ಹಸಿದವನಿಗೆ ಅನ್ನ ನೀಡುವುದೇ ನಿಜವಾದ ಧರ್ಮ : ಎಸ್. ಐ. ಕುಂದಗೋಳ

ಮಹಾಲಿಂಗಪುರ : ಹಸಿದವನಿಗೆ ಅನ್ನ ನೀಡುವುದೇ ನಿಜವಾದ ಧರ್ಮ ಎಂಬ ಮಾತಿನಂತೆ ಕೊರೋನಾ ಕಬಂಧ ಬಾಹುವಿನಲ್ಲಿ ನಲುಗಿ ಹಸಿವಿನಿಂದ ಬಳಲುತ್ತಿರುವ ನಿರ್ಗತಿಕರಿಗೆ ಅನ್ನ ನೀಡುತ್ತಿರುವ ಸಮಾನ ಮನಸ್ಕ ಗೆಳೆಯರ ಬಳಗದ ಕಾರ್ಯ ಸ್ತುತ್ಯಾರ್ಹ ಎಂದು ಕೆಎಲ್ಇ ಪ್ರಾಂಶುಪಾಲ ಎಸ್. ಐ. ಕುಂದಗೋಳ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕಡುಬಡವರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಾನೇನು ಮಾಡಲಿ ಬಡವನಯ್ಯ ಎಂದು ಮನೆಯಲ್ಲೇ ಕೂಡದೇ ಧನಿಕರ ಮನ ಒಲಿಸಿ ಅವರಿಂದ ದೇಣಿಗೆ ಪಡೆದು ಅದನ್ನು ಹಸಿವಿನಿಂದ ಬಳಲುತ್ತಿರುವ ನಿರ್ಗತಿಕರಿಗೆ ಹಂಚುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದು ನೊಂದವರಿಗೆ ಆಸರೆಯಾಗಿ, ಉಳ್ಳವರಿಗೆ ಮಾದರಿಯಾಗಿದ್ದಾರೆ ಸ್ಥಳೀಯ ಪತ್ರಕರ್ತರು ಮತ್ತು ಗೆಳೆಯರ ಬಳಗ ಎಂದರು.
ಗೆಳೆಯರ ಬಳಗದ ಗೆಳೆಯರು ಕೊರೋನಾ ಹೊಡೆತಕ್ಕೆ ಸಿಕ್ಕು ಒಂದ್ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಬಡವರ ಬವಣೆಯನ್ನು ಕಂಡು ಮಮ್ಮಲ ಮರುಗಿ ಅವರಿಗೆ 2 ನೇ ಬಾರಿಗೆ ಸಹಾಯ ಮಾಡಲು ತೀರ್ಮಾನಿಸಿ ಊರಿನ ಸ್ಥಿತಿವಂತರನ್ನು ಕಂಡು ಅವರ ಮನವೊಲಿಸಿ ಅವರಿಂದ ದೇಣಿಗೆ ಪಡೆದು ನಗರದ ಎಲ್ಲಾ ಬಡಾವಣೆಗಳ ನಿರ್ಗತಿಕರನ್ನು ಪಟ್ಟಿಮಾಡಿ ಅವರ ಕುಟುಂಬದ ಒಂದು ವಾರದ ನಿರ್ವಹಣೆಗೆ ಬೇಕಾಗುವಷ್ಟು ಜೋಳ, ಅಕ್ಕಿ, ಗೋಧಿ,ಸೇಂಗಾ,ಬೇಳೆ, ರವ,ಸಕ್ಕರೆ, ಚಹಾ ಪುಡಿ, ಎಣ್ಣೆ ಮುಂತಾದ ಆಹಾರ ಪದಾರ್ಥಗಳನ್ನೊಳಗೊಂಡ ಕಿಟ್ ಸಿದ್ಧ ಪಡಿಸಿ ಬಡವರ ಮನೆ ಮನೆಗೂ ತೆರಳಿ ವಿತರಿಸಿ ಅವರ ಹಸಿವು ನೀಗಿಸಿ ಕಣ್ಣೀರೊರೆಸುವ ಪ್ರಯತ್ನ ಮಾಡಿದ್ದಾರೆ ಎಂದರು.
ಈ ಸಮಯದಲ್ಲಿ ಡಾ.ಎಂ.ಬಿ.ಪೂಜೆರಿ,ವೆAಕಣ್ಣ ಗೊಬ್ಬರದ,ಸಂಗಪ್ಪ ಲೋಣಿ,ಹಾಸೀಂ ಪೆಂಡಾರಿ,ಬಾಲಾಜಿ ಗೌಡ,ಚೇತನ ಕಲಾಲ,ಅನಂತಕುಮಾರ್ ಮನವಡೆ,ಮಲ್ಲಪ್ಪ, ಗೌಸ್ ಶೇಕ್, ವರದಿಗಾರರಾದ ನಾರನಗೌಡ ಉತ್ತಂಗಿ,ಶಿವಶAಕರ ಕಡಬಲ್ಲವರ,ಮೀರಾ ತಟಗಾರ,ಚಂದ್ರು ಕೋರಿ,ಸಂಜು ಮುನ್ನೋಳಿ, ಶಂಸುದ್ದೀನ್ ಜಮಾದಾರ್, ಶಬ್ಬೀರ್ ಜಮಾದಾರ್, ರಿಯಾಜ್ ಕಬಾಡಿ, ಅನಿಲ್ ಗೋಕಾಕ್ ಮುಂತಾದವರಿದ್ದರು.

Share
WhatsApp
Follow by Email