ಸಾವುಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಸರ್ಕಾರದ ಬೇಜವಾಬ್ದಾರಿ: ಹೆಚ್.ಸಿ.ಮಹದೇವಪ್ಪ

ಕೊರೋನಾ ವಾರಿಯರ್ಸ್ ಎಂದು ಹೇಳಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಚಪ್ಪಾಳೆ ಹೊಡೆದು ಹೂಮಳೆ ಸುರಿದು ಗೌರವ ಸೂಚಿಸುವ ನಾಟಕವಾಡಿದ ಸರ್ಕಾರವೀಗ ತನ್ನ ಆಡಳಿತ ವೈಫಲ್ಯದಿಂದ ಹತಾಶೆ ಗೊಂಡು ವೈದ್ಯರನ್ನು ನಿಂದಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವಿಷಯಗಳ ಕುರಿತು ಸರ್ಕಾರವನ್ನು ಟೀಕಿಸಿರುವ ಅವರು ಚಾಮರಾಜ ನಗರದಲ್ಲಿನ ಕುಟುಂಬದ ಸದಸ್ಯರ ಆತ್ಮಹತ್ಯೆಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂದಿದ್ದಾರೆ. ಬಡತನದಿಂದಾಗಿ ಚಾಮರಾಜನಗರದಲ್ಲಿ ಕುಟುಂಬದ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುಃಖದ ವಿಷಯ. ನಿಜಕ್ಕೂ ಈ ಸಾವುಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಸರ್ಕಾರದ ಬೇಜವಾಬ್ದಾರಿ ತನದಿಂದ ಉಂಟಾದ ಸಾವು.
ಲಾಕ್ ಡೌನ್ ವಿಸ್ತರಿಸುವ ಸಮಯದಲ್ಲಿ ಆ ದಿನದ ದುಡಿಮೆಯನ್ನೇ ನೆಚ್ಚಿಕೊಂಡು ಬದುಕುವ ಜನ ಸಾಮಾನ್ಯರು ಬದುಕಿಗೆ ನೆರವಾಗಬೇಕೆಂಬ ಕನಿಷ್ಠ ಪ್ರಜ್ಞೆಯಿಲ್ಲದ ಈ ಕ್ರೂರ ಸರ್ಕಾರದ ಅಸಮರ್ಥತೆಯೇ ಮುಗ್ದ ಬಡಜನರ ಸಾವುಗಳಿಗೆ ನೇರ ಕಾರಣ. ಇದರ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು.
ಇನ್ನು ಕೊರೋನಾ ಸೋಂಕು ಬಂದು ಸಹಜೀವಿಗಳು ಕಷ್ಟದಲ್ಲಿದ್ದಾಗ ಕನಿಷ್ಠ ಸಹಾಯ ಮಾಡಲಾಗದಿದ್ದರೂ ಕೂಡಾ ಅವರನ್ನು ನಿಂದಿಸಿ ಮನಸ್ಸು ನೋಯಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ವಿನಂತಿಸಿಕೊಳ್ಳುತ್ತೇನೆ.

ಹಾಗೂ ಮಾನವೀಯ ಪ್ರಜ್ಞೆಯನ್ನು ಮೀರಿ ಸೋಂಕಿತರನ್ನು ಹಿಂಸಿಸುವ, ದೌರ್ಜನ್ಯ ಎಸಗುವವರ ಮೇಲೆ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಲಿ ಎಂದಿದ್ದಾರೆ.

Share
WhatsApp
Follow by Email