25ಸಾವಿರ ಗಿಡಗಳನ್ನು ನೆಟ್ಟು ನೀರೆರೆದು ಪೋಷಿಸುವ ಯೋಜನೆ: ಹೆಚ್.ವಿ.ರಾಜೀವ್ ಕರೆ

ಮೈಸೂರು,ಜೂ.3:- ಹಚ್ಚ ಹಸುರಿನ ಮೈಸೂರು ನಿರ್ಮಾಣದತ್ತ ಹೆಜ್ಜೆ ಇಡುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ  ಅಧ್ಯಕ್ಷ ಹೆಚ್.ವಿ.ರಾಜೀವ್ ಕರೆ ನೀಡಿದರು.

ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಾಂಗಣದಲ್ಲಿ ಅಭಿಪ್ರಾಯ ಸಂಗ್ರಹ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೈಸೂರು ನಗರದಲ್ಲಿ ಜೂ.5ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮೈಸೂರು ನಗರದಾದ್ಯಂತ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು  ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಸಾಲಿನಲ್ಲಿ 25ಸಾವಿರ ವಿವಿಧ ಜಾತಿಯ ದೀರ್ಘ ಕಾಲ ಉಳಿಯುವ  ವಾತಾವರಣಕ್ಕೆ ಹೆಚ್ಚು ಆಮ್ಲಜನಕ ನೀಡುವ ಅರಳಿ, ಅತ್ತಿ. ಮತ್ತಿ, ಬಾಗೆ, ಹಲಸು, ನೇರಳೆ, ಮಹಾಗನಿ, ಬೇವು, ಸಂಪಿಗೆ, ನಾಗಲಿಂಗಪುಷ್ಪ, ಹಾಗೂ ಇತರೆ ಸಸಿಗಳನ್ನು ಉದ್ಯಾನವನ, ರಸ್ತೆ ಬದಿ, ಹಾಗೂ ಇತರೆ ವೃಕ್ಷ ಬೆಳೆಯುವ ಸ್ಥಳಗಳಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ , ಮನಪಾ, ಅರಣ್ಯ ಇಲಾಖೆಹಾಗೂ ಹಸಿರು ಮೈಸೂರು ತಂಡ ಹಾಗೂ ಇತರ ಸಂಘಸಂಸ್ಥೆಗೊಳಗೂಡಿ  ಗಿಡಗಳನ್ನು ನೆಟ್ಟು ನೀರೆರೆದು ಪೋಷಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಈ ಎಲ್ಲಾ ವೃಕ್ಷಗಳು ನೂರಾರು ವರ್ಷಗಳ ಕಾಲ ಉಳಿಯುವ ಜಾತಿಗೆ ಸೇರಿದ ಅತಿ ದೊಡ್ಡದಾಗಿ ಬೆಳೆಯುವ ವೃಕ್ಷಗಳಾಗಿದ್ದು, ವಾತಾವರಣಕ್ಕೆ ಹೆಚ್ಚು ಆಮ್ಲಜನಕ ನೀಡುವುದಲ್ಲದೆ ನಗರದ ಉಷ್ಣಾಂಶವನ್ನು ಕಡಿಮೆ ಮಾಡುವುದಲ್ಲದೆ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಿ ಅವುಗಳ ವಾಸ ಸ್ಥಳಗಳನ್ನು ನಿರ್ಮಿಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಹಸಿರು ಮೈಸೂರು ಸಂಸ್ಥೆಯು 2019-20ನೇ ಸಾಲಿನಲ್ಲಿ 15000ಸಸಿಗಳನ್ನು, 2020-21ನೇ ಸಾಲಿನಲ್ಲಿ 15ಸಾವಿರ ಸಸಿಗಳನ್ನು ಹಾಗೂ ಈ ಸಾಲಿನಲ್ಲಿ 20ಸಾವಿರ ಸಸಿಗಳನ್ನು  ಕಳೆದ ಮೂರು ವರ್ಷಗಳಲ್ಲಿ ಒಟ್ಟು 50ಸಾವಿರ ವಿವಿಧ ಜಾತಿಯ ಸಸಿಗಳನ್ನು ಉಚಿತವಾಗಿ ಬೆಳೆಸಿ ಮೈಸೂರು ನಗರಪಾಲಿಕೆ , ಮುಡಾ, ಮತ್ತು ಆಸಕ್ತ ವೃಕ್ಷ ಪ್ರೇಮಿಗಳಿಗೆ ಸಂಸ್ಥೆಯ ವತಿಯಿಂದ ಉಚಿತವಾಗಿ ನೀಡಲಾಗುತ್ತಿದ್ದು ಈ ಸಂಸ್ಥೆಯ ಸೇವೆ ಶ್ಲಾಘನೀಯ. ನಗರ ವ್ಯಾಪ್ತಿಯಲ್ಲಿ  ಉದ್ಯಾನವನಗಳಲ್ಲಿ ನೆಡಲಾಗುವ ಸಸಿಗಳಿಗೆ ಯಾವುದೇ ಸಂಘ ಸಂಸ್ಥೆ ವಾರ್ಷಿಕವಾಗಿ ನೀರೆರೆದು ಪೋಷಿಸಲು ಮುಂದೆ ಬಂದಲ್ಲಿ ಒಡಂಬಡಿಕೆ ಮಾಡಿಕೊಂಡು ಉಚಿತವಾಗಿ ನೆಡಲಾಗುವುದು ಎಂದು ತಿಳಿಸಿದರು.

