ಮೈಸೂರು,ಜೂ.5:- ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಸಂಪೂರ್ಣ ಕ್ರಾಂತಿಗೆ ಕರೆ ನೀಡಿದ ದಿನವಾದ ಇಂದು ಮೈಸೂರು ಜಲದರ್ಶಿನಿ ಬಳಿ ಸಂಸದ ಪ್ರತಾಪ್ ಸಿಂಹ ಕಛೇರಿಯ ಎದುರು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಮಸೂದೆ ವಾಪಸಾತಿಗೆ ಒತ್ತಾಯಿಸಿ ರೈತ ವಿರೋಧಿ ಮೂರು ಕೃಷಿ ಮಸೂದೆಗಳ ಪ್ರತಿಯನ್ನು ಸುಟ್ಟು ವಿಶೇಷವಾಗಿ ಆಚರಣೆ ಮಾಡಿದರು.
ಈ ಸಂದರ್ಭ ಮಾತನಾಡಿದ ರೈತ ಸಂಘದ ಮುಖಂಡರು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಸಂಪೂರ್ಣ ಕ್ರಾಂತಿಗೆ ಕರೆ ನೀಡಿದ ದಿನವನ್ನು ವಿಶಿಷ್ಟವಾಗಿ ಆಚರಿಸಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿತ್ತು. ಅದರಂತೆ ಇಂದು ನಾವು ದುಷ್ಟ ಸರ್ಕಾರವಾದ ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಮಸೂದೆಗಳ ಪ್ರತಿಗಳನ್ನು ರಾಜ್ಯದ ಬಿಜೆಪಿ ಸಂಸದರು ಮತ್ತು ಶಾಸಕರ ಕಛೇರಿಗಳ ಮುಂದೆ ಸುಟ್ಟು ವಿಶಿಷ್ಟವಾಗಿ ಆಚರಿಸುತ್ತಿದ್ದೇವೆ ಎಂದರು.
ರೈತ ಕೃಷಿ ವಲಯವನ್ನು ಖಾಸಗಿಯವರಿಗೆ ವಹಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದ ಮುಖಂಡರು ತಿದ್ದುಪಡಿ ಕಾಯ್ದೆ ವಾಪಸ್ ಆಗಲಿ, ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯಿದೆ ವಾಪಸ್ ಆಗಲಿ, ರೈತ ವಿರೋಧ ಕಾಯಿದೆ ಜಾರಿಗೆ ತಂದ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಪಿ.ಮರಂಕಯ್ಯ, ಹೊಸಕೋಟೆ ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.