ಕರ್ನಾಟಕದ ಭೂಪಟದಲ್ಲಿ ವಿಜಯನಗರ ಜಿಲ್ಲೆ ಉಗಮ, ನವಂಬರ್ 1ರಂದು ಘೋಷಣೆ

ಕರ್ನಾಟಕದ ಭೂಪಟದಲ್ಲಿ ವಿಜಯನಗರ ಜಿಲ್ಲೆ ಉಗಮ, ನವಂಬರ್ 1ರಂದು ಘೋಷಣೆ

ಬೆಂಗಳೂರು,ಸೆ.20 : ರಾಜ್ಯದ ನೂತನ 31 ನೇ ಜಿಲ್ಲೆಯಾಗಿ ವಿಜಯನಗರ ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಗಣಿ ಜಿಲ್ಲೆ ಬಳ್ಳಾರಿಯನ್ನು ವಿಭಜಿಸಿ ಹೊಸದಾಗಿ ವಿಜಯನಗರ ( ಹಿಂದಿನ ಹೊಸಪೇಟೆ) ಜಿಲ್ಲೆ ಅಧಿಕೃತವಾಗಿ ಘೋಷಣೆಯಾಗಲಿದೆ.

ವಿಜಯನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂಬ ಈ ಭಾಗದ ಬಹುದಿನಗಳ ಬೇಡಿಕೆಗೆ ಸರ್ಕಾರ ಕೊನೆಗೂ ಅಸ್ತು ಎಂದಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿದ್ಯುಕ್ತವಾಗಿ ಘೋಷಣೆಯಾಗಲಿದೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನಾಚರಣೆಯಂದು ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬರಲಿದ್ದು, ಈಗಾಗಲೇ ಸರ್ಕಾರದ ವತಿಯಿಂದ ಪ್ರಕ್ರಿಯೆ ಪೂರ್ಣಗೊಂಡಿದೆ.

ಸಾರ್ವಜನಿಕ ಆಡಳಿತ ಹಿತ ದೃಷ್ಟಿಯಿಂದ ಪ್ರಸ್ತುತ ಬಳ್ಳಾರಿ ಜಿಲ್ಲೆಯ 11 ತಾಲ್ಲೂಕುಗಳಲ್ಲಿ ಮೂಲ ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಕುರುಗೋಡು, ಸಿರಗುಪ್ಪ, ಸಂಡೂರು ಮತ್ತು ಕೂಡ್ಲಿಗಿ ಈ ತಾಲೂಕುಗಳನ್ನು ಹೊರತುಪಡಿಸಿ ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ ಮತ್ತು ಹರಪನಹಳ್ಳಿ ಸೇರಿಸಿ ಹೊಸಪೇಟೆ ಪಟ್ಟಣವನ್ನು ಕೇಂದ್ರವನ್ನಾಗಿಸಿ ನೂತನ ವಿಜಯನಗರ ಜಿಲ್ಲೆಯನ್ನು ರಚಿಸುವುದು ಅಗತ್ಯವಾಗಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆ ರಚನೆಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಈಗಾಗಲೇ ವಿಜಯನಗರ ಜಿಲ್ಲೆ ರಚಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲೆಯ ವಿಷಯವನ್ನು ಮಂಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಪ್ರಸ್ತುತ ಬಳ್ಳಾರಿ ಜಿಲ್ಲೆಯು ತುಂಬಾ ವಿಸ್ತಾರವಾಗಿದ್ದು,ಒಟ್ಟು 11 ಕಂದಾಯ ತಾಲ್ಲೂಕುಗಳನ್ನು ಹಾಗೂ 3 ಕಂದಾಯ ಉಪ ವಿಭಾಗಗಳನ್ನು ಒಳಗೊಂಡಿರುವ ಅತಿ ದೊಡ್ಡ ಜಿಲ್ಲೆ ಎನಿಸಿಕೊಂಡಿದೆ.

ಜಿಲ್ಲೆಯ ಕೆಲವೊಂದು ಪ್ರದೇಶಗಳು ಜಿಲ್ಲಾ ಕೇಂದ್ರ ಸ್ಥಾನದಿಂದ 200 ಕಿ.ಮೀ. ಅಂತರದಲ್ಲಿರುವುದರಿಂದ ಈ ಭಾಗದ ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರೆಲ್ಲರಿಗೂ ತಮ್ಮ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ತಲುಪುವುದು ತುಂಬಾ ದುಸ್ತರವಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಹೊಸಪೇಟೆಯನ್ನು ವಿಜಯನಗರ ಜಿಲ್ಲೆ ಎಂದು ಘೋಷಣೆ ಮಾಡಲು ಬಿಎಸ್‍ವೈ 2019 ಸೆ.19ರಲ್ಲಿ ಸೂಚಿಸಿದ್ದರು. ಆದರೆ ಒಂದು ವರ್ಷ ಕಳೆದರೂ ವಿಜಯನಗರ ಜಿಲ್ಲೆ ರಚನೆ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಈ ಘೋಷಣೆ ಕೇವಲ ಉಪ ಚುನಾವಣೆಗೆ ಸೀಮಿತವಾಗಿದೆ ಎಂಬ ಮಾತು ಕೇಳಿ ಬರುತ್ತಿತ್ತು.

ವಿಜಯನಗರ ಜಿಲ್ಲೆ ಮಾಡುವಂತೆ ಆಗ್ರಹಿಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಆನಂದ್ ಸಿಂಗ್ ಅವರು ಬಿಜೆಪಿಯಿಂದ ಉಪಚುನಾವಣೆ ಎದುರಿಸುತ್ತಾರೆ. ಬಳಿಕ ಅವರು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ವಿರುದ್ಧ ಜಯ ಗಳಿಸಿದ್ದು ಈಗ ಇತಿಹಾಸ. ವಿಜಯನಗರ ಜಿಲ್ಲೆ ಮಾಡಬೇಕು. ಜಿಂದಾಲ್‍ಗೆ ಸರ್ಕಾರಿ ಭೂಮಿಯನ್ನು ಪರಭಾರೆ ಮಾಡಬಾರದು. ಅಲ್ಲದೇ, ಹೊಸಪೇಟೆಯಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಾಗಿತ್ತು.

ಜಿಂದಾಲ್ ಪರಭಾರೆ ವಿಷಯ ಕುರಿತು ಆನಂದ ಸಿಂಗ್ ಈವರೆಗೂ ಮಾತನಾಡಿಲ್ಲ. ಏತ ನೀರಾವರಿಗೆ ಅನುದಾನ ತರಲು ಯಶಸ್ವಿಯಾಗಿದ್ದಾರೆ. ಆದರೆ ಯೋಜನೆ ಅನುಷ್ಠಾನದ ಕುರಿತು ಆನಂದ ಸಿಂಗ್ ಅವರೇ ತಿಳಿಸಬೇಕಾಗಿದೆ.
Share
WhatsApp
Follow by Email