ಪುನೀತ್ ರಾಜಕುಮಾರ ಅವರು ಕಾಣಿಸಿಕೊಂಡ ಕರ್ನಾಟಕ ರತ್ನ, ಪವರ್ಸ್ಟಾರ್ ಡಾ.ಪುನೀತ್ ರಾಜ್ಕುಮಾರ್ ಅವರ ಕನಸಿನ ಕೂಸು ‘ಗಂಧದ ಗುಡಿ’ ಸಾಕ್ಷ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಯೂಟ್ಯೂಬ್‍ನಲ್ಲಿ ರಿಲೀಸ್ ಆದ ಕೇವಲ ಒಂದೇ ಗಂಟೆಗಳಲ್ಲಿ ಈ ಟ್ರೈಲರ್ ಅನ್ನು 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ಕರ್ನಾಟಕದ ಅಭಯಾರಣ್ಯ, ನದಿ, ತೊರೆ, ಬೆಟ್ಟ-ಗುಡ್ಡಗಳು ಮತ್ತು ಪ್ರಾಣಿಸಂಕುಲವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ‘ಕರ್ನಾಟಕದ ಕಾಡು ಉಳಿಸಿ’ ಎಂಬ ವರನಟ ಡಾ. ರಾಜಕುಮಾರ್ ಅವರ ಸಂದೇಶದ ಮರುಜನ್ಮವೇ ಹೊಸ ‘ಗಂಧದ ಗುಡಿ’ಯ ಸಾರಾಂಶವಾಗಿದೆ.
ನರೇಂದ್ರ ಮೋದಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಪು ಅವರನ್ನು ಹೊಗಳಿ ಗಂಧದ ಗುಡಿ ಸಾಕ್ಷ್ಯ ಚಿತ್ರಕ್ಕೆ ಹೀಗೆ ಶುಭ ಹಾರೈಸಿದ್ದಾರೆ.
ಅಪ್ಪು ಜಗತ್ತಿನಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸಿನ ಪ್ರತೀಕ, ಚೈತನ್ಯದ ಚಿಲುಮೆ ಮತ್ತು ಸರಿಸಾಟಿಯಿಲ್ಲದ ಪ್ರತಿಭಾವಂತರಾಗಿದ್ದರು. #GandhadaGudi ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಹಾಗು ಪರಿಸರ ಸಂರಕ್ಷಣೆಗೆ ಸಲ್ಲಿಸಲಾದ ಗೌರವ. ಈ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು.
2021ರ ಅಕ್ಟೋಬರ್ 29ರಂದು ಅಪ್ಪು ನಿಧನ ಹೊಂದಿದ್ದರು. ಇದೇ ಕಾರಣಕ್ಕೆ ಈ ವರ್ಷ ಅಕ್ಟೋಬರ್ 28ರಂದು ‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ. ವಿಶೇಷ ಅಂದ್ರೆ ‘ಗಂಧದ ಗುಡಿ’ ಡಾಕ್ಯುಮೆಂಟರಿಯನ್ನು ‘ಅಪ್ಪು’ ಆಸೆಯಂತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.