ಕೃಷಿ ಮಸೂದೆಗಳ ಪ್ರತಿಯನ್ನು ಸುಟ್ಟು ಜೂ.5ರಂದು ಹೋರಾಟ: ಬಡಗಲಪುರ ನಾಗೇಂದ್ರ

ಮೈಸೂರು: ಜಯಪ್ರಕಾಶ್ ನಾರಾಯಣ್ ಅವರು ಸಂಪೂರ್ಣ ಕ್ರಾಂತಿಗೆ ಕರೆ ನೀಡಿದ ದಿನವಾದ ಜೂ.5ರಂದು ರಾಜ್ಯದ ಬಿಜೆಪಿ ಸಂಸದರು ಮತ್ತು ಶಾಸಕರ ಕಛೇರಿಯ ಎದುರು ರೈತ ವಿರೋಧಿ ಮೂರು ಕೃಷಿ ಮಸೂದೆಗಳ ಪ್ರತಿಯನ್ನು ಸುಟ್ಟು ವಿಶೇಷವಾಗಿ ಆಚರಣೆ ಮಾಡಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಹಾಗೂ ಸಂಯುಕ್ತ ಹೋರಾಟ ಕರ್ನಾಟಕದ ಸಂಯೋಜಕ ಬಡಗಲಪುರ ನಾಗೇಂದ್ರ ತಿಳಿಸಿದರು.

ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು  ಜೂ.5 ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಸಂಪೂರ್ಣ ಕ್ರಾಂತಿಗೆ ಕರೆ ನೀಡಿದ ದಿನ. ಆ ದಿನವನ್ನು ವಿಶಿಷ್ಟವಾಗಿ ಆಚರಿಸಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಆವತ್ತು ನಾವು ದುಷ್ಟ ಸರ್ಕಾರವಾದ ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಮಸೂದೆಗಳ ಪ್ರತಿಗಳನ್ನು ರಾಜ್ಯದ ಬಿಜೆಪಿ ಸಂಸದರು ಮತ್ತು ಶಾಸಕರ ಕಛೇರಿಗಳ ಮುಂದೆ ಸುಟ್ಟು ವಿಶಿಷ್ಟವಾಗಿ ಆಚರಿಸುತ್ತೇವೆ ಎಂದರು.

ಯಾಕೆಂದರೆ ಅಂದು ಸರ್ವಾಧಿಕಾರದ ಆಡಳಿತ ಇತ್ತು, ಭ್ರಷ್ಟಾಚಾರದ ಆಡಳಿತ ಇತ್ತು. ಸಂವಿಧಾನದ ಅಂಶವನ್ನು ಗಾಳಿಗೆ ತೂರುವಂತಹ ಆಡಳಿತ ಇತ್ತು. ಅದನ್ನು ಸಂಪೂರ್ಣ ಧಿಕ್ಕರಿಸಿ ಸಂಪೂರ್ಣ ಕ್ರಾಂತಿಗೆ ಜಯಪ್ರಕಾಶ್ ನಾರಾಯಣ್ ಅವರು ಕರೆ ನೀಡಿದ್ದರು. ಆ ದಿನಕ್ಕಿಂತ ಕೆಟ್ಟ ದಿನಗಳು ಇಂದು ಇದೆ.  ಸಂವಿಧಾನ ಲೆಕ್ಕಕ್ಕೇ ಇಲ್ಲ, ಪ್ರಶ್ನೆ ಮಾಡುವವರನ್ನು ಜೈಲಿಗೆ ಹಾಕುತ್ತಿದ್ದಾರೆ. ಮತ್ತೆ ಕಂಪನಿಪರ, ಇರುವ ಸ್ವತ್ತುಗಳನ್ನು ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಈ ರೈತ ಕೃಷಿ ವಲಯವನ್ನು ಖಾಸಗಿಯವರಿಗೆ ವಹಿಸಲು ಹೊರಟಿದ್ದಾರೆ. ಅದಕ್ಕಿಂತಲೂ ಕೆಟ್ಟ ಸರ್ಕಾರ ಇವತ್ತಿದೆ. ಸಂಪೂರ್ಣ ಕ್ರಾಂತಿಯ ದಿನ ಈ ಸರ್ಕಾರದ ವಿರುದ್ಧ ದೊಡ್ಡ ಹೋರಾಟವನ್ನು ಮಾಡುವ ದೃಷ್ಟಿಯಿಂದ ಆ ದಿನ ಸಾಂಕೇತಿಕವಾಗಿ ಮೂರು ಕೃಷಿ ಮಸೂದೆಗಳನ್ನು ಸಂಸದರು ಮತ್ತು  ಶಾಸಕರ ಮನೆಯ ಮುಂದೆ ಮಸೂದೆ ಪ್ರತಿ ಸುಟ್ಟು ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Share
WhatsApp
Follow by Email