ಎರಡನೇ ವಿಶ್ವ ಕನ್ನಡ ಹಬ್ಬದ ಪೋಸ್ಟರ್ ಬಿಡುಗಡೆ

ಬೆಂಗಳೂರು, ಸೆ. ೫: ಕನ್ನಡ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವ ಸದುದ್ದೇಶದಿಂದ ‘ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ ವತಿಯಿಂದ ಸಿಂಗಾಪುರದಲ್ಲಿ ೨೦೨೩ನೇ ಸಾಲಿನ “ಎರಡನೇ ಅಂತಾರಾಷ್ಟ್ರೀಯ ವಿಶ್ವ ಕನ್ನಡ ಹಬ್ಬ ಹಾಗೂ “ಅಂತಾರಾಷ್ಟ್ರೀಯ ವಿಶ್ವಮಾನ್ಯ ಪ್ರಶಸ್ತಿ ಪ್ರಧಾನ” ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಕಾರ್ಯಕ್ರಮದ ಮೊದಲ ಪೋಸ್ಟರ್ ಬಿಡುಗಡೆಯನ್ನು ವಿಜಯನಗರದಲ್ಲಿರುವ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಎರಡನೇ ವಿಶ್ವ ಕನ್ನಡ ಹಬ್ಬ ಯಾವುದೇ ವಿಗ್ನವಿಲ್ಲದೆ ಸುಸೂತ್ರವಾಗಿ ನೆರವೇರಲಿ ಎಂಬ ಆಶಯದಿಂದ ಪೂಜೆಯನ್ನು ಹಮ್ಮಿಕೊಂಡು ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಯಿತು. ಅನಂತರ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರು, ನಿರ್ಮಾಪಕರು, ಸಾಹಿತಿಗಳಾದ ಡಾ. ವಿ. ಮನೋಹರ್ ೨ನೇ ವಿಶ್ವ ಕನ್ನಡ ಹಬ್ಬದ ಮೊದಲ ಪೋಸ್ಟರ್ ಬಿಡುಗಡೆಗೊಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ತಾಯಿ ಭುವನೇಶ್ವರಿ ಆಶೀರ್ವಾದ ಹಾಗೂ ನನ್ನ ಸಹಕಾರ ಸದಾ ನಿಮಗಿದೆ ಎಂದರು.
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಶಿವಕುಮಾರ್ ನಗರ ನವಿಲೆಯವರು ಮಾತನಾಡಿ, ನಮ್ಮ ಸಂಸ್ಥೆ ಸದಾ ಕನ್ನಡವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ. ಕಳೆದ ವರ್ಷ ದುಬೈ ರಾಷ್ಟ್ರದಲ್ಲಿ ಆಚರಿಸಿದ ವಿಶ್ವ ಕನ್ನಡ ಹಬ್ಬ ವಿಶ್ವವನ್ನೇ ಬೆರಗುಗೊಳಿಸಿತ್ತು. ನಾವೆಲ್ಲರೂ ಒಟ್ಟಾಗಿ ಕನ್ನಡವನ್ನು ಉಳಿಸಿ ಬೆಳೆಸೋಣ. ಈ ಹಬ್ಬಕ್ಕೆ ಎಲ್ಲರ ಸಹಕಾರ ಅತ್ಯಗತ್ಯ. ಎಲ್ಲರೂ ಕೈ ಜೋಡಿಸಿ ಸಹಕರಿಸಬೇಕು ಎಂದರು.
ಸಂಪಾದಕರಾದ ಪದ್ಮ ನಾಗರಾಜ್, ಪ್ರಿಸ್ಟೀನ್ ಹಾಸ್ಪಿಟಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪ್ರಸನ್ನ , ವಿಜಯ ನರಸಿಂಹ, ಪ್ರತಿಭಾ ಪಟವರ್ಧನ್, ಧನಂಜಯ್, ಕಲಾನವೀನ್, ಹೇಮಂತ್, ಗಂಗರಾಜಮ್ಮ, ವೆಂಕಟೇಶ್,ಶ್ರುತಿ, ಕೀರ್ತಿ ಹಾಗೂ ಲತಾ ಮುಂತಾದವರು ಇದ್ದರು.

Share
WhatsApp
Follow by Email