ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಧರ್ಮಸ್ಥಳದ ವಿಷಯದಲ್ಲಿ ಸ್ಪಷ್ಟನೆ ನೀಡಿದ್ದು, “ನಾನು ವೈಯಕ್ತಿಕ ಅನುಭವದ ಆಧಾರದ ಮೇಲೆ ಹೇಳಿಕೆ ನೀಡಿದ್ದೇನೆ. ಆದರೆ ಸರ್ಕಾರದ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ನನ್ನದು ಅಲ್ಲ. ತನಿಖೆ ಸಂಪೂರ್ಣ ಕಾನೂನು ಪ್ರಕಾರ ನಡೆಯುತ್ತದೆ” ಎಂದು ಹೇಳಿದರು.
ಅವರು ಮುಂದುವರಿದು, “ಬಿಜೆಪಿ ಶಾಸಕರು ಸದನದಲ್ಲಿ ಮಾತನಾಡುವ ಮೊದಲು ನಮ್ಮ ಶಾಸಕರು ಧರ್ಮಸ್ಥಳದ ಪರವಾಗಿ ಶಾಸಕಾಂಗ ಸಭೆಯಲ್ಲಿ ಧ್ವನಿ ಎತ್ತಿದ್ದರು. ಅಲ್ಲದೆ ಸ್ಥಳೀಯ ಕಾಂಗ್ರೆಸ್ ನಾಯಕರು ಆರಂಭದಲ್ಲೇ ಬಂದು ನಮ್ಮನ್ನು ಭೇಟಿ ಮಾಡಿ ಚರ್ಚಿಸಿದ್ದರು. ಮುಖ್ಯಮಂತ್ರಿಗಳೂ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ” ಎಂದರು.
ತಪ್ಪು ಸಂದೇಶ ಹರಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಡಿ.ಕೆ. ಶಿವಕುಮಾರ, “ಅಂತಹವರನ್ನು ಬೆಂಬಲಿಸುತ್ತಿರುವವನು ಮುಖ್ಯಮಂತ್ರಿಗಳನ್ನೇ ಕೊಲೆಗಾರ ಎಂದಿದ್ದಾನೆ. ಅದರ ಬಗ್ಗೆ ನಮ್ಮ ಬಳಿ ಸಂಪೂರ್ಣ ಮಾಹಿತಿ ಇದೆ” ಎಂದು ಹೇಳಿದರು.
ಗುಂಡಿ ಅಗೆಯುವ ವಿಚಾರ ಕೇಳಿದಾಗ ಉಪ ಮುಖ್ಯಮಂತ್ರಿ ಶಿವಕುಮಾರ ಪ್ರತಿಕ್ರಿಯೆ ನೀಡಿದ್ದು, “ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಇದಕ್ಕೆ ಗೃಹಸಚಿವರಿದ್ದಾರೆ, ಅವರು ನಿರ್ಧಾರ ಕೈಗೊಳ್ಳುತ್ತಾರೆ. ನಮಗೂ ನಮ್ಮ ಮೂಲಗಳಿಂದ ಮಾಹಿತಿ ಬರುತ್ತದೆ. ಎಲ್ಲವನ್ನೂ ಪೊಲೀಸರಿಂದ ಮಾತ್ರ ಪಡೆಯಬೇಕೆಂದಿಲ್ಲ” ಎಂದು ಸ್ಪಷ್ಟಪಡಿಸಿದರು.
