ಬೆಳಗಾವಿ: ಗೋಕಾಕ ತಾಲೂಕಿನಲ್ಲಿ ಭೃಷ್ಟಾಚಾರ ಪ್ರಕರಣವೊಂದರಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದ್ದರೂ, ಪಂಚಾಯತ್ ರಾಜ್ ಇಲಾಖೆಯು ಯಾವುದೇ ಕ್ರಮ ಕೈಗೊಳ್ಳದೇ ಇರುವುದಕ್ಕೆ, ಲೋಕಾಯುಕ್ತರು ರಾಜ್ಯಪಾಲರಿಗೇ ಪತ್ರ ಬರೆದಿರುವ ಸಂಗತಿ ಬೆಳಕಿಗೆ ಬಂದಿದೆ.
ಗೋಕಾಕ ತಾಲೂಕಿನ ಮಮದಾಪೂರ ಪಂಜಾಯತಿ ಅಡಿಯಲ್ಲಿ ಬರುವ ಅಜ್ಜನಕಟ್ಟಿಯಲ್ಲಿ ಸರ್ಕಾರದಿಂದ ಕುಡಿಯುವ ನೀರಿನ ಯೋಜನೆ ಮಂಜೂರಾಗಿತ್ತು. ಆದರೆ ಕಾಮಗಾರಿಯನ್ನು ನಡೆಸದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಲ್ ತೆಗೆದಿದ್ದಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಜಯಗೌಡ ಸಿದಗೌಡ ಪಾಟೀಲ ಅವರು ಆರು ಮಂದಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಲೋಕಾಯುಕ್ತ ನ್ಯಾಯಮೂರ್ತಿ ಎನ್ ಆನಂದ ಅವರು ಕಳೆದ ತಿಂಗಳು ರಾಜ್ಯಪಾಲರಿಗೆ ಪತ್ರ ಬರೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ದೂರಿನ ಪ್ರಕಾರ ಅನುದಾನದ ದುರ್ಬಳಕೆ ನಡೆದಿರುವುದು ಲೋಕಾಯುಕ್ತ ತನಿಖೆಯಲ್ಲಿ ಸಾಬೀತಾಗಿತ್ತು. ಬಳಿಕ ಆರೋಪಿಗಳ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಲೋಕಾಯುಕ್ತರು ಪಂಚಾಯತ್ ರಾಜ್ ಇಲಾಖೆಗೆ ಪತ್ರ ಬರೆದಿದ್ದರು. ಅಲ್ಲದೆ, ಅವರಿಂದ 17.75 ಲಕ್ಷ ರೂಪಾಯಿಗಳನ್ನು ಭರಣಾ ಮಾಡಿಕೊಳ್ಳಬೇಕೆಂದು ಸೂಚಿಸಿದ್ದರು. ಆದರೆ ಪದೇ ಪದೇ ಜ್ಞಾಪನಾ ಪತ್ರಗಳನ್ನು ಕಳಿಸಿದರೂ, ಇಲಾಖೆಯಿಂದಾಗಲೀ ಅಥವಾ ಸರ್ಕಾರದಿಂದಾಗಲೇ ಆರೋಪಿಗಳ ವಿರುದ್ಧ ತಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ.
ಕರ್ನಾಟಕ ನೀರಾವರಿ ನಿಗಮದ ಕೌಜಲಗಿ ಉಪವಲಯದ ಸಹಾಯಕ ಅಭಿಯಂತರ ಮಹಾಲಿಂಗ ಸಿದರಾಯಿ, ರಾಮದುರ್ಗ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಪಾಟೀಲ, ಗ್ರಾ. ಪಂ. ಕಾರ್ಯದರ್ಶಿ ಮೋಹನ ಕಾಡಣ್ಣವರ, ಗ್ರಾ.ಪಂ. ಸದಸ್ಯೆ ಜಯಶ್ರೀ ಕೊಣ್ಣೂರ, ಗ್ರಾ.ಪಂ. ಮಾಜಿ ಅಧ್ಯಕ್ಷ ಸಿದ್ರಾಮ ಲಂಗೋಟಿ ಮತ್ತು ಮಕ್ಕಳಗೇರಿ ಗ್ರಾ.ಪಂ. ಕಾರ್ಯದರ್ಶಿ ಎಸ್.ಆರ್.ಜಮಖಂಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ಸರ್ಕಾರಕ್ಕೆ ಸೂಚಿಸಿದ್ದರು.