸಿಜನ್ ಬೆಡ್​ ದೊರಕಲಿಲ್ಲ. ಇನ್ನು ಮುಂದೆ ಬರುತ್ತಿರುವ 3ನೇ ಕೊರೋನಾ ಅಲೆಯಲ್ಲಿ ಬೆಡ್ ಕಾಯ್ದಿರಿಸಲು ನಾನು ಎಷ್ಟು ಹೆಚ್ಚುವರಿ ಹಣವನ್ನು ದೇಣಿಗೆಯಾಗಿ ನೀಡಬೇಕೆಂದು ದಯವಿಟ್ಟು ಸಲಹೆ ನೀಡಿ, ಈ ಸೋಂಕಿನಿಂದ ನಾನು ಮತ್ತಷ್ಟು ಕುಟುಂಬ ಸದಸ್ಯರನ್ನು ಕಳೆದುಕೊಳ್ಳಲು ಬಯಸುವುದಿಲ್ಲ” ಎಂದು ತನ್ನ ನೋವನ್ನು ದಾಖಲಿಸಿದ್ದಾರೆ. ಈಗಾಗಲೇ ಆತನ ತಾಯಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಟ್ವೀಟ್​ ಸಹ ಇದೀಗ ಭಾರೀ ವೈರಲ್ ಆಗುತ್ತಿದೆ.

ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್‌ನಾಥ್‌ ಸಿಂಗ್, ಸ್ಮೃತಿ ಇರಾನಿ, ರಾಷ್ಟ್ರಪತಿ ಭವನವನ್ನು ಟ್ಯಾಗ್ ಮಾಡಿದ್ದಾರೆ. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುತ್ತಿದ್ದಾರೆ.

ಪಿಎಂ ಕೇರ್ಸ್ ಫಂಡ್‌ನ ಪ್ರಸ್ತುತ ಸ್ಥಿತಿ ಮತ್ತು ಭಾರತ ಸರ್ಕಾರದೊಂದಿಗಿನ ಸಂಬಂಧಗಳ ಬಗ್ಗೆ ವಿವರಗಳನ್ನು ಬಹಿರಂಗ ಪಡಿಸುವಂತೆ ನಿರ್ದೇಶನ ಕೋರಿ ಉನ್ನತ ನ್ಯಾಯಾಲಯಕ್ಕೆ ಸಾಮಾಜಿಕ ಕಾರ್ಯಕರ್ತ, ಮಾಜಿ ಪತ್ರಕರ್ತ ಸಾಕತ್ ಗೋಖಲೆ ಪಿಐಎಲ್ ಸಲ್ಲಿಸಿದ್ದಾರೆ.

Share
WhatsApp
Follow by Email