ಜಗತ್ತು ಭಾರತವನ್ನು ಪ್ರಕಾಶಮಾನವಾದ ತಾಣವೆಂದು ( BRIGHT SPOT ) ಪರಿಗಣಿಸುತ್ತದೆ: ಇನ್ವೆಸ್ಟ್ ಕರ್ನಾಟಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

ಜಗತ್ತು ಭಾರತವನ್ನು ಪ್ರಕಾಶಮಾನವಾದ ತಾಣವೆಂದು ( BRIGHT SPOT ) ಪರಿಗಣಿಸುತ್ತದೆ: ಇನ್ವೆಸ್ಟ್ ಕರ್ನಾಟಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಇಂದು ಬುಧವಾರ ಉದ್ಘಾಟನೆಗೊಂಡಿದ್ದು ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.

Global Investors Meet Banglore

ನಂತರ ಮಾತನಾಡಿದ ಅವರು, ಇಂದು ಭಾರತದ ಶಕ್ತಿ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಮಹಾಮಾರಿ ಕೋವಿಡ್ ಸಂಕಷ್ಟದಿಂದ ಇಡೀ ವಿಶ್ವವೇ ನಲುಗಿ ಹೋಗಿತ್ತು. ಅದನ್ನು ಭಾರತ ಸಮರ್ಥವಾಗಿ ಎದುರಿಸಿ ಇಂದು ಆರ್ಥಿಕತೆ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದೆ. ಇದಕ್ಕೆ ಭಾರತ ದೇಶದ ಅಪಾರ ಮಾನವ, ಪ್ರಕೃತಿ ಸಂಪನ್ಮೂಲ, ಇಲ್ಲಿನ ಸಂಸ್ಕೃತಿ, ತಂತ್ರಜ್ಞಾನ, ವಿಜ್ಞಾನವೇ ಕಾರಣ ಎಂದು ಹೇಳಿದ್ದಾರೆ.

ಭಾರತದ ಅರ್ಥವ್ಯವಸ್ಥೆ ದಿನೇದಿನೇ ಸುಧಾರಣೆಯಾಗುತ್ತಿದೆ. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಹೂಡಿಕೆಯಾಗುತ್ತಿದೆ ಎಂದರು.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದು, ಕರ್ನಾಟಕ ಅಪಾರ ಪ್ರಾಕೃತಿಕ ಸಂಪತ್ತು, ಆರ್ಥಿಕ, ವಿಜ್ಞಾನ, ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಕರ್ನಾಟಕ ಇಡೀ ಜಗತ್ತನೇ ಸೆಳೆದಿದೆ. ಕರ್ನಾಟಕದಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚುತ್ತಿದೆ. ಇದು ಸಂಪ್ರದಾಯ ಮತ್ತು ತಂತ್ರಜ್ಞಾನ ಎರಡೂ ಇರುವ ಸ್ಥಳ. ನಾವು ಪ್ರತಿಭೆ ಮತ್ತು ತಂತ್ರಜ್ಞಾನದ ಬಗ್ಗೆ ಮಾತನಾಡುವಾಗ, ಮೊದಲು ನೆನಪಿಗೆ ಬರುವುದು “ಬ್ರ್ಯಾಂಡ್ ಬೆಂಗಳೂರು ಎಂದು ಕರ್ನಾಟಕದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (GIM) ಪ್ರಧಾನ ಮಂತ್ರಿ ಶ್ಲಾಘಿಸಿದರು. ಬ್ರ್ಯಾಂಡ್ ಬೆಂಗಳೂರು ಜಗತ್ ಪ್ರಸಿದ್ಧವಾಗಿದೆ. ಕರ್ನಾಟಕ ಸಂಸ್ಕೃತಿ ಜೊತೆ ತಂತ್ರಜ್ಞಾನವೂ ಇದೆ. ಭಾರತದ ಅಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆ ಸಾಕಷ್ಟಿದೆ. ಇಲ್ಲಿ ಹೂಡಿಕೆ ಮಾಡುವುದರಿಂದ ಸಾವಿರಾರು, ಲಕ್ಷಾಂತರ ಜನರಿಗೆ ಉದ್ಯೋಗ ದೊರಕುವುದಲ್ಲದೆ ರಾಜ್ಯದ, ದೇಶದ ಅರ್ಥವ್ಯವಸ್ಥೆ ಅಭಿವೃದ್ಧಿಯಾಗುತ್ತದೆ. ಇದು ಜಾಗತಿಕ ಬಿಕ್ಕಟ್ಟಿನ ಸಮಯವಾಗಿದ್ದರೂ, ಪ್ರಪಂಚದಾದ್ಯಂತದ ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು ಭಾರತವನ್ನು ಭರವಸೆಯ ತಾಣವೆಂದು ಬಣ್ಣಿಸುತ್ತಿದ್ದಾರೆ.

