ಜಿಲ್ಲಾಧಿಕಾರಿಗಳಿಗೂ ಸೇರಿದಂತೆ ಕರೊನಾ ಸೈನಿಕರಿಗೆ ಪುಷ್ಪಾರ್ಚನೆ ಸಾರಿಗೆ ಸಂಸ್ಥೆಯಿoದ ಹೃದಯಸ್ಪರ್ಶಿ ಅಭಿನಂದನೆ

ಜಿಲ್ಲಾಧಿಕಾರಿಗಳಿಗೂ ಸೇರಿದಂತೆ ಕರೊನಾ ಸೈನಿಕರಿಗೆ ಪುಷ್ಪಾರ್ಚನೆ ಸಾರಿಗೆ ಸಂಸ್ಥೆಯಿoದ ಹೃದಯಸ್ಪರ್ಶಿ ಅಭಿನಂದನೆ

ಬೆಳಗಾವಿ : ದೇಶದ ಗಡಿಯನ್ನು ಸೈನಿಕರು ರಕ್ಷಿಸುವ ಹಾಗೆ ದೇಶದ ಒಳಗಡೆ ಮಹಾಮಾರಿ ಕೋವಿಡ್-19 ರೋಗವನ್ನು ನಿಯಂತ್ರಿಸುವುದರ ಜತೆಗೆ ಸಾರ್ವಜನಿಕರಿಗೆ ತುರ್ತು ಸೌಲಭ್ಯ ಒದಗಿಸಲು ಕಳೆದ ಐವತ್ತು ದಿನಗಳಿಂದ ಹಗಲಿರುಳು ಶ್ರಮಿಸುತ್ತಿರುವ ಸಾರಿಗೆ, ಆರೋಗ್ಯ, ಪೊಲೀಸ್, ಮಹಾನಗರ ಪಾಲಿಕೆಯ ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಇಂದು ಪುಷ್ಪಾರ್ಚನೆ ಮಾಡುವ ಮೂಲಕ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಯಿತು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಕರೊನಾ ಸೈನಿಕರಿಗೆ ಅಭಿನಂದನಾ ಸಮಾರಂಭ ಆಯೋಜಿಲಾಗಿತ್ತು.
ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಹಾಗೂ ಪೌರಕಾರ್ಮಿಕರಿಗೆ ಪುಷ್ಪಾರ್ಚನೆ ಮಾಡಿ ಅಭಿನಂದಿಸಲಾಯಿತು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೊಳನ್, ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ, ಜಿಲ್ಲಾಪಂಚಾಯತ ಸಿ.ಇ.ಒ ಡಾ. ರಾಜೇಂದ್ರ ಕೆ.ವಿ, ಮಾಹಾನಗರ ಪಾಲಿಕೆಯ ಆಯುಕ್ತ ಜಗದೀಶ್ ಕೆ.ಎಚ್, ಡಿ.ಸಿ.ಪಿ ಯಶೋಧಾ ಒಂಟಗುಡಿ ಸೇರಿದಂತೆ ಅನೇಕ ಅಧಿಕಾರಿಗಳು ಕರೊನಾ ಸೈನಿಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಪುಷ್ಪಾರ್ಚನೆ ಮಾಡಿದರು.
ಜಿಲ್ಲಾಧಿಕಾರಿಗಳಿಗೂ ಪುಷ್ಪಾರ್ಚನೆ…
ಇದೇ ಸಂದರ್ಭದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಅಹರ್ನಿಶಿ ದುಡಿಯುತ್ತಿರುವ ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ಇತರೆ ಹಿರಿಯ ಅಧಿಕಾರಿಗಳು ಒಟ್ಟಾಗಿ ಜಿಲ್ಲಾಧಿಕಾರಿಗಳಿಗೂ ಪುಷ್ಪಾರ್ಚನೆ ಮಾಡಿದ್ದು, ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಈ ವೇಳೆ ಮಾತನಾಡಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರು, ಬೇರೆ ಬೇರೆ ಸ್ಥಳಗಳಿಂದ ಬಂದಿದ್ದ ಕಾರ್ಮಿಕರನ್ನು ಅವರ ಮನೆಗಳಿಗೆ ಕಳುಹಿಸಿ ಕೊಡಲು ಎಲ್ಲರು ಜವಾಬ್ದಾರಿಯಿಂದ ಉತ್ತಮವಾದ ಕೆಲಸ ಮಾಡದ್ದಾರೆ ಎಂದು ಹೇಳಿದರು.
