ಬೈಲಹೊಂಗಲದಲ್ಲಿ ಕಡಿಮೆ ಜನ ಸಂಖ್ಯೆಯಲ್ಲಿ ಸಂತೆ ಮಾಡಲು ತಹಶೀಲ್ದಾರ್ ಪರವಾಣಿಗೆ

ಬೈಲಹೊಂಗಲ : ಕೊರೊನಾ ವೈರಸ್ ಹರಡದಂತೆ, ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ತಾಲೂಕಾಡಳಿತ ಪದೇಪದೇ ಅಧಿಕಾರಿಗಳ ಸಭೆ ಕರೆದು, ಜನರಲ್ಲಿ ಜಾಗೃತಿ ಮೂಡಿಸಿ, ಸಂತೆ, ಸಮಾರಂಭ ಮಾಡಬಾರದೆಂದು ತಹಶೀಲ್ದಾರ ಡಾ.ದೊಡ್ಡಪ್ಪ ಹೂಗಾರ ಆದೇಶ ಹೊರಡಿಸಿದ್ದರೂ ವ್ಯಾಪಾರಸ್ಥರು ಮಾತ್ರ ನಮಗೆನೂ ಸಂಬoಧವಿಲ್ಲ ಎನ್ನುವಂತೆ ಪಟ್ಟಣದ ಶುಕ್ರವಾರ ಸಂತೆಯಲ್ಲಿ ಪಾಲ್ಗೊಂಡು ಪ್ರತಿವಾರದಂತೆ ವ್ಯಾಪಾರ ನಡೆಸಿದರು.

ಬೈಲಹೊಂಗಲ ತಾಲೂಕಿನಲ್ಲಿಯೇ ಶುಕ್ರವಾರದ ಸಂತೆ ದೊಡ್ಡದು. ಇಲ್ಲಿ ಗ್ರಾಮೀಣ ಭಾಗದ ಸಾವಿರಾರು ಜನರು ಆಗಮಿಸಿ ಕಾಯಿಪಲ್ಲೆ, ಸ್ಟೇಶನರಿ, ತಿಂಡಿ-ತಿನಿಸು, ಕಿರಾಣಿ ಸೇರಿದಂತೆ ನಾನಾ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಪ್ರತಿ ಶುಕ್ರವಾರ ೮ರಿಂದ ೧೦ಸಾವಿರ ಜನಸಂಖ್ಯೆ ಸಂತೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಶುಕ್ರವಾರ ಸಂತೆಯಲ್ಲಿ ಸುಮಾರು ೨ರಿಂದ ೩ಸಾವಿರ ಜನರು ಪಾಲ್ಗೊಂಡಿದ್ದರು.

ಸಂಜೆ ಕೊರೊನಾ ಮುಂಜಾಗ್ರತಾ ಕ್ರಮದ ಬಗ್ಗೆ ಪುರಸಭೆ ಅಧಿಕಾರಿಗಳು ವ್ಯಾಪಾರಸ್ಥರಿಗೆ ತಿಳಿ ಹೇಳಿದರು. ಸಾರ್ವಜನಿಕರಿಗೆ ಕೊರೊನಾ ವೈರಸ್ ಹರಡಬಾರದೆಂಬ ಉದ್ಧೇಶದಿಂದ ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಿದ್ಧನ್ನವರ ಜನರಿಗೆ ಮುಂಜಾಗೃತಾ ಕ್ರಮಗಳ ಬಗ್ಗೆ ಹೇಳಿದ್ದಾರೆ.

ಬೈಲಹೊಂಗಲದಲ್ಲಿ ಕೊರೊನಾ ಇಲ್ಲ:
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕೊರೊನಾ ವೈರಸ್ ಪ್ರಕರಣ ಕಂಡು ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ವೈರಸ್ ಬರದಂತೆ ಜಾಗೃತಿವಹಿಸಲಾಗುತ್ತಿದೆ. ಕೊರೊನಾ ವೈರಸ್ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ತಾಲೂಕಾ ಮಟ್ಟದ ನಾನಾ ಇಲಾಖೆ ಅಧಿಕಾರಿಗಳಿಗೆ ತಹಶೀಲ್ದಾರ ಲಿಖಿತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಬಾಕ್ಸ್ ನ್ಯೂಸ್ :
ನಮಗೆ ಹಾಲು, ಕಾಯಿಪಲ್ಲೆ ಬೇಕು ಸರ್, ಪೂರ್ಣ ಪ್ರಮಾಣದಲ್ಲಿ ಸಂತೆ ರದ್ದುಗೊಳಿಸಬೇಡಿ ಎಂದು ಸಾರ್ವಜಕರು ವಿನಂತಿ ಮಾಡಿದ್ದರು. ಅದಕ್ಕಾಗಿ ನಾನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ, ಕಡಿಮೆ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಸಂತೆಯಾಗಲಿ ಎಂದು ಡಿಸಿ ಸಾಹೇಬ್ರು ಹೇಳಿದರು. ಅದರಂತೆ ಜನರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ವ್ಯಾಪಾರಸ್ಥರಿಗೆ ಸಂತೆ ನಡೆಸಲು ಪರವಾಣಿಗೆ ನೀಡಿದ್ದೇವೆ.
ಡಾ.ದೊಡ್ಡಪ್ಪ ಹೂಗಾರ ತಹಶೀಲ್ದಾರ, ಬೈಲಹೊಂಗಲ

Share
WhatsApp
Follow by Email