ನಮ್ಮ ಬೆಂಗಳೂರಿಗೆ ಸ್ವಾಗತ: ಮಾತಿನ ಆರಂಭದಲ್ಲಿ ಪ್ರಧಾನಿ ಮೋದಿ, ವಿಶ್ವದ ಎಲ್ಲ ಮೂಲೆ ಮೂಲೆಗಳಿಂದ ಬಂದಿರುವ ಹೂಡಿಕೆದಾರರೇ ‘ವೆಲ್​​ಕಂ ಟು ಇಂಡಿಯಾ, ವೆಲ್​ಕಂ ಟು ನಮ್ಮ ಕರ್ನಾಟಕ, ವೆಲ್​ಕಂ ಟು ನಮ್ಮ ಬೆಂಗಳೂರು. ನಿನ್ನೆಯಷ್ಟೇ ಕರ್ನಾಟಕದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಎಲ್ಲ ಕನ್ನಡಿಗರಿಗೂ ನನ್ನ ಅಭಿನಂದನೆಗಳು ಎಂದರು.

ದೇಶದ ಆರ್ಥಿಕತೆಯಲ್ಲಿ ಕರ್ನಾಟಕದ ಕೊಡುಗೆಯೂ ಸಾಕಷ್ಟಿದೆ ಎಂದು ಮೋದಿ ಹೇಳಿದರು. ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೂ ಸಾಕಷ್ಟು ಶ್ರಮಿಸಲಾಗಿದೆ. ಕಾರ್ಪೊರೇಟ್ ತೆರಿಗೆ ಕಡಿತಕ್ಕೂ ಕ್ರಮ ಕೈಗೊಳ್ಳಲಾಗಿದೆ. ಪರಿಣಾಮವಾಗಿ ಉತ್ಪಾದನೆ ಕ್ಷೇತ್ರದಲ್ಲಿ ದೇಶವು ಶೀಘ್ರ ಬೆಳವಣಿಗೆ ಸಾಧಿಸುತ್ತಿದೆ. ಮುಖ್ಯವಾಗಿ ಇದು ಜಾಗತಿಕ ಬಿಕ್ಕಟ್ಟಿನ ಸಂದರ್ಭವಾಗಿದೆ. ವಿಶ್ವದಾದ್ಯಂತ ಎಲ್ಲ ಅರ್ಥಶಾಸ್ತ್ರಜ್ಞರು, ತಂತ್ರಜ್ಞರು ಭಾರತವು ಉತ್ತಮ ಸ್ಥಾನದಲ್ಲಿದೆ ಎಂದು ಹೇಳುತ್ತಿದ್ದಾರೆ. ಆರ್ಥಿಕತೆಯನ್ನು ಸಶಕ್ತಗೊಳಿಸಲು ಬೇಕಾದ ಎಲ್ಲ ಮೂಲಭೂತ ಕೆಲಸಕಾರ್ಯಗಳನ್ನು ನಾವು ಮಾಡುತ್ತಿದ್ದೇವೆ. ಸಹಿ ಮಾಡಲಾದ ಮುಕ್ತ ವ್ಯಾಪಾರ ಒಪ್ಪಂದಗಳು ನಮ್ಮ ಸನ್ನದ್ಧತೆಯ ಒಂದು ನೋಟವನ್ನು ಜಗತ್ತಿಗೆ ನೀಡುತ್ತಿವೆ ಎಂದು ಪ್ರಧಾನಿ ಹೇಳಿದರು.

ಹೂಡಿಕೆದಾರರನ್ನು ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಿದ್ದೇವೆ: ನಾವು ನಮ್ಮ ಹೂಡಿಕೆದಾರರನ್ನು ರೆಡ್ ಟ್ಯಾಪಿಸಂನಿಂದ ಮುಕ್ತಗೊಳಿಸಿದ್ದೇವೆ, ಅವರಿಗೆ ಅವಕಾಶಗಳ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಿದ್ದೇವೆ. ಅನೇಕ ಕ್ಷೇತ್ರಗಳಲ್ಲಿ ಹೂಡಿಕೆಗೆ ಉತ್ತೇಜನ ನೀಡಿದ್ದೇವೆ. ಈ ಹಿಂದೆ ಖಾಸಗಿ ಕ್ಷೇತ್ರದವರಿಗೆ ಹೂಡಿಕೆಗೆ ಅವಕಾಶವೇ ಇರದಿದ್ದ ರಕ್ಷಣೆ, ಡ್ರೋನ್, ಬಾಹ್ಯಾಕಾಶ, ಜಿಯೋಸ್ಪೇಷಿಯಲ್ ಮ್ಯಾಪಿಂಗ್​ನಂಥ ಕ್ಷೇತ್ರಗಳಲ್ಲೂ ಹೂಡಿಕೆಗೆ ಮುಕ್ತ ಅವಕಾಶ ನೀಡಿದ್ದೇವೆ ಎಂದು ಮೋದಿ ಹೇಳಿದರು.