ಪ್ರಾಥಮಿಕವಾಗಿ ಒಂದು ಜಿಲ್ಲೆಯಿಂದ ಮತ್ತೋಂದು ಜಿಲ್ಲೆಗೆ ಕಾರ್ಮಿಕರನ್ನು ಕಳುಹಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಅನ್ಯ ರಾಜ್ಯಗಳಿಂದ ಬಂದಿರುವ ಕಾರ್ಮಿಕರನ್ನು ಮರಳಿ ಅವರ ರಾಜ್ಯಗಳಿಗೆ ಕಳುಹಿಸಲು ಕೆಲಸ ಮಾಡಬೇಕು ಎಂದರು.
ಕಾರ್ಮಿಕರನ್ನು ಅವರ ಮನೆಗಳಿಗೆ ಕಳುಹಿಸುವಾಗ ಎಲ್ಲರು ಸರ್ಕಾರದ ಮಾರ್ಗಸೂಚಿ ಪಾಲಿಸಿ ನಮ್ಮ ಜೊತೆ ಕೈ ಜೋಡಿಸಬೇಕು ಎಂದು ರಾಜೇಂದ್ರ ಚೋಳನ್ ಅವರು ಕರೆ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ಅವರು, ಕರೊನಾ ವೈರಸ್ ನಿಂದಾಗಿ ಎಲ್ಲರಿಗೂ ಭಯದ ಜತೆಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಆದರೂ ಸಹ ಎಲ್ಲರು ಸಾಮಾಜಿಕ ಕಾಳಜಿಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕೊರೊನಾ ವೈರಸ್ ಜಗತ್ತಿನ ಇತರೆ ದೇಶಗಳಲ್ಲಿ ಕಂಡು ಬಂದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ನೀಡಿದ ಮಾರ್ಗಸೂಚಿ ಅನುಸಾರವಾಗಿ ಎಲ್ಲಾ ಕರೊನಾ ಸೈನಿಕರು ನೆರವು ನೀಡಿ ಕೋವಿಡ್-19 ರೋಗವನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯತಿ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆಯು ಸೇರಿದಂತೆ ಇತರೆ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಕರೊನಾ ರೋಗದ ನಿಯಂತ್ರಣಕ್ಕಾಗಿ ತಮ್ಮ ಪ್ರಾಣದ ಹಂಗು ತೊರೆದು ಶ್ರಮಿಸುತ್ತಿದ್ದಾರೆ.
ಕಾರ್ಮಿಕರನ್ನು ತಮ್ಮ ತಮ್ಮ ಮನೆಗಳಿಗೆ ಕಳುಹಿಸಲು ಎಲ್ಲರೂ ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜೇಂದ್ರ ಕೆ. ವಿ. ಮಾತನಾಡಿ, ಎಷ್ಟೇ ಸಮಸ್ಯೆ ಇದ್ದರೂ ಸಾಮಾಜಿಕ ಜವಾಬ್ದಾರಿಯನ್ನು ಮನಗಂಡು ತಮ್ಮ ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ಕರೊನಾ ಸೈನಿಕರು ನಿಭಾಯಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಕರೋನಾ ಸೋಂಕಿತರು ಇರುವ ಪ್ರದೇಶಗಳಲ್ಲಿಯೂ ಕೂಡಾ ಹಿಂಜರಿಯದೆ ಎಲ್ಲರೂ ಕರೊನಾ ಸೈನಿಕರಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ನಾವು ನಮ್ಮನ್ನು ನಾವು ರಕ್ಷಣೆ ಮಾಡುವುದರ ಜತೆಗೆ ಸಮಾಜದ ರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.
ವಾಯವ್ಯ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಎಂ.ಮುoಜಿ ನೇತೃತ್ವದಲ್ಲಿ ಅಭಿನಂದನಾ ಸಮಾರಂಭ ನಡೆಯಿತು.ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
Share
WhatsApp
Follow by Email