ಕರ್ನಾಟಕದಲ್ಲಿ `ಮರಣ ಮೃದಂಗ’ ಬಾರಿಸುವ ಕಾಲ ದೂರವಿಲ್ಲ : ಸರ್ಕಾರಕ್ಕೆ ಮಾಜಿ ಸಿಎಂ HDK ಎಚ್ಚರಿಕೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸರ್ಕಾರದ ಪ್ರತಿನಿಧಿಗಳು ಹೇಳುತ್ತಿದ್ದಾರೆ. ಆದರೆ ಕರ್ನಾಟಕ ಕೊರೊನಾ ಸೋಂಕು ಪೀಡಿತರ ಪಟ್ಟಿಯಲ್ಲಿ ದೇಶದಲ್ಲಿಯೇ 3 ನೇ ಸ್ಥಾನಕ್ಕೇರಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಸರ್ಕಾರ ಮೊದಲು ಹೆಚ್ಚಿನ ಪ್ರಮಾಣದಲ್ಲಿ ವೈದ್ಯಕೀಯ ಪರಿಕರಗಳನ್ನು ಹೊಂದಿಸಿಕೊಳ್ಳಬೇಕು.ವೈದ್ಯರಿಗೆ ಸೂಕ್ತ ಸವಲತ್ತುಗಳನ್ನು ನೀಡಬೇಕು.ಘೋಷಣೆಗಳು ಹೇಳಿಕೆಗಳು ಅಷ್ಟಕ್ಕೆ ಸೀಮಿತವಾಗಬಾರದು,ಕಾರ್ಯರೂಪಕ್ಕೆ ಬರಬೇಕು ಇಲ್ಲವಾದರೆ ಜಗತ್ತನ್ನೇ ಆವರಿಸಿರುವ ಮಹಾಮಾರಿ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ‘ಮರಣ ಮೃದಂಗ’ ಬಾರಿಸುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ವೈರಸ್‌ ಕುರಿತ ಸುದ್ದಿಗಳನ್ನು ಮಾಧ್ಯಮಗಳಿಗೆ ತಿಳಿಸುವ ವಿಚಾರದಲ್ಲಿ ಸರ್ಕಾರದಲ್ಲಿ ಎರಡು ಧ್ರುವಗಳಿವೆ ಎಂದು ನಾನು ಮೊದಲೇ ಹೇಳಿದ್ದೆ. ಕೊರೊನಾ ನಿಯಂತ್ರಣದ ಜವಾಬ್ದಾರಿ ಒಬ್ಬ ಸಚಿವರ ಹೆಗಲಿಗೆ ವಹಿಸುವ ಮೂಲಕ ಆ ಮುಸುಕಿನ ಗುದ್ದಾಟ ಬಯಲಾಗಿದೆ. ಇದು ಮಾಧ್ಯಮಗಳಲ್ಲೂ ವರದಿಯಾಗಿದೆ. ಈ ಸಂದರ್ಭದಲ್ಲಿ ಪ್ರತಿಷ್ಠೆ ಮುಖ್ಯವಲ್ಲ ಎಂದು ಹೇಳಿದ್ದಾರೆ.
ಒಂದು ಸಾವಿರ ವೆಂಟಿಲೇಟರ್, 10 ಲಕ್ಷ ಮಾಸ್ಕ್ , 5ಲಕ್ಷ ಕಿಟ್, 15ಲಕ್ಷ ತ್ರೀ ಲೇಯರ್‌ ಮಾಸ್ಕ್‌ ಖರೀಸುವುದಾಗಿ ಸರ್ಕಾರ ಹೇಳಿ ವಾರವಾಯ್ತು. ಒಂದು ವಾರದಲ್ಲಿ ಸೋಂಕು ತೀವ್ರಗತಿಯಲ್ಲಿ ಏರಿದೆ. ಆದರೆ ಸರ್ಕಾರ ಹೇಳಿರುವುದೆಲ್ಲವೂ ಕಾರ್ಯಗತವಾಗಿದೆಯೇ? ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವ ಸೋಂಕಿನ ವಿರುದ್ಧ ಇಷ್ಟು ನಿಧಾನದ ಕಾರ್ಯಾಚರಣೆ ಸರಿಯೇ? ಎಂದು ಪ್ರಶ್ನಿಸಿದ್ದಾರೆ
Share
WhatsApp
Follow by Email