ಪ್ರಾಧಿಕಾರದಿಂದ ನಗರ ಅರಣ್ಯೀಕರಣದತ್ತ  ಹೆಜ್ಜೆ ಇಡುವ ದಿಶೆಯಲ್ಲಿ ಪ್ರಾಧಿಕಾರದ 2021-22ನೇ ಸಾಲಿನ ಅಂದಾಜು ಆಯವ್ಯಯದಲ್ಲಿ ಅಂದಾಜಿಸಿರುವ ಸಂಪನ್ಮೂಲದಲ್ಲಿ 80ಲಕ್ಷರೂ.ಗಳ ಮೊತ್ತವನ್ನು ಪ್ರಾಧಿಕಾರದಿಂದ ಮತ್ತು ಅರಣ್ಯ ಇಲಾಖೆಯಿಂದ ಸಸಿ ಬೆಳೆಸುವ ಉದ್ದೇಶಕ್ಕೆ ವಿನಿಯೋಗಿಸಲು ಉದ್ದೇಶಿಸಲಾಗಿದೆ. ಪ್ರಾಧಿಕಾರದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.00ಲಕ್ಷ ಸಸಿಗಳನ್ನು ಉದ್ಯಾನವನಗಳಲ್ಲಿ  ಹಾಗೂ ತೆರೆದ ಪ್ರದೇಶಗಳಲ್ಲಿ ನೆಡಲು ಉದ್ದೇಶಿಸಲಾಗಿದ್ದು ಈ ಕಾರ್ಯಕ್ಕೆ 40ಲಕ್ಷರೂ.ಗಳನ್ನು ಕಾಯ್ದಿರಿಸಲಾಗಿದೆ. ಈ ದಿಶೆಯಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳ ಪರಿಸರವಾದಿಗಳು ಪ್ರಾಧಿಕಾರದ ಜೊತೆ ಕೈಜೋಡಿಸುವಂತೆ ಮನವಿ ಮಾಡಿದರು.

ಸಾರ್ವಜನಿಕರು, ಸಂಘಸಂಸ್ಥೆಗಳು ಉಚಿತ ಸಸಿಗಳಿಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ತೋಟಗಾರಿಕಾ ಅಧಿಕಾರಿ ವಿನಯ(9880222374), ಮೈಸೂರು ಮನಪಾ ತೋಟಗಾರಿಕಾ ಅಧಿಕಾರಿ ಮಹೇಶ್ ಸ.ಕಾ.ಅ.(9740012768), ಹಸಿರು ಮೈಸೂರು ಸಂಸ್ಥೆಯ ಶೇಷ ಪ್ರಸಾದ್ (9353006616)ಇವರನ್ನು ಸಂಪರ್ಕಿಸಿ ಗಿಡಗಳನ್ನು ನೆಡುವ ಜಾಗದ ವಿವರಗಳನ್ನು ನೀಡಿ ಪಡೆಯಬಹುದಾಗಿದೆ ಎಂದರು.

ಸುದ್ದಗೋಷ್ಠಿಯಲ್ಲಿ ಮುಡಾ ಆಯುಕ್ತರಾದ ಡಾ.ಡಿ.ಬಿ.ನಟೇಶ್, ಇನ್ನಿತರರು ಉಪಸ್ಥಿತರಿದ್ದರು.

Share
WhatsApp
Follow by Email