ಮೈಸೂರು : ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಪಾಲಿಕೆ ಆಯುಕ್ತೆ ಶಿಲ್ಪನಾಗ್ ನಡುವಿನ ಸಂಘರ್ಷ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ರಾಜೀನಾಮೆ ನೀಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಆಗ್ರಹಿಸಿದರು.
ಇಂದು ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಅವರು ಇದೊಂದು ದುರಾದೃಷ್ಟಕರ ಬೆಳವಣಿಗೆ. ಮೈಸೂರಿಗೆ ಅದರದ್ದೇ ಆದ ಹೆಸರಿದೆ. ಇವತ್ತು ಮೈಸೂರಿನ ಜನತೆ ಬಡವಾಗಿದ್ದಾರೆ. ಬೆಂಗಳೂರು ಬಿಟ್ಟರೆ ಮೈಸೂರಿನಲ್ಲಿ ಹೆಚ್ಚಿನ ಪ್ರಕರಣ ಬರುತ್ತಿವೆ. ಆಡಳಿತ ನಿರ್ವಹಣೆಯಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಂಡು ಕೆಲಸ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಬಿಜೆಪಿ ಶಾಸಕರು, ಉಸ್ತುವಾರಿ ಸಚಿವರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನನ್ನ ವ್ಯಾಪ್ತಿಯನ್ನು ಮೀರಿ ಹೋಗಿದೆ, ನಾನು ಅಸಹಾಯಕನಾಗಿದ್ದೇನೆ ಎಂಬ ಉಸ್ತುವಾರಿ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿ ನೀವು ಅಧಿಕಾರ ನಡೆಸಲು ಅಸಮರ್ಥರಾಗಿದ್ದೀರಿ. ಕೂಡಲೇ ರಾಜೀನಾಮೆ ನೀಡಿ. ನಿಮ್ಮಲ್ಲಿ ಅಸಹಾಯಕತೆ ಅರಾಜಕತೆ ಕಾಣುತ್ತಿದೆ. ನೀವು ನಿಯಂತ್ರಣ ಮಾಡೋಕೆ ಆಗಿಲ್ಲ ಅಂದರೆ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ. ಯತ್ನಾಳ್ ಅವರೇ ಆರೋಪ ಮಾಡಿದ್ದಾರೆ. ಜವಾಬ್ದಾರಿ ಮರೆತು, ಭ್ರಷ್ಟಾಚಾರ ನಡೆಯುತ್ತಿದೆ. ಮೈಸೂರಿನಲ್ಲಿ ಕೋವಿಡ್ ಸ್ಕ್ಯಾಂಡಲ್ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.