ರಾಯಚೂರು: ರಾಯಚೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಬಡವರಿಗೆ ಸರ್ಕಾರ ಕಡಿಮೆ ವೆಚ್ಚದಲ್ಲಿ ಸುಸಜ್ಜಿತ ಮನೆಗಳನ್ನು ಒದಗಿಸುತ್ತಿದೆ. ಅರ್ಹ ಫಲಾನುಭವಿಗಳು ಈ ಅವಕಾಶವನ್ನು ತಪ್ಪದೆ ಬಳಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತ ಜುಬೀನ್ ಮೊಹಪಾತ್ರ ಅವರು ತಿಳಿಸಿದ್ದಾರೆ.
ಆಗಸ್ಟ್ 20ರಂದು ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿ ಆವಾಸ್ ಯೋಜನೆ (ಎಚ್‌ಪಿಆರ್ ಡಿ ಉಪ ಘಟಕ) ಸಂಬಂಧಿತ ಸಭೆಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ 2,419 ಮನೆಗಳಿಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ಈಗಾಗಲೇ 578 ಜನ ಅರ್ಜಿದಾರರು ನೋಂದಾಯಿಸಿದ್ದು, ಇನ್ನೂ 754 ಮನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳು ಹಾಗೂ ಸ್ವಚ್ಛತಾ ವಾಹನಗಳ ಮೂಲಕ ವ್ಯಾಪಕ ಪ್ರಚಾರ ಮಾಡಲು ಸೂಚನೆ ನೀಡಲಾಯಿತು.
ವಾಲ್ಮೀಕಿ ಸಂಘದ ಎನ್. ರಘುವೀರ ನಾಯಕ ಅವರು, ಮುಂಗಡ ಪಾವತಿಯನ್ನು ಕಂತುಗಳ ರೂಪದಲ್ಲಿ ವಸೂಲಿಸಿದರೆ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಆಡಳಿತ ಉಪ ಆಯುಕ್ತ ಸಂತೋಷ್ ರಾಣಿ, ಅಧಿಕಾರಿಗಳಾದ ಹಂಪಮ್ಮ, ಉದಯಕುಮಾರ, ನರಸಪ್ಪ ಪರಶಪ್ಪ ಜಾಲದಾರ್ ಮತ್ತು ಇತರರು ಉಪಸ್ಥಿತರಿದ್ದರು.