ಭಾರತದ ಯುವ ಸಮೂಹದ ಪ್ರತಿಭೆ ನೋಡಿ ಜಗತ್ತೇ ಅಚ್ಚರಿ ಪಟ್ಟಿದೆ. ದೇಶದಲ್ಲಿ ಎಂಟು ವರ್ಷಗಳಲ್ಲಿ 80 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್​ಗಳ ಸ್ಥಾಪನೆಯಾಗಿದೆ. ಸ್ಟಾರ್ಟಪ್ ಉದ್ಯಮ ವೇಗವಾಗಿ ಅಭಿವೃದ್ಧಿ ಆಗುತ್ತಿದೆ. ಕೃಷಿ ವಲಯದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದೆ. ತಂತ್ರಜ್ಞಾನ ವಿವಿಗಳು, ಮ್ಯಾನೇಜ್‌ಮೆಂಟ್‌ ವಿವಿಗಳ ಸಂಖ್ಯೆ ಹೆಚ್ಚಿಸಲಾಗಿದೆ. ನಮ್ಮ ಉದ್ದೇಶ ಆರ್ಥಿಕತೆ, ಉತ್ಪಾದನೆ ಹೆಚ್ಚಿಸುವುದು ಮತ್ತು ಮಾನವ ಸಂಪನ್ಮೂಲದ ಸದ್ಬಳಕೆ ಮಾಡಿಕೊಳ್ಳುವುದಕ್ಕೆ ಆದ್ಯತೆ ನೀಡಲಾಗಿದೆ. ನಮ್ಮ ದೇಶ ಮೆಡಿಕಲ್ ಕಾಲೇಜುಗಳು, ಆಸ್ಪತ್ರೆಗಳ ನಿರ್ಮಾಣ ಮತ್ತು ಸೇವೆಗಳಲ್ಲಿ ಮುಂದಿದೆ. ಸ್ವಚ್ಚತಾ ಅಭಿಯಾನದಲ್ಲೂ ಮುಂದಿದ್ದೇವೆ. ಸ್ಮಾರ್ಟ್ ಶಾಲೆಗಳನ್ನೂ ತೆರೆಯಲಾಗುತ್ತಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಕ್ರಾಂತಿ‌ ನಡೆಯುತ್ತಿದೆ ಎಂದು ಮೋದಿ ಹೇಳಿದರು.

ಭಾರತದ ಅಮೃತ ಕಾಲ: ಇದು ಭಾರತದ ಪಾಲಿಗೆ ಅಮೃತ ಕಾಲವಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವು ‘ನವ ಭಾರತದ’ ಹೊಸ್ತಿಲಲ್ಲಿದ್ದೇವೆ. ಆರ್ಥಿಕತೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಭಾರತವು ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಯುತ್ತಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದ್ದು, ಯುಕವರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

ನಮ್ಮ ಕಾನೂನುಗಳನ್ನು ಉದ್ಯಮ ಸ್ನೇಹಿ ಮಾಡಬೇಕಿದೆ. ನವ ಭಾರತದ ನಿರ್ಮಾಣದ ಅಗತ್ಯ ಇದೆ. ಬ್ಯಾಂಕಿಂಗ್ ಸೇರಿ‌ ಹಲವು  ವಲಯಗಳಲ್ಲಿ ಸುಧಾರಣೆ ಆಗುತ್ತಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಕರೆನ್ಸಿ ತರಲಾಗುತ್ತಿದೆ. ಹಳೆಯ ಹಲವು ಕಾನೂನುಗಳನ್ನು ರದ್ದು ಮಾಡಲಾಗಿದೆ. ಕಾರ್ಪೊರೇಟ್ ತೆರಿಗೆ ಇಳಿಸಿದ್ದೇವೆ. ಎಫ್ ಡಿಐ ಹೂಡಿಕೆಗೆ ಹೊಸ ಅವಕಾಶಗಳನ್ನು ತೆರೆಯಲಾಗಿದೆ, ರಕ್ಷಣಾ ವಲಯದಲ್ಲೂ ಎಫ್ ಡಿಐಗೆ ಅವಕಾಶ ಕೊಡಲಾಗಿದೆ ಎಂದು ಅವರು ಹೇಳಿದರು.

ಡಬಲ್ ಎಂಜಿನ್ ಸರ್ಕಾರದಿಂದ ಉತ್ತಮ ಸಾಧನೆ; ಮೋದಿ ಬಣ್ಣನೆ
ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರವಿದ್ದು, ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ರಾಜ್ಯವಾಗಿದೆ. ಈ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರವೂ ಉತ್ತಮವಾಗಿ ಸಾಥ್ ನೀಡುತ್ತಿದೆ ಎಂದರು. 

ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ವಿವಿಧ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ದೆಶದಲ್ಲೇ ಮುಂಚೂಣಿಯಲ್ಲಿದೆ ಎಂದು ಹೇಳಿದರು.ಇಂದಿನಿಂದ ಮೂರು ದಿನಗಳ ಕಾಲ ಜಾಗತಿಕ ಹೂಡಿಕೆದಾರರ ಸಮಾವೇಶ ಮುಂದುವರಿಯಲಿದೆ

Share
WhatsApp
Follow by Email